
ಬೆಂಗಳೂರು, ಜೂನ್ 6: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಸೃಷ್ಟಿಯಾಗಿದ್ದ ಖಾತೆ ಹಂಚಿಕೆ ಬಿಕ್ಕಟ್ಟು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆಯಿಂದ ಆರಂಭವಾದ ಭಿನ್ನಮತದ ಜ್ವಾಲೆಯನ್ನು ತಣಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಹಿರಿಯ ಸಚಿವ ಕೆಎಚ್ ಮುನಿಯಪ್ಪ ಅವರ ಮುನಿಸು ಸದ್ಯ ಶಮನಗೊಂಡಿದೆ. ಆದರೆ, ಮತ್ತೊಂದೆಡೆ ಮೊದಲ ಪಟ್ಟಿಯಲ್ಲಿ ಮಂತ್ರಿಗಿರಿ ಸಿಗದಿದ್ದಕ್ಕೆ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸುವ ಮೂಲಕ ಹೈಕಮಾಂಡ್‌ಗೆ ಹೊಸ ತಲೆನೋವು ತಂದಿಟ್ಟಿದ್ದಾರೆ.
ತಾವು 8 ಬಾರಿ ಗೆದ್ದಿದ್ದರೂ ತಮಗೆ ಜನರ ನೇರ ಸೇವೆಗೆ ಅವಕಾಶವಿಲ್ಲದ ಆಹಾರ ಖಾತೆ ನೀಡಲಾಗಿದೆ ಎಂದು ಕೆಂಡಕಾರಿದ್ದ ಸಚಿವ ಕೆಎಚ್ ಮುನಿಯಪ್ಪ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಮುನಿಯಪ್ಪ ಅವರೊಂದಿಗೆ ನೇರವಾಗಿ ಮಾತನಾಡಿ ಸಮಾಧಾನಪಡಿಸಿದ್ದಾರೆ. ಇದಕ್ಕೂ ಮುನ್ನ ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸತತ 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ರಾಹುಲ್ ಗಾಂಧಿ ಅವರ ಭರವಸೆಯ ಬಳಿಕ ‘ನಾನು ಸಂತೋಷವಾಗಿದ್ದೇನೆ’ ಎಂದು ಮುನಿಯಪ್ಪ ವರಸೆ ಬದಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಮುನಿಯಪ್ಪಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತ ಮುನಿಯಪ್ಪ ಅವರ ಮುನಿಸು ತಣ್ಣಗಾಗಿದ್ದರೆ, ಅತ್ತ ಮೊದಲ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಅವರ ಬೆಂಬಲಿಗರು ಸಿಡಿದೆದ್ದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ ಚಿಕ್ಕಮಗಳೂರು, ಹುಬ್ಬಳ್ಳಿ, ವಿಜಯನಗರ, ಮಂಡ್ಯ, ಹಾವೇರಿ, ದಾವಣಗೆರೆ, ತುಮಕೂರು ಹಾಗೂ ಕೊಪ್ಪಳ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಮೀರ್ ಪರ ಭಾರಿ ಪ್ರತಿಭಟನೆಗಳು ನಡೆದಿವೆ. ಜಮೀರ್ ವಿರುದ್ಧ ವೈರಲ್ ಆಗಿರುವ ಆಡಿಯೋ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಘೋಷಣೆ ಕೂಗಿರುವ ಬೆಂಬಲಿಗರು, 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದ ಸಚಿವ ಕೆಜೆ ಜಾರ್ಜ್ ಅವರ ಬೇಡಿಕೆಯಂತೆ ಕೆಪಿಸಿಎಲ್ (KPCL) ಎಂಡಿ ಹುದ್ದೆಗೆ ರಾಜೇಂದ್ರ ಚೋಳನ್ ಅವರ ನೇಮಕಾತಿ ಆದೇಶವನ್ನು ಹಿಂಪಡೆದು, ಗೌರವ್ ಗುಪ್ತಾ ಅವರನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದರಿಂದ ಜಾರ್ಜ್ ಸದ್ಯ ನಿರಾಳರಾಗಿದ್ದಾರೆ ಎನ್ನಲಾಗಿದೆ.
ಮೊದಲ ಪಟ್ಟಿಯಲ್ಲಿ ಸಚಿವರಾದವರಿಗೆ ಖಾತೆಯ ಚಿಂತೆಯಾದರೆ, ಉಳಿದ ಶಾಸಕರಿಗೆ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಆತುರ ಶುರುವಾಗಿದೆ. ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಚ್.ಕೆ.ಪಾಟೀಲ್, ಮಧು ಬಂಗಾರಪ್ಪ ಸೇರಿದಂತೆ ಪ್ರಮುಖರು ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ವಿಶ್ವಾಸ ವ್ಯಕ್ತಪಡಿಸಿದ್ದರೆ, ಮಾಜಿ ಸಚಿವೆ ಉಮಾಶ್ರೀ ಕೂಡ ರೇಸ್‌ನಲ್ಲಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್!
ಕಾಂಗ್ರೆಸ್‌ನ ಈ ಆಂತರಿಕ ಕಸರತ್ತನ್ನು ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಲೇವಡಿ ಮಾಡಿದ್ದು, ಕಾಂಗ್ರೆಸ್‌ನ ಕಿತ್ತಾಟ ಆ ಪಕ್ಷದ ಮೂಲ ಸಂಸ್ಕೃತಿ ಎಂದು ಹಳಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ