Karnataka Breaking Kannada News Highlights: ಸಂಸದ ವಿ.ಶ್ರೀನಿವಾಸ ಪ್ರಸಾದ್ ಮನೆಗೆ ಬಿ.ವೈ.ವಿಜಯೇಂದ್ರ ಭೇಟಿ
ಕರ್ನಾಟಕದಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಫೋನ್ ಸಂಭಾಷಣೆಯ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿದ್ದು, ಇದಕ್ಕೆ ಸ್ವಪಕ್ಷದ ಹಲವು ನಾಯಕರೇ ಅಸಮಾಧಾನ ಹೊರ ಹಾಕಿದ್ದಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ನಾಡಿನಾದ್ಯಂತ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣದ ಮಾಹಿತಿ ಟವಿ9 ಡಿಜಿಟಲ್ನಲ್ಲಿ....
ಕರ್ನಾಟಕದಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಫೋನ್ ಸಂಭಾಷಣೆಯ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಕೇಳಿಬಂದ ವಿವೇಕಾನಂದ ಎಂಬ ಹೆಸರಿನ ವಿಚಾರವಾಗಿ ರಾಜಕೀಯ ಕೆಸೆರೆಚಾಟ ಶುರುವಾಗಿದೆ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಇನ್ನು ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿದ್ದು, ಇದಕ್ಕೆ ಸ್ವಪಕ್ಷದ ಹಲವು ನಾಯಕರೇ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಇಂದು ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ನಾಡಿನಾದ್ಯಂತ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ….
LIVE NEWS & UPDATES
-
Karnataka News Live: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು; ಎಲ್ಇಡಿ ಪರದೆಗೆ ಕಲ್ಲು ತೂರಿದ ಕಿಡಿಗೇಡಿಗಳು
ವಿಜಯನಗರ: ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಹಿನ್ನಲೆ ಎಲ್ಇಡಿ ಪರದೆಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಸೋಲನ್ನು ಸಹಿಸಿಕೊಳ್ಳದೇ ಕೊನೆಯ ಓವರ್ ವೇಳೆ ಕಲ್ಲು ಎಸೆದಿದ್ದಾರೆ.
-
Karnataka News Live: ಕುಂಬಾರ ಪೇಟೆ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ; 6 ನೇ ಮಹಡಿಗೂ ಆವರಿಸಿದ ಬೆಂಕಿ
ಬೆಂಗಳೂರು: ಕುಂಬಾರ ಪೇಟೆ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ‘ಕಟ್ಟಡದ 6 ನೇ ಮಹಡಿಗೂ ಬೆಂಕಿ ಹೊತ್ತಿಕೊಂಡಿದೆ. ಈ ಹಿನ್ನಲೆ ಅಕ್ಕ-ಪಕ್ಕದ ಬಿಲ್ಡಿಂಗ್ನ ಕೋಣೆಯಲ್ಲೂ ಹೊಗೆ ವ್ಯಾಪಿಸಿದೆ. ಮಧ್ಯಾಹ್ನ 3 ಗಂಟೆಯಿಂದ ಕಟ್ಟಡ ಹೊತ್ತಿ ಉರಿಯುತ್ತಿದ್ದು, ಅಗ್ನಿ ಶಾಮಕ ದಳದವರು ಅಗ್ನಿ ಆರಿಸಲು ಪ್ರಯತ್ನಿಸಿದರೂ ಬೆಂಕಿ ಆರುತ್ತಿಲ್ಲ.
-
Karnataka News Live: ಸಂಸದರ ಮನೆಗೆ ಬಿ.ವೈ ವಿಜಯೇಂದ್ರ ಭೇಟಿ
ಮೈಸೂರು: ಸಂಸದ ವಿ ಶ್ರೀನಿವಾಸ ಪ್ರಸಾದ್ ಮನೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಪ್ರಸಾದ್ ನಿವಾಸದಲ್ಲಿ ಭೇಟಿಯಾಗಿ ಪ್ರಸಾದ್ ಅವರಿಗೆ ಕೈ ಮುಗಿದು ಸಹಕಾರ ಕೋರಿದ್ದಾರೆ.
Karnataka News Live: ತಾಯಿ, ಮಗು ಸಜೀವ ದಹನ ಪ್ರಕರಣ; ಬೆಸ್ಕಾಂನ ಐವರು ಸಿಬ್ಬಂದಿ ಬಂಧನ
ಬೆಂಗಳೂರಿನ ಹೋಪ್ಫಾರಂ ಸಿಗ್ನಲ್ನಲ್ಲಿ ತಾಯಿ, ಮಗು ಸಜೀವ ದಹನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಸ್ಕಾಂನ ಐವರು ಸಿಬ್ಬಂದಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಸ್ಕಾಂನ ಇಇ ಶ್ರೀರಾಮ್, ಎಇಇ ಸುಬ್ರಹ್ಮಣ್ಯ, ಎಇ ಚೇತನ್, ಜೆಇ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜುನಾಥ್ ಬಂಧಿತರು.
Karnataka News Live: ಬೆಂಗಳೂರಿನ ಕುಂಬಾರಪೇಟೆಯ ಮಳಿಗೆಯೊಂದರಲ್ಲಿ ಅಗ್ನಿ ಆಕಸ್ಮಿಕ
ಬೆಂಗಳೂರು: ನಗರದ ಕುಂಬಾರಪೇಟೆಯ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟ ಮಳಿಗೆಯ ಪ್ಲಾಸ್ಟಿಕ್ ಗೋದಾಮಿನ 3, 4ನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. 5 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಕುಂಬಾರಪೇಟೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ.
Karnataka News Live: ಸುತ್ತೂರು ಶಾಖಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ
ಮೈಸೂರು: ಸುತ್ತೂರು ಶಾಖಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದ್ದಾರೆ. ಸುತ್ತೂರು ಶ್ರೀಗಳಿಗೆ ವಿವಿಧ ಫಲಗಳನ್ನು ಅರ್ಪಿಸಿ, ಆಶೀರ್ವಾದ ಪಡೆದಿದ್ದಾರೆ.
Karnataka News Live: ಬೆಂಗಳೂರಿನ ಹೋಪ್ಫಾರಂ ಸಿಗ್ನಲ್ನಲ್ಲಿ ತಾಯಿ, ಮಗು ಸಜೀವ ದಹನ; ಸಂಬಂಧಿಕರ ಪ್ರತಿಭಟನೆ
ಬೆಂಗಳೂರು: ನಗರದ ಹೋಪ್ಫಾರಂ ಸಿಗ್ನಲ್ನಲ್ಲಿ ತಾಯಿ, ಮಗು ಸಜೀವ ದಹನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳದಲ್ಲಿ ಮೃತ ಸೌಂದರ್ಯ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಡುಗೋಡಿ ಹೋಪ್ಫಾರಂ ಸಿಗ್ನಲ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ತಾಯಿ, ಮಗು ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka News Live: ವಿಷ ಸೇವಿಸಿ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನ
ಬಾಗಲಕೋಟೆ: ಮೇಲಾಧಿಕಾರಿಗಳ ಕಿರುಕುಳ ಹಿನ್ನಲೆ ವಿಷ ಸೇವಿಸಿ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ಡೀಪೋದಲ್ಲಿ ನಡೆದಿದೆ. ಮಲ್ಲು ಜ್ಯೊತಿಖಾನ್(41) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಚಾಲಕ ಕಂ ನಿರ್ವಾಹಕ ಪಾರಾಗಿದ್ದಾರೆ.
Karnataka News Live: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ಸಾವು; ಘಟನೆಗೆ ಕಾರಣರಾದ ಅಧಿಕಾರಿಗಳು ಅಮಾನತು
ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಗೆ ಕಾರಣರಾದ ಎಇ, ಎಇಇರನ್ನು ಅಮಾನತುಗೊಳಿಸಿದ್ದೇವೆ ಎಂದು ಇಂಧನ ಇಲಾಖೆಯ ಸಚಿವ ಕೆ.ಜೆ.ಜಾರ್ಜ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ ಎಂದಿದ್ದಾರೆ.
In a deeply unfortunate incident, a lady and a child have lost their lives to electrocution close to Hope Farm in Whitefield, Bengaluru. We have taken up an inquiry into the incident that has led to these unfortunate deaths and are awaiting the report. The line man, AE and AEE…
— KJ George (@thekjgeorge) November 19, 2023
Karnataka News Live: ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ
ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ ನೀಡಿದ್ದಾರೆ. ಬಿ ವೈ ವಿಜಯೇಂದ್ರ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿ, ಗಣಪತಿ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
Karnataka News Live: ವಿಶ್ವಕಪ್ ಫೈನಲ್ ಪಂದ್ಯ; ನಗರದ ಬಹುತೇಕ ರಸ್ತೆಗಳು ವಾಹನಗಳು ವಿರಳ
ಬೆಂಗಳೂರು: ಭಾರತ-ಆಸ್ಟ್ರೇಲಿಯಾ ನಡುವೆ ಹೈವೋಲ್ವೇಜ್ ವಿಶ್ವಕಪ್ ಪಂದ್ಯಾವಳಿ ಹಿನ್ನಲೆ ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಸದಾ ವಾಹನಗಳಿಂದ ಟ್ರಾಫಿಕ್ ಜಾಮ್ ಆಗುವ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲೂ ಕೂಡ ಬೆರಳೆಣಿಕೆಯಷ್ಟು ವಾಹನಗಳು ಸಂಚರಿಸುತ್ತೀವೆ.
Karnataka News Live: ದೇವನಹಳ್ಳಿಯಲ್ಲಿ 200 ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನ ಕಟಾವು ಮಾಡಿ ಕಿಡಿಗೇಡಿಗಳು ಪರಾರಿ
ದೇವನಹಳ್ಳಿ: ಬರದ ನಡುವೆ ಬೆಳೆ ಬೆಳೆದ ರೈತನಿಗೆ ಬರೆ ಬಿದ್ದಿದೆ. ರೈತನ ತೋಟಕ್ಕೆ ನುಗ್ಗಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, 200 ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ಕಟಾವು ಮಾಡಿ ಪರಾರಿಯಾಗಿದ್ದಾರೆ. ಲಕ್ಷಾಂತರ ಮೌಲ್ಯದ ದಾಳಿಂಬೆ ಗಿಡಗಳು ನಾಶದಿಂದ ರೈತ ಕಂಗಾಲಾಗಿದ್ದು, ಈ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಗ್ರಾಮದಲ್ಲಿ ನಡೆದಿದೆ.
Karnataka News Live: ಸದ್ಯ ರಾಜಕೀಯದ 20-20 ಮ್ಯಾಚ್ ಆಡುವ ಜವಾಬ್ದಾರಿ ಪಕ್ಷ ವಹಿಸಿದೆ; ಬಿವೈ ವಿಜಯೇಂದ್ರ
ಮೈಸೂರು: ಸದ್ಯ ರಾಜಕೀಯದ 20-20 ಮ್ಯಾಚ್ ಆಡುವ ಜವಾಬ್ದಾರಿ ಪಕ್ಷ ವಹಿಸಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಈ ಕಾರ್ಯದ ನಡುವೆ ಕ್ರಿಕೆಟ್ ನೋಡಲು ಸಮಯ ಆಗುತ್ತಿಲ್ಲ. ರಾಜ್ಯದ ಎಲ್ಲಾ ಕಡೆ ಓಡಾಡಿ ಪಕ್ಷವನ್ನು ಸಂಘಟಿಸುತ್ತೇನೆ ಎಂದರು.
Karnataka News Live: KRS ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರ ಸಾವು
ಮಂಡ್ಯ: KRS ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಲಾಶಯದ ನೀರಿನಲ್ಲಿ ಆಟವಾಡುವ ವೇಳೆ ದುರ್ಘಟನೆ ನಡೆದಿದೆ.
Karnataka News Live: ಮದುವೆ ಮನೆಯಲ್ಲಿ ನವ ದಂಪತಿಯಿಂದ ಭಾರತ ತಂಡಕ್ಕೆ ಶುಭಾಶಯ
ಚಿಕ್ಕೋಡಿ: ಭಾರತ v/s ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಮದುವೆ ಮನೆಯಲ್ಲಿ ನವ ದಂಪತಿಯಿಂದ ಭಾರತ ಕ್ರಿಕೇಟ್ ತಂಡಕ್ಕೆ ಶುಭಾಶಯಕೋರಿದರು. ಅಥಣಿ ಪಟ್ಟಣದಲ್ಲಿ ಕೌಲಾಪೂರ ಹಾಗೂ ಮುದ್ದಾಪೂರ ಕುಟುಂಬದ ಮದುವೆ ಸಮಾರಂಭ ನಡೆದಿದೆ. ಟೀಂ ಇಂಡಿಯಾ ಗೆಲುವಿಗಾಗಿ ನವೀನ ಹಾಗೂ ಸ್ನೇಹಾ ನವದಂಪತಿ ಟೀಮ್ ಇಂಡಿಯಾ ಆಟಗಾರರ ಭಾವಚಿತ್ರದ ಬ್ಯಾನರ್ ಹಿಡಿದು ವಿಶೇಷ ಶುಭಾಶಯಕೋರಿದರು.
Karnataka News Live: ಅಂಧ ಮಕ್ಕಳಿಂದಲೂ ಟೀಮ್ ಇಂಡಿಯಾಗೆ ಶುಭಹಾರೈಕೆ
ಗದಗ: ಭಾರತ್ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್ ಪೈನಲ್ ಪಂದ್ಯ ಹಿನ್ನೆಲೆಯಲ್ಲಿ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಅಂಧ ಮಕ್ಕಳು ಟೀಮ್ ಇಂಡಿಯಾಗೆ ಶುಭಹಾರೈಸಿದರು. ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ಟೀ ಶರ್ಟ್ ತೊಟ್ಟು, ಮುಖಕ್ಕೆ ತ್ರೀವರ್ಣ ಬಣ್ಣ ಹಚ್ಚಿಕೊಂಡು ಶುಭಾಶಯ ಕೋರಿದರು.
Karnataka News Live: ಭಾರತ ಇಂದು ಗೆದ್ದೆ ಗೆಲ್ಲತ್ತೆ, ಮ್ಯಾಚ್ ಒನ್ ಸೈಡ್ ಆಗತ್ತೆ; ಸಂತೋಷ ಲಾಡ್
ಹುಬ್ಬಳ್ಳಿ: ಭಾರತ ಇಂದು ಗೆದ್ದೆ ಗೆಲ್ಲತ್ತೆ. ನನ್ನ ಅಭಿಪ್ರಾಯದಂತೆ ಮ್ಯಾಚ್ ಒನ್ ಸೈಡ್ ಆಗತ್ತೆ ಎಂದ ಲಾಡ್. ನಮ್ಮ ಬೌಲಿಂಗ್ ಬಹಳ ಸ್ಟ್ರಾಂಗ್ ಇದೆ. ಮೇಲ್ನೋಟಕ್ಕೆ ಬ್ಯಾಟಿಂಗ್ ಪಿಚ್ ಅನ್ನೋ ತರಹ ಕಂಡು ಬಂದರೂ, ಭಾರತ ಗೆಲ್ಲುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
Karnataka News Live: ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದಲ್ಲಿ ವಿಶೇಷ ಪೂಜೆ
ರಾಮನಗರ: ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಕ್ರಿಕೇಟ್ ಅಭಿಮಾನಿಗಳು, ಮಕ್ಕಳು ವಿಶೇಷ ಪೂಜೆ ಸಲ್ಲಿಸಿದರು. ಬಾಲ್, ಬ್ಯಾಟ್ಗಳನ್ನ ದೇವರ ಮುಂದೆ ಇಟ್ಟು ಪೂಜೆ, ಈಡುಗಾಯಿ ಒಡೆದು ಭಾರತ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಗೆದ್ದು ಬಾ ಭಾರತ ಎಂದು ಘೋಷಣೆ ಕೂಗಿ ಶುಭಹಾರೈಸಿದರು.
Karnataka News Live: ಪಂದ್ಯ ವೀಕ್ಷಣೆಗೆ ಮಡಿಕೇರಿಯಲ್ಲಿ ಕ್ರೀಡಾ ಇಲಾಖೆಯಿಂದ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ
ಮಡಿಕೇರಿ: ಭಾರತ-ಆಸ್ಟೇಲಿಯಾ ಹೈ ವೊಲ್ಟೇಜ್ ಮ್ಯಾಚ್ ಹಿನ್ನೆಲೆಯಲ್ಲಿ ಮ್ಯಾಚ್ ವೀಕ್ಷಣೆಗೆ ಮಡಿಕೇರಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಎಲ್ಇಡಿ ವಾಲ್ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
Karnataka News Live: ಆಶ್ರಯ ಕಮಿಟಿ ಅಧ್ಯಕ್ಷರು ಕೆಡಿಪಿ ಸಭೆ ಮಾಡಬಹುದಾ? ಕುಮಾರಸ್ವಾಮಿ
ಚಿಕ್ಕಮಗಳೂರು: ನಿಮ್ಮ ಮಗನನ್ನು ಆಶ್ರಯ ಕಮಿಟಿ ಅಧ್ಯಕ್ಷರಾಗಿ ಮಾಡಿದ್ದೀರಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆಶ್ರಯ ಕಮಿಟಿ ಅಧ್ಯಕ್ಷರು ಅಧಿಕಾರಿಗಳನ್ನು ಕರೆದು ಸಭೆ ಮಾಡಬಹುದಾ? ‘ಹಲೋ ಅಪ್ಪಾ’ ಹೇಳಿಕೆಗೆ ಸ್ಪಷ್ಟನೆ ನೀಡಲು ಪರದಾಡುತ್ತಿದ್ದಾರೆ. ಎರಡು ದಿನದಿಂದ ಅವರ ಗೋಳಾಟ ನೋಡಿದ್ದೇನೆ. ನಿಮ್ಮ ಮಗ ರಾಜಕೀಯ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರಿಂದ ರಾಜಕೀಯ ಮಾಡಿಸಿ ನಾವು ಬೇಡ ಅನ್ನುವುದಿಲ್ಲ. ಆಶ್ರಯ ಸಮಿತಿ ಸದಸ್ಯರು ಕೆಡಿಪಿ ಸಭೆ ನಡೆಸುವ ಅಧಿಕಾರ ಇರುತ್ತಾ? ಕ್ಷೇತ್ರ ನೋಡಿಕೊಳ್ಳಲು ಆಶ್ರಯ ಸಮಿತಿ ಸದಸ್ಯ ಮಾಡಿದ್ದೇವೆ ಅನ್ನುತ್ತೀರಿ. ನಿವೇಶನ ಕೊಡುವ ಕುರಿತು ಆಶ್ರಯ ಕಮಿಟಿ ಸದಸ್ಯ ಸಭೆ ಮಾಡಬಹುದು. ಅದನ್ನು ಬಿಟ್ಟು ಕೆಡಿಪಿ ಸಭೆ, ಅಧಿಕಾರಿಗಳ ಸಭೆ ನಡೆಸಬಹುದಾ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
Karnataka News Live: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಕುಮಾರಸ್ವಾಮಿ
ಚಿಕ್ಕಮಗಳೂರು: ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಜಾಹೀರಾತು ಪ್ರಕಟಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಜಾಹೀರಾತು ಪ್ರಕಟಿಸಿದ್ದೀರಿ. ಜನ ನೆಮ್ಮದಿಯಿಂದ ಇದ್ದಾರಾ ಇಲ್ಲ ಅಂತ ಜಾಹೀರಾತನಿಂದ ತಿಳಿಯಲ್ಲ. ರಾಜ್ಯದಲ್ಲಿ ಅಕ್ರಮಗಳು, ಅಪರಾಧ ಚಟುವಟಿಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
Karnataka News Live: ಭಾರತ ತಂಡಕ್ಕೆ ಶುಭ ಹಾರೈಸಿದ ಹೆಚ್ಡಿ ಕುಮಾರಸ್ವಾಮಿ
ಚಿಕ್ಕಮಗಳೂರು: ಇವತ್ತಿನ ದಿನ ಭಾರತದ ದೇಶಕ್ಕೆ ವಿಶೇಷ ದಿನ. ಪ್ರತಿಯೊಂದು ಕುಟುಂಬಗಳು ಕ್ರೀಡಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಮ್ಮ ದೇಶದ ಕ್ರಿಕೆಟ್ ಆಟಗಾರರಿಗೆ ವಿಶ್ವಕಪ್ನಲ್ಲಿ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಲು ಶುಭ ಹಾರೈಕೆಗಳು ಬರುತ್ತಿವೆ. ಪ್ರತಿ ಕುಟುಂಬ, ಪ್ರತಿ ನಾಗರಿಕರ ಕ್ರೀಡಾಪಟುಗಳಿಗೆ ವಿಶೇಷ ಹಾರೈಕೆಗಳನ್ನು ನಾನು ಎಂದು ನೋಡಿಲ್ಲ. ನಮ್ಮ ಟೀಂಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮೊದಲ ಬಾರಿಗೆ 10 ಪಂದ್ಯಗಳನ್ನು ಭಾರತ ಗೆದ್ದಿದೆ. 12 ವರ್ಷಗಳಿಂದ ಭಾರತ ಕಾಯುತ್ತಿದ್ದ ಗುರಿಯನ್ನ ಇವತ್ತು ತಲುಪಲಿ ಎಂದು ಶುಭ ಹಾರೈಕೆಯನ್ನು ಮಾಡುತ್ತೇನೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.
Karnataka News Live: ಭಾರತ ತಂಡಕ್ಕೆ ಶುಭ ಹಾರೈಸಿದ ಬಂಡೆಪ್ಪ ಕಾಶೆಂಪೂರ್
ಚಿಕ್ಕಮಗಳೂರು: ಇಂಡೋ-ಆಸೀಸ್ ವರ್ಲ್ಡ್ ಕಪ್ ಫೈನಲ್ ಮ್ಯಾಚ್ಗೆ ಜೆಡಿಎಸ್ ಮುಖಂಡರು ಶುಭ ಹಾರೈಸಿದ್ದಾರೆ. ಇವತ್ತು ಭಾರತದ ದೇಶದಲ್ಲಿ ಇತಿಹಾಸಿಕ ದಿನ. ಎರಡು ಬಾರಿ ಭಾರತ ಕಪ್ ಗೆದ್ದಿದ್ದೇವೆ. ಇಂದು ಮೂರನೇ ಬಾರಿ ಗೆಲ್ಲತ್ತೆ. ಒಂದು ಮ್ಯಾಚ್ ಸೋಲದೆ ಭಾರತ ಟೀಂ ದಾಖಲೆ ಬರೆದಿದೆ. ಜೆಡಿಎಸ್ ಪಕ್ಷದ ಪರವಾಗಿ ನಮ್ಮ ಟೀಂಗೆ ಶುಭಾಶಯ ಕೋರುತ್ತೇವೆ. ಭಾರತ ಗೆದ್ದು ಇತಿಹಾಸ ಬರೆಯುತ್ತದೆ ಎಂದು ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದರು.
Karnataka News Live: ಮೈಸೂರು: ಜನಪದ ಹಾಡಿನ ಮೂಲಕ ಶುಭ ಹಾರೈಕೆ
ಮೈಸೂರು: ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಮೈಸೂರಿನ ಜನಪದ ಗಾಯಕ ದೇವಾನಂದ ವರಪ್ರಸಾದ್ ಜನಪದ ಹಾಡಿನ ಮೂಲಕ ಶುಭ ಹಾರೈಸಿದ್ದಾರೆ. ಗೆದ್ದೇ ಗೆಲ್ಲುತ್ತೇ ಭಾರತ ಗೆದ್ದೇ ಗೆಲ್ಲುತ್ತೇ ಎಂದು ರಾಗ ಸಂಯೋಜನೆ ಮಾಡಿ ದೇವಾನಂದ ವರಪ್ರಸಾದ್ ಹಾಡಿ ಶುಭಕೋರಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೇವಾನಂದ ಹಾಡು ವೈರಲ್ ಆಗುತ್ತಿದೆ.
Karnataka News Live: ಆನೇಕಲ್: ಕಂಬದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ
ಆನೇಕಲ್: ಭಾರತ ವಿಶ್ಕಪ್ ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ಆನೇಕಲ್ ಪಟ್ಟಣದ ಕಂಬದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದು ಪ್ರಾರ್ಥಿಸಿದರು. ಎರಡು ಬಾರಿ ಈಗಾಗಲೇ ಭಾರತ ವಿಶ್ವಕಪ್ ಗೆದ್ದಿದೆ, ಭಾರತ ತಂಡದಲ್ಲಿ ಅದ್ಭುತವಾದ ಆಟಗಾರರು ಇದ್ದಾರೆ. ಈ ನಿಟ್ಟಿನಲ್ಲಿ ಭಾರತ ತಂಡಕ್ಕೆ ನಾವೆಲ್ಲರೂ ಶುಭಹಾರೈಸುತ್ತೇವೆ ಎಂದು ಘೋಷಣೆ ಕೂಗಿದರು.
Karnataka News Live: ಚಾಮರಾಜನಗರ: ಅಯ್ಯಪ್ಪ ಭಕ್ತರಿಂದ ವಿಶೇಷ ಪೂಜೆ
ಚಾಮರಾಜನಗರ: ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ಭಾರತದ ಗೆಲುವಿಗಾಗಿ ಕೇರಳದ ಗುರುವಾಯೂರಿನಲ್ಲಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ವಿಶೇಷ ಪೂಜೆ ನೆರವೇರಿಸಿದರು. ಹನೂರಿನ ಅಯ್ಯಪ್ಪ ಭಕ್ತರು ಗುರುವಾಯೂರು ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಟೀಂ ಇಂಡಿಯಾ ಹೆಸರಿನಲ್ಲಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹರಕೆ ಹೊತ್ತಿಕೊಂಡಿದ್ದಾರೆ.
Karnataka News Live: ಧಾರವಾಡದ ಯುವ ಡ್ಯಾನ್ಸ್ ಅಕ್ಯಾಡೆಮಿಯ ಮಕ್ಕಳಿಂದ ಶುಭ ಹಾರೈಕೆ
ಧಾರವಾಡ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕ್ರಿಕೇಟ್ ಪ್ರೇಮಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಎಲ್ಲೆಡೆ ಟೀಂ ಇಂಡಿಯಾಗೆ ಶುಭಾಶಯಗಳ ಸುರಿಮಳೆ ಆಗುತ್ತಿದ್ದು, ಗೆದ್ದುಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭಹಾರೈಸಲಾಗುತ್ತಿದೆ. ಧಾರವಾಡದ ಯುವ ಡ್ಯಾನ್ಸ್ ಅಕ್ಯಾಡೆಮಿಯ ಮಕ್ಕಳು ಜೀತೆಗಾ ಜೀತೆಗಾ ಭಾರತ್ ಜೀತೆಗಾ, ಗೆದ್ದು ಬಾ ಭಾರತ ಎಂದು ಶುಭ ಹಾರೈಸಿದ್ದಾರೆ
Karnataka News Live: ಬಿವೈ ವಿಜಯೇಂದ್ರ 2 ದಿನ ಮೈಸೂರು ಪ್ರವಾಸ
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಎರಡು ದಿನ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮತ್ತು ನಾಳೆ (ನ.19, 20) ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು 12 ಗಂಟೆಗೆ ಮೈಸೂರಿಗೆ ಆಗಮಿಸಲಿರುವ ಬಿ ವೈ ವಿಜಯೇಂದ್ರ, 1.50ಕ್ಕೆ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಲಿದ್ದಾರೆ. 2.30ಕ್ಕೆ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 3.40ಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸಂಜೆ 4 ಗಂಟೆಗೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿದಾನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುತ್ತಾರೆ. 5.10ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಕಾರ್ಯಕರ್ತರ ಸಭೆ, ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
Karnataka News Live: ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ; ಹೆಚ್ಸಿ ಮಹದೇವಪ್ಪ
ಮೈಸೂರು: ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ. ಚುನಾವಣೆಗೆ ಮೊದಲು ಮತ್ತು ನಂತರದಲ್ಲಿ ದಲಿತರಿಗೆ ಸ್ಥಾನ ನೀಡಿ ಎನ್ನುತ್ತಿದ್ದ ಬಿಜೆಪಿಗರು ವಿಪಕ್ಷೀಯ ಸ್ಥಾನಕ್ಕೆ ಅಥವಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನೇ ನೇಮಿಸಬಹುದು ಎಂದುಕೊಂಡಿದ್ದೆ. ಆದರೆ ಅದು ಹಾಗಾಗಲಿಲ್ಲ ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ ಎಂದು ಮತ್ತೊಮ್ಮೆಸಾಬೀತಾಯಿತು. #ದಲಿತ_ವಿರೋಧಿ_ಬಿಜೆಪಿ ಎಂದು ಡಾ. ಹೆಚ್ಸಿ ಮಹದೇವಪ್ಪ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ pic.twitter.com/zzLYkPS7Vj
— Dr H.C.Mahadevappa (@CMahadevappa) November 18, 2023
Published On - Nov 19,2023 8:01 AM