ದಿಲ್ಲಿಯಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿ ಮನೆಯೊಂದು ಎರಡು ಅಲ್ಲ, ಮೂರು ಬಾಗಿಲು…!
ಬಿಜೆಪಿಯ ಬಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಯತ್ನಾಳ್ ಬಣ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ರೆ. ಇನ್ನೊಂದು ಬಣ ವಿಜಯೇಂದ್ರ ಪರ ನಿಂತು, ಯತ್ನಾಳ್ ಬಣಕ್ಕೆ ಸವಾಲ್ ಎಸೆಯುತ್ತಿದೆ. ಈ ಮಧ್ಯೆ ತಟಸ್ಥ ಬಣವೊಂದು ಈ ಎರಡು ಬಣಗಳ ವಿರುದ್ಧ ಕಿಡಿ ಕಾರುತ್ತಿದೆ. ಈ ಮಧ್ಯೆ ಯತ್ನಾಳ್ ಇಂದು ಶಿಸ್ತು ಸಮಿತಿ ಮುಂದೆ ಹಾಜರಾಗುವ ಮೊದಲು ಸ್ಫೋಟಕ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಮತ್ತೊಂದೆಡೆ ಅಶೋಕ್ ದೆಹಲಿಗೆ ಹಾರಿರೋದು ಕುತೂಹಲ ಕೆರಳಿಸಿದೆ.
ಬೆಂಗಳೂರು/ನವದೆಹಲಿ, (ಡಿಸೆಂಬರ್ 04): ಬಿಜೆಪಿಯ ಬಣ ಬಡಿದಾಟ ತಾರಕಕ್ಕೇರಿದೆ. ಈ ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಚೆಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿ ಇದೆ. ಈಗಾಗಲೇ ವಿಜಯೇಂದ್ರ ಮತ್ತು ಯತ್ನಾಳ್ ಬಣದ ನಡುವೆ ಹಾದಿ ರಂಪ ಬೀದಿ ರಂಪ ಆಗುತ್ತಿರುವಾಗಲೇ ಮತ್ತೊಂದು ಬಣ ಹುಟ್ಟಿಕೊಂಡಿದೆ. ಇದನ್ನು ಬಣ ಎಂದು ಹೇಳುವುದಕ್ಕೆ ಆಗದೇ ಇದ್ದರೂ, ಎರಡು ಬಣಗಳನ್ನ ಖಂಡಿಸುವ ತಟಸ್ಥನ ನಿಲುವಿನ ನಾಯಕರು ಮತ್ತೊಂದು ಕಡೆ ಇದ್ದಾರೆ. ಈ ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ಡಿ.ವಿ.ಸದಾನಂದಗೌಡರು ಮೊನ್ನೆಯಷ್ಟೇ ಯತ್ನಾಳ್ ವಿರುದ್ಧ ಗುಡುಗಿದ್ದರು. ಇದೀಗ ವಿಜಯೇಂದ್ರ ಪರ ರೇಣುಕಾಚಾರ್ಯ ಟೀಂ ನಡೆಸುತ್ತಿರುವ ಸಭೆಗೂ ಈ ತಟಸ್ಥ ಬಣ ಆಕ್ಷೇಪ ವ್ಯಕ್ತಪಡಿಸಿದೆ.
ಯತ್ನಾಳ್ ಬಣ.. ವಿಜಯೇಂದ್ರ ಬಣ.. ತಟಸ್ಥ ಬಣ!
ಯತ್ನಾಳ್ ವರ್ಸಸ್ ವಿಜಯೇಂದ್ರ. ತಟಸ್ಥ ನಾಯಕರಿಗೆ ತಲೆಬಿಸಿ ತಂದಿದೆ. ಎರಡು ತಂಡಗಳ ನಡೆ ಬಗ್ಗೆ ತಟಸ್ಥ ನಾಯಕರಿಗೆ ಅಸಮಧಾನ ಹೊರ ಹಾಕಿದೆ. ಶಾಸಕ ಯತ್ನಾಳ್ ಟೀಮ್ ತಪ್ಪು ಮಾಡುತ್ತಿದೆ ಎಂದಾದರೆ, ಬಿ.ವೈ ವಿಜಯೇಂದ್ರ ನಿಷ್ಠರು ಮಾಡುತ್ತಿರುವುದು ಕೂಡಾ ತಪ್ಪೇ ಎಂದು ತಟಸ್ಥ ನಾಯಕರು ತಮ್ಮಲ್ಲೇ ಚರ್ಚೆ ಮಾಡುತ್ತಿದ್ದಾರೆ. ಅಲ್ಲೇ, ಎರಡೂ ಬಣಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ನಿನ್ನೆ (ಡಿಸೆಂಬರ್ 03) ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಖುದ್ದು ಮಾಜಿ ಸಿಎಂ, ಡಿ.ವಿ.ಸದಾನಂದಗೌಡ ಅವರೇ ಅಸಮಾಧಾನ ಹೊರಹಾಕಿದ್ದರು. ಇಂದು ಮಾಧ್ಯಮಗಳ ಮುಂದೆಯೂ ಇದೇ ಮಾತನ್ನ ಆಡಿರುವ ಡಿವಿಎಸ್. ಅಶಿಸ್ತು ತೋರಿದವರನ್ನ ಹೊರ ಹಾಕಿ ಎಂದು ಖಾರವಾಗೇ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್ ವಿರುದ್ಧವೂ ಇಲ್ಲ: ನೊಟೀಸ್ಗೆ ಸೀಮಿತವಾಗುತ್ತಾ ಕ್ರಮ?
ಇದು ಕೇವಲ ಡಿವಿಎಸ್ ಮಾತಲ್ಲ, ತಟಸ್ಥ ನಾಯಕರು ಮಾತು ಇದೇ ಆಗಿದೆ. ಈ ಮಧ್ಯೆ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಹೀಗಾಗಿ ದೆಹಲಿಯಲ್ಲಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಯತ್ನಾಳ್ ತಮ್ಮ ವಿವರಣೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಶಿಸ್ತು ಸಮಿತಿ ಮುಂದೆ ಹಾಜರಾಗುವ ಮುನ್ನ ಮಾತನಾಡಿರುವ ಯತ್ನಾಳ್. ‘ಶೋಕಾಸ್ ನೋಟಿಸ್ಗೆ 6 ಪುಟಗಳ ಉತ್ತರ ಸಿದ್ಧಪಡಿಸಿದ್ದೇನೆ’, ಕೇಂದ್ರ ಶಿಸ್ತು ಸಮಿತಿಗೆ ಉತ್ತರ ನೀಡುತ್ತೇನೆ. ಕುಟುಂಬ ರಾಜಕಾರಣ ವಿರುದ್ಧದ ಹೋರಾಟದಲ್ಲಿ ರಾಜಿ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಸಂಸದರು ನಡೆಸಿರುವ ಸಭೆ ಬಗ್ಗೆಯೂ ಮಾತನಾಡಿರುವ ಯತ್ನಾಳ್, ಉಚ್ಚಾಟನೆ ಪರಿಹಾರವಲ್ಲ ಎಂದು ಸಂಸದರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಯತ್ನಾಳ್ ಟೀಂ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಚರ್ಚೆ ಮಾಡಿದೆ. ನಿನ್ನೆ ಜೆಪಿಸಿ ಅಧ್ಯಕ್ಷ ಪಾಲ್ ಭೇಟಿಗೂ ಮುನ್ನ ಯತ್ನಾಳ್ ಟೀಂ ರಾಜನಾಥ್ ಸಿಂಗ್ ಭೇಟಿಯಾಗಿದೆ. ಇದು ಕುತೂಹಲ ಮೂಡಿಸಿದೆ. ಇನ್ನು ಯತ್ನಾಳ್ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿರುವ ವಿಜಯೇಂದ್ರ, ಡಿಸೆಂಬರ್ 7 ರಂದು ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಅವತ್ತು ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ.
ಭಿನ್ನಮತ ಶಮನಕ್ಕೆ ತಟಸ್ಥ ಗುಂಪು ಪಟ್ಟು
ಕರ್ನಾಟಕ ಬಿಜೆಪಿಯಲ್ಲಿನ ಭಿನ್ನಮತ ಶಮನ ಮಾಡುವಂತೆ ಕೆಲ ಹಿರಿಯ ತಟಸ್ಥ ನಾಯಕರು ಒತ್ತಾಯಿಸಿದ್ದಾರೆ. ನಿನ್ನೆ(ಡಿಸೆಂಬರ್ 03) ದೆಹಲಿಯಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಬಣದಲ್ಲಿ ಗುರುತಿಸಿಕೊಳ್ಳದ ಸಂಸದರಾದ ಈರಣ್ಣ ಕಡಾಡಿ, ಪ್ರಹ್ಲಾದ್ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಸಂಸದರು ಮಹತ್ವದ ಸಭೆ ನಡೆಸಿದ್ದು, ಕರ್ನಾಟಕ ಬಿಜೆಪಿಯಲ್ಲಿನ ಭಿನ್ನಮತ ಶಮನಗೊಳಿಸುವಂತೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಧಾ ಮೋಹನ್ ಅಗರವಾಲ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ರಾಜ್ಯ ಬಿಜೆಪಿ ಸಂಸದರ ಸಭೆ ಸಭೆಯ ಬಳಿಕ ಸಂಸದರಾದ ಬಸವರಾಜ ಬೊಮ್ಮಾಯಿ, ಡಾ. ಕೆ ಸುಧಾಕರ್ ಹಾಗೂ ಕೇಂದ್ರ ಸಚಿವ ವಿ ಸೋಮಣ್ಣ ಅವರು ಜೆಪಿ ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕುತೂಹಲ ಮೂಡಿಸಿದ ಅಶೋಕ್ ದಿಲ್ಲಿ ಭೇಟಿ
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ವಿಪಕ್ಷ ನಾಯಕ ಆರ್.ಅಶೋಕ್ಗೆ ಹೈಕಮಾಂಡ್ ದಿಲ್ಲಿಗೆ ಬರುವಂತೆ ದಿಢೀರ್ ಬುಲಾವ್ ನೀಡಿದೆ. ಹೀಗಾಗಿ ಅಶೋಕ್ ದೆಹಲಿಗೆ ಹಾರಿದ್ದು, ಏರ್ಪೋರ್ಟ್ನಿಂದ ನೇರವಾಗಿ ಸಂಸತ್ ಭವನಕ್ಕೆ ತೆರಳಿ ಅಲ್ಲಿ ನಾಯಕರನ್ನ ಭೇಟಿಯಾಗಲಿದ್ದು, ಪಕ್ಷದ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಇನ್ನು ಯತ್ನಾಳ್, ವಿಜಯೇಂದ್ರ ನಡುವಿನ ಗುದ್ದಾಟದ ಬಗ್ಗೆಯೂ ಹೈಕಮಾಂಡ್ ನಾಯಕರು ವಿವರಣೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಶೋಕ್ ದೆಹಲಿ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಅಶೋಕ್ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ನನಗೆ ಹೆಚ್ಚು ಮಾಹಿತಿ ಇಲ್ಲ ಎಂದಿದ್ದಾರೆ.
ಸದ್ಯ ಬಿಜೆಪಿಯ ಬಣ ಬಡಿದಾಟ ತಣ್ಣಗಾಗೋ ಲಕ್ಷಣಗಳು ಇಲ್ಲ. ಎರಡು ಟೀಂಗಳ ನಡೆ ವಿರುದ್ಧ ಪಕ್ಷದಲ್ಲೇ ತಟಸ್ಥ ನಾಯಕರು ಅಸಮಾಧಾನ ಹೊರ ಹಾಕುತ್ತಿರುವುದು ಮತ್ತೊಂದು ಕಿತ್ತಾಟಕ್ಕೆ ವೇದಿಕೆ ಆದ್ರೂ ಅಚ್ಚರಿಯಿಲ್ಲ.. ಈ ಮಧ್ಯೆ ವಿಜಯೇಂದ್ರ ಟೀಂ ವಕ್ಫ್ ವಿರುದ್ಧದ ಹೋರಾಟಕ್ಕೆ ಮತ್ತೊಂದು ಸುತ್ತಿನ ರಣಕಹಳೆ ಮೊಳಗಿಸಿದ್ದಾರೆ. ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ವಿಜಯೇಂದ್ರ ಚಾಲನೆ ಕೊಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ