
ಬೆಂಗಳೂರು, ಜುಲೈ 22: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತೆ ಒಂದೆರಡು ದಿನ ಮುಂದೂಡಿಕೆಯಾಗಿದೆ. ಬುಧವಾರವೇ ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮೂಡಿದ್ದರೂ, ಹೈಕಮಾಂಡ್ ನಾಯಕರ ಲಭ್ಯತೆ ಕೊರತೆಯಿಂದ ಪ್ರಕ್ರಿಯೆ ಮುಂದಕ್ಕೆ ಸರಿದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು (ಜುಲೈ 22) ಬೆಂಗಳೂರಿಗೆ ಮರಳಲಿದ್ದು, ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ರಾತ್ರಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಧನದ ಬೆಳವಣಿಗೆಯಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸಂಪುಟ ವಿಸ್ತರಣೆಯನ್ನು ಮುಂದೂಡಲು ಇಷ್ಟವಿಲ್ಲ. ಆದರೂ, ಅಂತಿಮ ತೀರ್ಮಾನವು ಹೈಕಮಾಂಡ್ ಲೆಕ್ಕಾಚಾರದಂತೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ವೇಳೆ ಹಿರಿಯರು ಮತ್ತು ಕಿರಿಯರಿಗೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ತಿಳಿಸಿದರು. ಸಚಿವ ಸ್ಥಾನಕ್ಕೆ ಅರ್ಹರಾದ ಅನೇಕರು ಇದ್ದು, ಸಾಧ್ಯವಾದಷ್ಟು ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಆಶಯವಿದೆ ಎಂದೂ ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಸಭೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಕೆಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಬೆಳವಣಿಗೆಗಳು ಬದಲಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆಸುವ ಯೋಜನೆ ಹೊಂದಿದ್ದರು. ಆದರೆ ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆಗೆ ತೆರಳಿದ್ದರಿಂದ ಹೈಕಮಾಂಡ್‌ನ ಸಂಪೂರ್ಣ ಗಮನ ಆ ಬೆಳವಣಿಗೆಯತ್ತ ಕೇಂದ್ರೀಕೃತವಾಯಿತು. ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ತಡರಾತ್ರಿವರೆಗೂ ರಾಹುಲ್ ಗಾಂಧಿ ಪೊಲೀಸರ ವಶದಲ್ಲಿದ್ದ ಹಿನ್ನೆಲೆ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ, ನಂತರ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ ರಾಜ್ಯ ನಾಯಕರನ್ನು ದೆಹಲಿಗೆ ಕರೆಯಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಡಿ.ಕೆ. ಶಿವಕುಮಾರ್ ಅವರು ಶನಿವಾರ ಅಥವಾ ಸೋಮವಾರ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.
‘ಟಿವಿ9’ಗೆ ಲಭ್ಯವಾದ ಮಾಹಿತಿಯ ಪ್ರಕಾರ, ಹೊಸ ಮುಖಗಳು ಮತ್ತು ಅನುಭವಿ ನಾಯಕರಿಗೆ ಸಮಾನ ಆದ್ಯತೆ ನೀಡುವ ಸಾಧ್ಯತೆ ಇದೆ. ಸುಮಾರು 10 ಹೊಸಬರು ಮತ್ತು 10 ಹಿರಿಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯಬಹುದು. ಮುಸ್ಲಿಂ ಸಮುದಾಯದಿಂದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹ್ಮದ್ ಹಾಗೂ ಖನೀಜ್ ಫಾತಿಮಾ ಹೆಸರುಗಳು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಇವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಗಾಯತ ಸಮುದಾಯದಿಂದ ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತ್ ರಾಯಗೌಡ ಹಾಗೂ ಅಪ್ಪಾಜಿ ನಾಡಗೌಡ ಹೆಸರುಗಳು ಕೇಳಿಬರುತ್ತಿದ್ದು, ಮೂವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಕ್ಕಲಿಗ ಸಮುದಾಯದಿಂದ ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್ (ವಾಸು), ಶಿವಲಿಂಗೇಗೌಡ, ಚಲುವರಾಯಸ್ವಾಮಿ ಹಾಗೂ ಪ್ರಿಯಾ ಕೃಷ್ಣ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಇವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಹಿಳಾ ಕೋಟಾದಲ್ಲೂ ಈ ಬಾರಿ ಎರಡು ಅಥವಾ ಮೂರು ಸ್ಥಾನಗಳನ್ನು ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಎಂಎಲ್‌ಸಿ ಆರತಿ ಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ ಅವರ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ಒಟ್ಟಾರೆ, ಸಚಿವ ಸಂಪುಟ ವಿಸ್ತರಣೆ ಈ ವಾರದೊಳಗೆ ನಡೆಯುವ ಸಾಧ್ಯತೆ ಇದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:25 am, Wed, 22 July 26