ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು: ಹೊಸ ಅಪ್ಡೇಟ್ ಕೊಟ್ಟ ಸಚಿವ ಜೋಶಿ!
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮೊದಲು ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುತ್ತಿದೆ. ಈಗಾಗಲೇ ಹೈಕಮಾಂಡ ಕೆಲ ರಾಜ್ಯಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿದೆ. ಆದ್ರೆ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಗೊಂದಲಮಯವಾಗಿದೆ. ದಿನಕ್ಕೊಂದು ಬೆಳವಣಿಗೆ ಆಗುತ್ತಿರುವ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ.

ಧಾರವಾಡ, (ಆಗಸ್ಟ್ 03): ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಗೊಂದಲ ಇನ್ನೂ ಮುಂದುವರಿದಿದೆ. ರೆಬೆಲ್ ಟೀಂ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ವಿಜಯೇಂದ್ರ ಅವರನ್ನೇ ಮುಂದುವರಿಸಬೇಕೆಂದು ಮತ್ತೊಂದು ಬಣ ಬಿಗಿಪಟ್ಟು ಹಿಡಿದಿದೆ. ಹೀಗಾಗಿ ಬೇರೆ ಹಲವು ರಾಜ್ಯಗಳಲ್ಲಿ ಅಧ್ಯಕ್ಷರ ಘೋಷಣೆಯಾಗಿದ್ದರೂ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇನ್ನೂ ಹೆಸರು ಘೋಷಣೆಯಾಗದೇ ವಿಳಂಬವಾಗಿತ್ತು. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಅಪ್ಡೇಟ್ ಕೊಟ್ಟಿದ್ದು, ವಿಳಂಬವಾಗಿದ್ದ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ಶುರುವಾಗಿದೆ. ರಾಜ್ಯ ಬಿಜೆಪಿ ಘಟಕಕ್ಕೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಧಾರವಾಡದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಅಥವಾ ಬಿ.ವೈ.ವಿಜಯೇಂದ್ರ ಸೇರಿ ಯಾರೇ ಆಗಲಿ. ರಾಜ್ಯ ಬಿಜೆಪಿ ಘಟಕಕ್ಕೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ಆಗಲಿದೆ. ಎಲ್ಲಾ ರಾಜ್ಯಗಳಲ್ಲೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರ ಜೊತೆ ನಮ್ಮ ರಾಜ್ಯ ಬಿಜೆಪಿಗೂ ಅಧ್ಯಕ್ಷ ಆಯ್ಕೆ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್ಗೆ ಜೋಶಿ ಪ್ರಶ್ನೆ
ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷರಾಗಬೇಕೆಂಬ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ವಿ.ಸೋಮಣ್ಣ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ಅದರ ಬಗ್ಗೆ ವಿಚಾರ ಮಾಡುತ್ತಾರೆ. ನಮ್ಮ ರಾಷ್ಟ್ರೀಯ ನಾಯಕರು ಅದರ ಬಗ್ಗೆ ವಿಚಾರ ಮಾಡುತ್ತಾರೆ. ಈ ಬಾರಿ ನಾಮಿನೇಟ್ ಮಾಡಲ್ಲ. ಅವಿರೋಧವಾಗಿ ಈ ಬಾರಿ ಆಯ್ಕೆ ನಡೆಯಲಿದೆ. ಸೋಮಣ್ಣ ಆಗಲಿ ಅಥವಾ ವಿಜಯೇಂದ್ರ ಯಾರೇ ಆಗಲಿ. ಅವರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ, ಸೋಮಣ್ಣ ಎಲ್ಲಿಯೂ ಅಧ್ಯಕ್ಷ ನಾನೇ ಎಂದು ಹೇಳಿಲ್ಲ. ಯಾರನ್ನೇ ಮಾಡಬೇಕೆಂದರೂ ಸಹ ರಾಷ್ಟ್ರೀಯ ನಾಯಕರೇ ತೀರ್ಮಾನ ಮಾಡುತ್ತಾರೆ. ದೇಶದಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ಆಗುತ್ತಿದೆ. ಹಲವು ಚುನಾವಣಾ ಕಾರಣಗಳಿಂದ ಆಯ್ಕೆ ತಡವಾಗಿತ್ತು. ಇದೀಗ ಮತ್ತೆ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು
ಮುಂದಿನ ಕರ್ನಾಟಕ ಬಿಜೆಪಿ ಅಧ್ಯಕ್ಷರು ಎಂದು ಸದ್ಯ ಇಡೀ ಕಮಲ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆದ್ರೆ ಇದಕ್ಕೆ ಸ್ಪಷ್ಟವಾದ ಉತ್ತರ ಮಾತ್ರ ಸಿಗುತ್ತಿಲ್ಲ, ಕಳೆದ 6-7 ತಿಂಗಳಿನಿಂದ ಅಧ್ಯಕ್ಷರ ಆಯ್ಕೆಯ ಕಸರತ್ತು ನಡೆಯುತ್ತಲೇ ಇದೆ. ಆದ್ರೆ ಅಂತಿಮ ಮುದ್ರೆ ಮಾತ್ರ ಬೀಳುತ್ತಿಲ್ಲ, ಮೊದಲು ಜುಲೈನಲ್ಲಿ ಅಧ್ಯಕ್ಷರ ಹೆಸರು ಘೋಷಣೆ ಆಗುತ್ತೆ ಎಂದು ಹೇಳಲಾಗಿತ್ತು, ಆದಾದ ಬಳಿಕ ಪ್ರಧಾನಿ ಮೋದಿಯವರು ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಹೆಸರು ಘೋಷಣೆಯಾಗುತ್ತೆ ಎನ್ನಲಾಗಿತ್ತು. ಆದರೆ ರಾಷ್ಟ್ರೀಯ ಅಧ್ಯಕ್ಷ ಆಯ್ಕೆ ವಿಳಂಬವಾಗಿದ್ದರಿಂದ ಕರ್ನಾಟಕ ಅಧ್ಯಕ್ಷ ಆಯ್ಕೆ ಪ್ರತಿಕ್ರಿಯೆ ಸಹ ಅಲ್ಲಿಗೆ ಸ್ಟಾಪ್ ಆಗಿತ್ತು. ಆದ್ರೆ, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದಂತೆ ಮತ್ತೆ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರುವಾಗಲಿದ್ದು, ಕರ್ನಾಟಕ ಬಿಜೆಪಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.
ಮುಂದಿನ ಅಧ್ಯಕ್ಷರು ಯಾರಾಗಬಹುದು ಎನ್ನುವ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ದಿನಕ್ಕೊಂದು ಹೆಸರುಗಳು ಮುನ್ನಲೆಗೆ ಬರುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರು ಮಂಚೂಣಿಯಲ್ಲಿದ್ದರೂ, ಇನ್ನೂ ಹೆಸರು ಪ್ರಕಟವಾಗದೇ ಇರುವ ಹಿನ್ನಲೆಯಲ್ಲಿ, ಇದರಲ್ಲೂ ಗೊಂದಲವಿದೆ ಎಂದು ಹೇಳಲಾಗುತ್ತಿದೆ.
ವಿಜಯೇಂದ್ರ ಜೊತೆಗೆ ವಿ ಸೋಮಣ್ಣ, ಸುನಿಲ್ ಕುಮಾರ್ ಕಾರ್ಕಳ ಹೆಸರು ಸಹ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಆದ್ರೆ, ರಾಜ್ಯಾಧ್ಯಕ್ಷ ಆಯ್ಕೆ ತಾತ್ಕಾಲಿಕವಾಗಿ ಅಲ್ಲಿಗೆ ನಿಂತಿತ್ತು. ಆದ್ರೆ, ಇದೀಗ ಮತ್ತೆ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಕರ್ನಾಟಕ ಬಿಜೆಪಿ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ.




