ರಾಜ್ಯಾದ್ಯಂತ ಗಮನ ಸೆಳೆದಿದ್ದ ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಂಪುಟ, ಇಲ್ಲಿದೆ ಕೇಸಿನ ವಿವರ

ರಾಜ್ಯಾದ್ಯಂತ ಗಮನ ಸೆಳೆದಿದ್ದ 2003ರ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ವರ್ಮಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಗಳ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಈ ಸಂಬಂಧ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಅವರನ್ನು ಕರೆಯಿಸಿಕೊಂಡು ಮಾಹಿತಿ ಪಡೆದ ಮಹತ್ವದ ತೀರ್ಮಾನ ಕೈಗೊಂಡಿದೆ. ಏನಿದು ರಿಂಗ್ ರೋಡ್ ಕೇಸ್ ಎನ್ನುವ ಮಾಹಿತಿ ಇಲ್ಲಿದೆ.​​​​​

ರಾಜ್ಯಾದ್ಯಂತ ಗಮನ ಸೆಳೆದಿದ್ದ ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಂಪುಟ, ಇಲ್ಲಿದೆ ಕೇಸಿನ ವಿವರ
Ring Road Shubha
Edited By:

Updated on: Oct 15, 2026 | 4:08 PM

ಬೆಂಗಳೂರು, ಅಕ್ಟೊಬರ್ 15: ರಾಜ್ಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ರಿಂಗ್ ರೋಡ್​ ಶುಭಾ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. 2003ರಲ್ಲಿ ಸುದ್ದಿಯಾಗಿದ್ದ ಈ ಪ್ರಕರಣದ ಅಪರಾಧಿಗಳಾದ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ವರ್ಮಾ ಸಲ್ಲಿಸರೋ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡಿದೆ. ಭಾವಿ ಪತಿ ಗಿರೀಶ್ ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶುಭಾ ಹಾಗೂ ಡಿ. ಅರುಣ್ ವರ್ಮಾ ಕ್ಷಮಾದಾನ ಕೋರಿ ರಾಜ್ಯಪಾಲರ ಮುಂದೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ಕುರಿತು ಇಂದು (ಅಕ್ಟೋಬರ್ 15) ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದೆ. ಆದ್ರೆ, ಅಂತಿಮವಾಗಿ ಸಂಪುಟ ಸಭೆ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ , ಶುಭಾ ಶಂಕರ್ ಕ್ಷಮಾದಾನ ಅರ್ಜಿ ಸಂಪುಟ ಸಭೆ ತಿರಸ್ಕರಿಸಿದೆ. ಕ್ಷಮಾದಾನ ಅರ್ಜಿ ಇಲ್ಲಿನ ಕಾನೂನು ಚೌಕಟ್ಟಿನ ಒಳಗಿಲ್ಲ. ಕ್ಷಮಾದಾನ ಅರ್ಜಿ ತಿಸ್ಕರಿಸಿ ರಾಜ್ಯಪಾಲರಿಗೆ ಮಾಹಿತಿ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಚಿತ್ರದುರ್ಗ: ಯುವಕನಿಗೆ ಬಲವಂತವಾಗಿ ಮರ್ಮಾಂಗ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿಯರು

ಸಂಪುಟದಲ್ಲಿ ರಿಂಗ್​ ರೋಡ್​ ಶುಭಾ ಕೇಸ್ ಚರ್ಚೆ

ಭಾವಿ ಪತಿ ಗಿರೀಶ್ ಕೊಲೆ ಕೇಸ್​ನಲ್ಲಿ ಶುಭಾ ಶಂಕರನಾರಾಯಣ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶುಭಾ ಹಾಗೂ ಡಿ. ಅರುಣ್ ವರ್ಮಾ ಕ್ಷಮಾದಾನ ಕೋರಿ ರಾಜ್ಯಪಾಲರ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಸಂಪುಟ ಸಭೆಗೆ ಕರೆಯಿಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಬಳಿಕ ಕ್ಷಮಾದಾನ ಅರ್ಜಿಯನ್ನು ಸಂಪುಟ ತಿರಸ್ಕಾರ ಮಾಡಿದೆ.

ಏನಿದು ರಿಂಗ್ ರೋಡ್ ಪ್ರಕರಣ​?

2003ರಲ್ಲಿ ಬೆಂಗಳೂರಿನ ರಿಂಗ್ ರೋಡ್‌ನಲ್ಲಿ ನಡೆದ ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಗಿರೀಶ್ ಮತ್ತು ಶುಭಾ ಶಂಕರನಾರಾಯಣ ಅವರ ವಿವಾಹ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳ ನಡುವೆ ಹಿಂದಿನಿಂದಲೂ ಪರಿಚಯವಿತ್ತು. ಗಿರೀಶ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ,ಶುಭಾ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು. 2003ರ ನವೆಂಬರ್ 30ರಂದು ಇಬ್ಬರ ನಿಶ್ಚಿತಾರ್ಥವಾಗಿತ್ತು. ಆದರೆ ಶುಭಾ ತನ್ನ ಕಾಲೇಜಿನ ಜೂನಿಯರ್ ವಿದ್ಯಾರ್ಥಿಯಾಗಿದ್ದ ಅರುಣ್ ವರ್ಮಾ ಜೊತೆ ಪ್ರೀತಿಯ ಸಂಬಂಧ ಹೊಂದಿದ್ದರು ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

ಅರುಣ್ ಅವರನ್ನು ಮದುವೆಯಾಗುವ ಉದ್ದೇಶದಿಂದ ಗಿರೀಶ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬುದು ಪ್ರಕರಣದ ಪ್ರಮುಖ ಆರೋಪವಾಗಿತ್ತು. ಅದರಂತೆ 2003ರ ಡಿಸೆಂಬರ್ 3ರ ರಾತ್ರಿ ಗಿರೀಶ್ ತಮ್ಮ ಭಾವಿ ಪತ್ನಿ ಶುಭಾಳನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ವೀಕ್ಷಿಸುವ ಆಸೆಯನ್ನು ಶುಭಾ ವ್ಯಕ್ತಪಡಿಸಿದ್ದರಿಂದ, ಗಿರೀಶ್ ಅವರನ್ನು ರಿಂಗ್ ರೋಡ್‌ನ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದಿದ್ದರು. ಇಬ್ಬರೂ ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಮೇಲೆ ದಾಳಿ ನಡೆದಿತ್ತು.

ಆರೋಪಿಗಳು ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ ಅವರ ತಲೆಗೆ ಹೊಡೆದಿದ್ದರು ಎಂಬುದು ಪ್ರಕರಣದ ವಿವರಗಳಲ್ಲಿ ಉಲ್ಲೇಖವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಎ. ನಾನಯ್ಯ ಪ್ರಕರಣದ ತನಿಖೆ ನಡೆಸಿದ್ದರು. ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಪ್ರಮುಖ ಸುಳಿವುಗಳು ಲಭಿಸಿದ್ದವು.

ಜೀವಾವಧಿ ಶಿಕ್ಷೆ ವಿಧಿಸಿದ್ದ ಕೋರ್ಟ್

ಘಟನೆ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಕೆ.ಎ. ನಾಣಯ್ಯ ಅವರು ಚುರುಕಿನ ತನಿಖೆ ನಡೆಸಿದರು. ಆರಂಭದಲ್ಲಿ ಇದು ದರೋಡೆ ಅಥವಾ ಅಪರಿಚಿತರ ದಾಳಿ ಎಂದು ಬಿಂಬಿಸಲು ಯತ್ನಿಸಲಾಗಿತ್ತಾದರೂ, ಪೊಲೀಸರ ಕಟ್ಟುನಿಟ್ಟಿನ ವಿಚಾರಣೆ ವೇಳೆ ಶುಭಾಳ ರಹಸ್ಯ ಪ್ರೇಮ ಹಾಗೂ ಕೊಲೆಯ ಕರಾಳ ಸಂಚು ಬಯಲಾಯಿತು. ತನಿಖೆಯ ಬಳಿಕ ಪೊಲೀಸರು ಪ್ರಮುಖ ರೂವಾರಿ ಶುಭಾ, ಆಕೆಯ ಪ್ರಿಯಕರ ಅರುಣ್ ವರ್ಮಾ ಹಾಗೂ ಕೊಲೆಗೆ ಸಹಕರಿಸಿದ್ದ ವೆಂಕಟೇಶ್ ಮತ್ತು ದಿನೇಶ್ ಎಂಬುವವರನ್ನು ಬಂಧಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ನಾಲ್ವರೂ ತಪ್ಪಿತಸ್ಥರು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಕಾನೂನು ಬಾಗಿಲ ಬಂದ್​ ಬಳಿಕ ಕ್ಷಮಾದಾನ ಅರ್ಜಿ

ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರೂ, ಜುಲೈ 2025 ರಲ್ಲಿ ಸುಪ್ರೀಂ ಕೋರ್ಟ್, ನಾಲ್ವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಅಂತಿಮ ಆದೇಶ ಹೊರಡಿಸಿತ್ತು. ಇದೀಗ ನ್ಯಾಯಾಲಯದ ಎಲ್ಲಾ ಕಾನೂನು ಬಾಗಿಲುಗಳು ಮುಚ್ಚಿದ ಬಳಿಕ ರಾಜ್ಯಪಾಲರ ಮುಂದೆ ‘ಕ್ಷಮಾದಾನ ಅರ್ಜಿ’ ಸಲ್ಲಿಸಲಾಗಿದ್ದು, ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಈ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದೆ. ಆದ್ರೆ, ಇದೀಗ ಸಂಪುಟ ಸಭೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Thu, 15 October 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us