ಬಿಎಸ್ವೈ ಮಾತನ್ನು ದಿಲ್ಲಿಯಲ್ಲೇ ಸ್ವಾಗತಿಸಿದ ಯತ್ನಾಳ್: ಏಕಾಏಕಿ ಸೈಲೆಂಟ್ ಆಗಿದ್ದೇಕೆ…?
ಕರ್ನಾಟಕ ಬಿಜೆಪಿಯ ಬಣ ಬಡಿದಾಟ ತಾರಕಕ್ಕೇರಿದೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ಇದರ ಮೊದಲ ಹಂತವಾಗಿ ಕೇಂದ್ರ ಶಿಸ್ತು ಸಮಿತಿ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ಇದರ ಮಧ್ಯ ಇತ್ತ ಯಡಿಯೂರಪ್ಪ, ಯತ್ನಾಳ್ ನಮ್ಮವರೇ ಎಂದಿದ್ದಾರೆ. ಇದನ್ನು ಯತ್ನಾಳ್ ಸ್ವಾಗತಿಸಿದ್ದಾರೆ. ಈ ಮೂಲಕ ಯತ್ನಾಳ್ ಸೈಲೆಂಟ್ ಆದ್ರಾ?
ಬೆಂಗಳೂರು/ನವದೆಹಲಿ, (ಡಿಸೆಂಬರ್ 04): ಯತ್ನಾಳ್ ಹಾಗೂ ವಿಜಯೇಂದ್ರ ಬಣ ರಾಜಕೀಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ. ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದ ಯತ್ನಾಳ್ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ ಯತ್ನಾಳ್, ಇಂದು (ಡಿಸೆಂಬರ್ 04) ನವದೆಹಲಿಯಲ್ಲಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಬಿಚ್ಚಿಟ್ಟಿದ್ದಾರೆ. ಇದರ ಮಧ್ಯ ಇತ್ತ ಯಡಿಯೂರಪ್ಪ ಮಾತನಾಡಿ, ಯತ್ನಾಳ್ ಹೊರಗಿನವರಲ್ಲ, ನಮ್ಮವರೇ. ಯಾವುದೋ ಕಾರಣಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಕೂತು ಬಗೆಹರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅತ್ತ ದೆಹಲಿಯಲ್ಲಿ ಯತ್ನಾಳ್, ಬಿಎಸ್ವೈ ಮಾತನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಯತ್ನಾಳ್ ಸಾಫ್ಟ್ ಆದರಾ? ಎನ್ನುವ ಚರ್ಚೆಗಳು ಶುರುವಾಗಿವೆ.
ಯಡಿಯೂರಪ್ಪ ಹೇಳಿದ್ದೇನು?
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ. ಯತ್ನಾಳ್ ಹೊರಗಿನವರಲ್ಲ, ನಮ್ಮವರೇ. ಯಾವುದೋ ಕಾರಣಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಕೂತು ಬಗೆಹರಿಸುತ್ತದೆ. ಬರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ನಮ್ಮ ಶಾಸಕರು ಜಾಗೃತಿ ಮೂಡಿಸಲಿದ್ದಾರೆ. ಮುಡಾ ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಎಲ್ಲ ವಿವರಗಳು ಹೊರಗೆ ಬರುತ್ತಿವೆ ಎಂದು ಹೇಳಿದರು. ಈ ಮೂಲಕ ಬಿಎಸ್ವೈ ಪರೋಕ್ಷವಾಗಿ ಯತ್ನಾಳ್ ದಾರಿಗೆ ಬರಲಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಂಡಾಯ ಪಕ್ಷಕ್ಕೆ ಹಾನಿಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ಏನೇ ಭಿನ್ನಾಭಿಪ್ರಾಯವಿದ್ದರೂ ಎದುರುಬದುರು ಕೂತು ಚರ್ಚಿಸಿ, ಒಟ್ಟಾಗಿ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಿಲ್ಲಿಯಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿ ಮನೆಯೊಂದು ಎರಡು ಅಲ್ಲ, ಮೂರು ಬಾಗಿಲು…!
ಬಿಎಸ್ವೈ ಮಾತನ್ನು ದೆಹಲಿಯಲ್ಲಿ ಸ್ವಾಗತಿಸಿದ ಯತ್ನಾಳ್
ಇನ್ನು ಅತ್ತ ದೆಹಲಿಯಲ್ಲಿ ಬೀಡುಬಿಟ್ಟಿರುವ ಯತ್ನಾಳ್, ಯತ್ನಾಳ್ ಹೊರಗಿನವರಲ್ಲ, ನಮ್ಮವರೇ ಎನ್ನುವ ಯಡಿಯೂರಪ್ಪನವರ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರೆ. ಇಷ್ಟು ದಿನ ಯಡಿಯೂರಪ್ಪ ಕುಟುಂಬದ ವಿರುದ್ಧ ನನ್ನ ಹೋರಾಟ ಎನ್ನುತ್ತಿದ್ದ ಯತ್ನಾಳ್, ಇದೀಗ ಏಕಾಏಕಿ ಬಿಎಸ್ವೈ ಮೇಲೆ ಸಾಫ್ಟ್ ಕಾರ್ನರ್ ಆಗಿ ಮಾತನಾಡಿದ್ದು ಅಚ್ಚರಿಕೆ ಕಾರಣವಾಗಿದೆ.
ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಮುಂದೆ ಸ್ಪಷ್ಟನೆ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಈಗಾಗಲೇ ವಿಜಯೇಂದ್ರ ಮತ್ತು ಯತ್ನಾಳ್ ಬಣದ ನಡುವೆ ಹಾದಿ ರಂಪ ಬೀದಿ ರಂಪ ಆಗ್ತಿರುವಾಗಲೇ ಮತ್ತೊಂದು ಬಣ ಇದನ್ನ ಬಣ ಅಂತಾ ಹೇಳೋಕೆ ಆಗದೇ ಇದ್ರೂ, ಎರಡು ಬಣಗಳನ್ನ ಖಂಡಿಸುವ ತಟಸ್ಥನ ನಿಲುವಿನ ನಾಯಕರು ಮತ್ತೊಂದು ಕಡೆ ಇದ್ದಾರೆ. ಈ ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ಡಿ.ವಿ.ಸದಾನಂದಗೌಡರು ಮೊನ್ನೆಯಷ್ಟೇ ಯತ್ನಾಳ್ ವಿರುದ್ಧ ಗುಡುಗಿದ್ರು. ಇದೀಗ ವಿಜಯೇಂದ್ರ ಪರ ರೇಣುಕಾಚಾರ್ಯ ಟೀಂ ನಡೆಸ್ತಿರುವ ಸಭೆಗೂ ಈ ತಟಸ್ಥ ಬಣ ಆಕ್ಷೇಪ ವ್ಯಕ್ತಪಡಿಸಿದೆ.
ಶಿಸ್ತು ಸಮಿತಿ ಮುಂದೆ ಹೋಗಿ ಬಂದು ಯತ್ನಾಳ್ ಹೇಳಿದ್ದಿಷ್ಟು
1 ಗಂಟೆ 15 ನಿಮಿಷ ಕಾಲ ಎಲ್ಲ ಸವಿಸ್ತಾರವಾಗಿ ಹೇಳಿದ್ದಾನೆ. ನಾನು ಹೇಳಿರುವ ಎಲ್ಲವನ್ನೂ ಸ್ವೀಕರಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ತಾರೆ. ವಕ್ಫ್ ಬೋರ್ಡ್ ವಿರುದ್ಧದ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಪಕ್ಷದ ಸಂಘಟನೆಯಿಂದ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಭಾವನೆಗಳನ್ನು ನಾಯಕರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಯತ್ನಾಳ್ ನಮ್ಮವರೇ ಎಂದು ಬಿಎಸ್ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರ ಹೇಳಿಕೆ ಸ್ವಾಗತಿಸುತ್ತೇನೆ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ಇರಲು ಹೇಳಿದ್ದಾರೆ. ವಿಷಯವಾರು ಮಾತ್ರ ಮಾತನಾಡುವಂತೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದ ಮೇಲೆ ಯತ್ನಾಳ್ ಶಾಂತವಾದ್ರಾ? ಯಡಿಯೂರಪ್ಪನವರ ಕುಟುಂಬದ ಬಗ್ಗೆ ಬಹಿರಂಗ ಆರೋಪಗಳನ್ನು ಮಾಡುವುದನ್ನು ನಿಲ್ಲಿಸುತ್ತಾರಾ? ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ಗೆ ಬುದ್ಧಿ ಹೇಳಿ ಕಳಿಸಿದ್ಯಾ? ಹೀಗೆ ಹತ್ತಾರ ಪ್ರಶ್ನೆಗಳು ಉದ್ಭವಿಸಿವೆ.
ಯಾಕಂದ್ರೆ ಯತ್ನಾಳ್, ಮೊದಲ ಬಾರಿಗೆ ಯಡಿಯೂರಪ್ಪನವರ ಮಾತನ್ನು ಮುಕ್ತ ಮನಸ್ಸಿನಿಂದ ಸ್ವಾಗತ ಮಾಡಿದ್ದಾರೆ. ಇನ್ನು ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿಸ್ತು ಸಮಿತಿ ಯತ್ನಾಳ್ ಕಿವಿ ಹಿಂಡಿದಂತಿದೆ. ಹೀಗಾಗಿ ಅವರು ಏಕಾಏಕಿ ಸಾಫ್ಟ್ ಆಗಿದ್ದಾರೆ ಎಂದೆನಿಸುತ್ತಿದೆ.
ಒಟ್ಟಿನಲ್ಲಿ ಶಿಸ್ತು ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿ ಬಂದ ಬಳಿಕ ಯತ್ನಾಳ್ ಏಕಾಏಕಿ ಸೈಲೆಂಟ್ ಹಾಗೂ ಸಾಫ್ಟ್ ಆಗಿರುವುದು ಅಚ್ಚರಿಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Wed, 4 December 24