ದೆಹಲಿಯಲ್ಲಿ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಕಿವಿಮಾತು: ಪಾಠಕ್​ ಶಿಸ್ತಿನ ಪಾಠ

| Updated By: Ganapathi Sharma

Updated on: Dec 05, 2024 | 7:45 AM

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊನೆಗೂ ಶಿಸ್ತು ಸಮಿತಿಗೆ ಉತ್ತರ ಕೊಟ್ಟಿದ್ದಾರೆ. ಈ ವೇಳೆ ದೆಹಲಿಯಲ್ಲಿ ಯತ್ನಾಳ್‌ಗೆ ಹೈಕಮಾಂಡ್​ ನಾಯಕರು ಕಿವಿಮಾತು ಹೇಳಿದ್ದು, ಓಂ ಪಾಠಕ್​ ಶಿಸ್ತಿನ ಪಾಠ ಮಾಡಿದ್ದಾರೆ. ವಿವರ ಇಲ್ಲಿದೆ.

ದೆಹಲಿಯಲ್ಲಿ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಕಿವಿಮಾತು: ಪಾಠಕ್​ ಶಿಸ್ತಿನ ಪಾಠ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌
Follow us on

ಬೆಂಗಳೂರು, ಡಿಸೆಂಬರ್ 5: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಶಿಸ್ತಿನ ಪಾಠ ಮಾಡಿದ್ದಾರೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್​ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೇ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಬಂಡಾಯಕ್ಕೆ 6 ಪುಟಗಳ ಸುದೀರ್ಘ ಉತ್ತರ ನೀಡಿರುವ ಯತ್ನಾಳ್, ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​ಗೆ ಕಾರಣಗಳನ್ನು ಕೊಟ್ಟಿದ್ದಾರೆ.

ಶಿಸ್ತು ಸಮಿತಿಗೆ ಯತ್ನಾಳ್ ಉತ್ತರವೇನು?

ನಾನು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ವಕ್ಫ್​ ವಿರುದ್ಧ ಹೋರಾಟ ಮಾಡಿದ್ದೇನೆ. ವಕ್ಫ್ ಬೋರ್ಡ್ ರೈತರು, ಮಠಗಳ ಭೂಮಿ ಕಬಳಿಸುತ್ತಿರುವಾಗ ಸುಮ್ಮನಿರಲು ಸಾಧ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ವಕ್ಫ್ ಬೋರ್ಡ್ ವಿರುದ್ಧ ಹೋರಾಟಕ್ಕೆ ಮುಂದಾಗಲಿಲ್ಲ. ಹೀಗಾಗಿ ವಕ್ಫ್ ಬೋರ್ಡ್ ವಿರುದ್ಧ ನಾವು ತಾರ್ಕಿಕವಾಗಿ ಹೋರಾಟ ಮಾಡಿದ್ದೇವೆ. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಹೋರಾಟದಲ್ಲಿ ಪಕ್ಷ ಭಾಗಿಯಾಗಬೇಕಿತ್ತು. ನಾವು ಪಾದಯಾತ್ರೆಗೆ ಮುಂದಾಗಿದ್ದೆವು. ಆದರೆ, ಇದಕ್ಕೆ ವ್ಯವಸ್ಥಿತ ತಡೆಯೊಡ್ಡಲಾಯಿತು. ಬಿ.ವೈ.ವಿಜಯೇಂದ್ರರಿಂದ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಕೆಲವರನ್ನು ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ ಹೀಗಾಗಿ ಉಪಚುನಾವಣೆಲ್ಲಿ ಸೋಲಾಯಿತು. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಹಲವು ಕ್ಷೇತ್ರಗಳಲ್ಲಿ ಸೋಲಾಗಿದೆ. ಬಿಎಸ್​ವೈ ವಿರುದ್ಧ ಹಲವು ಕೇಸ್​ಗಳಿವೆ. ಹೀಗಾಗಿ ಕಾಂಗ್ರೆಸ್ ಜೊತೆಗೆ ಅವರಿಗೆ ಹೊಂದಾಣಿಕೆ‌ ಅನಿವಾರ್ಯವಾಗಿದೆ. ನನ್ನ ಕಾರ್ಖಾನೆ ಬಂದ್ ಮಾಡಿಸಿದರು. ಆದರೂ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಹಿಂದುತ್ವವನ್ನ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದೇವೆ, ಇದು ಪಕ್ಷದ ವಿರೋಧಿ ನಿಲುವೆ? ಎಂದು ಶಿಸ್ತು ಸಮಿತಿಗೆ ನೀಡಿದ ಉತ್ತರದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.

ಶಿಸ್ತು ಸಮಿತಿ ಮುಂದೆ ಉತ್ತರ ಕೊಟ್ಟು ನಗುನುಗತ್ತಲೇ ಹೊರ ಬಂದ ಯತ್ನಾಳ್, ನನ್ನ ನಗು ನೋಡಿದರೆ ಏನಾದರೂ ಆಗಿದೆ ಎಂದು ನಿಮಗೆ ಅನಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲ, ಒಳ್ಳೆಯ ಭವಿಷ್ಯವಿದೆ. ಶಾಂತವಾಗಿರಿ ಎಂದಿದ್ದಾರೆ.

ಈ ಮಧ್ಯೆ ವಿಪಕ್ಷ ನಾಯಕ ಅಶೋಕ್ ದಿಢರನೇ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಅಶೋಕ್, ಚೆಂಡು ಹೈಕಮಾಂಡ್ ಅಂಗಳದಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈ ಮಾತನ್ನು ದಿಲ್ಲಿಯಲ್ಲೇ ಸ್ವಾಗತಿಸಿದ ಯತ್ನಾಳ್: ಏಕಾಏಕಿ ಸೈಲೆಂಟ್​ ಆಗಿದ್ದೇಕೆ…?

ಇನ್ನು, ಮಾಜಿ ಸಿಎಂ ಡಿವಿ ಸದಾನಂದಗೌಡ, ಅಶಿಸ್ತು ತೋರಿದವರನ್ನು ಹೊರಗೆ ಹಾಕಿ ಎಂದಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ. ಯಾವುದೋ ಆಕ್ರೋಶದಲ್ಲಿ ಮಾತನಾಡಿದ್ದಾರೆ ಒಂದಾಗಿ ಹೋಗೋಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಹೀಗೆ ಯತ್ನಾಳ್ ನಮ್ಮವರೇ ಎನ್ನುತ್ತಿದ್ದಾಗಲೇ, ಅತ್ತ ದೆಹಲಿಯಲ್ಲಿದ್ದ ಯತ್ನಾಳ್ ಇದೇ ಬಿಎಸ್​ವೈ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ. ಶಿಸ್ತು ಸಮಿತಿ ಮುಂದೆ ಹಾಜರಾದ ಮೇಲೆ ಯತ್ನಾಳ್‌ ಕೊಂಚ ತಣ್ಣಗಾದಂತೆ ಕಾಣಿಸುತ್ತಿದೆ. ಆದರೆ, ಈ ಸಮರಕ್ಕೆ ಇದು ಕದನ ವಿರಾಮವೇ? ಅಲ್ಪವಿರಾಮವೇ ಎಂಬ ಅನುಮಾನ ಮೂಡಿರುವುದಂತೂ ನಿಜ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ