24 ಗಂಟೆಯಲ್ಲಿ ಪರಿಹಾರ ನಿಧಿ ಚೆಕ್​ ವಿತರಣೆಗೆ ಟಿವಿ9 ಸ್ಟುಡಿಯೋ ದಲ್ಲಿ ಜಿಲ್ಲಾಧಿಕಾರಿಗೆ ಆದೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ

TV9 Digital Desk

| Edited By: ಸಾಧು ಶ್ರೀನಾಥ್​

Updated on:Sep 09, 2021 | 1:17 PM

CM Bommai Speaks to TV9 Kannada : ಚೆಕ್​ ಲ್ಯಾಪ್ಸ್​  ​ ಆಗಿದ್ದರೆ ಹೊಸದಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿರುವೆ ಎಂದು ಭರವಸೆ ನೀಡಿದರು. ಇದೇ ವೇಳೆ ಫಲಾನುಭವಿ ಜೊತೆಯೂ ಮಾತನಾಡಿದರು. 

24 ಗಂಟೆಯಲ್ಲಿ ಪರಿಹಾರ ನಿಧಿ ಚೆಕ್​ ವಿತರಣೆಗೆ ಟಿವಿ9 ಸ್ಟುಡಿಯೋ ದಲ್ಲಿ ಜಿಲ್ಲಾಧಿಕಾರಿಗೆ ಆದೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)


ಬೆಂಗಳೂರು: ಮಾಧ್ಯಮ ಲೋಕದ ಇತಿಹಾಸದಲ್ಲೇ ಟಿವಿ9 ವಿಶಿಷ್ಟ ಪ್ರಯತ್ನ ನಡೆಸಿದ್ದು, ಜನರ ಸಮಸ್ಯೆ ನೇರ ಆಲಿಸಿ ಅಲ್ಲೇ ಪರಿಹಾರ ಕಲ್ಪಿಸಲು ಕಾಮನ್ ಮ್ಯಾನ್​ಗೂ-CMಗೂ ಟಿವಿ9 ವೇದಿಕೆ ಸೃಷ್ಟಿಸಿದೆ. ಟಿವಿ9 ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ವೀಕ್ಷಕರು ಮುಕ್ತ ಮಾತುಕತೆ ನಡೆಸಿದ್ದಾರೆ. ವಿಪಕ್ಷಗಳ ಟೀಕೆಗೂ ಉತ್ತರ ನೀಡುತ್ತಾ, ತಜ್ಞರ ಸಲಹೆಗೂ ಮನ್ನಣೆ ನೀಡುತ್ತಾ CM ಸ್ಪೀಕಿಂಗ್ ಇದೀಗ ಟಿವಿ9ನಲ್ಲಿ ನಡೆದಿದೆ.

ಸಿಎಂ ಪರಿಹಾರ ನಿಧಿ ಬಾಬತ್ತಿನಲ್ಲಿ 2019ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಪರಿಹಾರ ಚೆಕ್​ ಅನ್ನು ತಹಸೀಲ್ದಾರ್ ಚಾಮರಸ ಪಾಟೀಲ್​ ಅವರು ಫಲಾನುಭವಿಗೆ ನೀಡದೆ ಕಾಟಕೊಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಾಗ ಇದು ದುರದೃಷ್ಟಕರ ಸಂಗತಿ. ಅಧಿಕಾರಿಯಿಂದ ಲೋಪವಾಗಿದೆ. ರಾಯಚೂರು ಜಿಲ್ಲಾಧಿಕಾರಿಗೆ ಮಾತನಾಡಿ 24 ಗಂಟೆಯಲ್ಲಿ ಬಿಡುಗಡೆ ಮಾಡುವಂತೆ ಸೂಚಿಸುತ್ತೇನೆ. ಚೆಕ್​ ಲ್ಯಾಪ್ಸ್​  ​ ಆಗಿದ್ದರೆ ಹೊಸದಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿರುವೆ ಎಂದು ಭರವಸೆ ನೀಡಿದರು. ಇದೇ ವೇಳೆ ಫಲಾನುಭವಿ ಜೊತೆಯೂ ಮಾತನಾಡಿದರು.

Day and Night ವರ್ಕ್​ ಮಾಡಿ ಒಂದೇ ತಿಂಗಳಲ್ಲಿ ಕೆಲಸ ಮುಗಿಸಿ ಎಂದು ಬಿಡಿಎ ಆಯುಕ್ತರಿಗೆ ಸಿಎಂ ಖಡಕ್ ಸೂಚನೆ:

BDA ನಿರ್ಲಕ್ಷ್ಯಕ್ಕೆ 312 ಕುಟುಂಬಗಳಿಗೆ ಸಂಕಷ್ಟ ಎದುರಾಗಿರುವ ವಿಚಾರವನ್ನು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಅವರ ಗಮನ ಸೆಳೆದಾಗ Day and Night ವರ್ಕ್​ ಮಾಡಿ ಒಂದೇ ತಿಂಗಳಲ್ಲಿ ಕೆಲಸ ಮುಗಿಸಿ ಎಂದು ಬಿಡಿಎ ಆಯುಕ್ತರಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಬಿಡಿಎ ಮನೆಗಳಿಗೆ ಮೂಲಸೌಕರ್ಯ ಇಲ್ಲದ ಹಿನ್ನೆಲೆ, ಬಿಡಿಎ ಮನೆಗಳಿಗೆ ಹೋಗಲು ಫಲಾನುಭವಿಗಳಿಗೆ ಆಗ್ತಿಲ್ಲ. ಸುಮಾರು 7 ವರ್ಷದಿಂದ ಕುಟುಂಬಗಳು ಪರದಾಡ್ತಿವೆ ಎಂದು ಹೇಳಿದಾಗ ಕಾಲಮಿತಿಯಲ್ಲಿ ಮೂಲಸೌಕರ್ಯ ಒದಗಿಸಲು ಬಿಡಿಎ ಆಯುಕ್ತ ಎಂ.ಬಿ.ರಾಜೇಶ್‌ಗೌಡಗೆ ಸಿಎಂ ಸೂಚನೆ ನೀಡಿದರು.

ಮಳೆ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ ಎಂದು ಟಿವಿ9 ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಾಗ ಇದೇ ಮೊದಲ ಬಾರಿಗೆ ರಸ್ತೆ ಗುಂಡಿಗಳು ಆಗಿರುವುದಲ್ಲ. ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಆದ್ಯತೆ ಮೇರೆಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚಿಸಿದ್ದೇನೆ ಎಂದು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಹಲವು ಗ್ರಾಮಗಳಲ್ಲಿ ವಸತಿ ರಹಿತರು ಇದ್ದಾರೆ. 750 ಗ್ರಾಮ ಪಂಚಾಯತ್​​ಗಳಲ್ಲಿ ವಸತಿ ರಹಿತರಿಗೆ ವಸತಿ ಯೋಜನೆ ಬಗ್ಗೆ ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಅವರ ಗಮನ ಸೆಳೆದಾಗ ಘೋಷಿಸಿದ ಯೋಜನೆ ಅನುಷ್ಠಾನ ಮಾಡಬೇಕು. 2 ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಸಿ ಕಾರ್ಯಾರಂಭ ಮಾಡುವಂತೆ ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರಿಗೆ ದೂರವಾಣಿ ಕರೆಯಲ್ಲಿ ಆದೇಶಿಸಿದರು.

ಕೊರೊನಾ ನಿರ್ವಹಣೆ ಮಾಡೋದು ಬಹಳ ಕಷ್ಟವಾಗಿತ್ತು. ಆದ್ರೂ ಪ್ರಧಾನಿ ನರೇಂದ್ರ ಮೋದಿ, ನಮ್ಮ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಬಹಳ ಉತ್ತಮವಾಗಿ ಅದನ್ನು ನಿರ್ವಹಣೆ ಮಾಡಿದರು. ಸಾಲ ಹೆಚ್ಚಾಗಿ ಪಡೆಯಲು ಕೇಂದ್ರ ಅವಕಾಶ ಕೊಟ್ಟಿದೆ. ಕಷ್ಟಕಾಲದಲ್ಲಿ ಆರ್ಥಿಕ ನಿರ್ವಹಣೆ ವಿಶೇಷವಾಗಿರುತ್ತೆ ಎಂದು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ರೈತರ ಆದಾಯ ದ್ವಿಗುಣವಾಗಬೇಕು ಎಂದು ಆಶಿಸಿದ ಸಿಎಂ ಬೊಮ್ಮಾಯಿ

ರೈತರ ವಿದ್ಯುತ್ ಬಿಲ್​ಗಳನ್ನು ಸರ್ಕಾರ ಪಾವತಿ ಮಾಡುತ್ತಿದೆ. ವರ್ಷಕ್ಕೆ 3-4 ಸಾವಿರ ಕೋಟಿ ರೂ ಸರ್ಕಾರ ಪಾವತಿಸುತ್ತಿದೆ ಎಂದು ಟಿವಿ9 ಸ್ಟುಡಿಯೋದಲ್ಲಿ ಹೇಳಿದ ಸಿಎಂ ಬೊಮ್ಮಾಯಿ ಅವರು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ರೈತರ ಆದಾಯ ದ್ವಿಗುಣವಾಗಬೇಕು ಎಂದು ಆಶಿಸಿದರು.

750 ರೈತ ಉತ್ಪಾದಕ ಸಂಸ್ಥೆಗಳಿಗೆ 3 ವರ್ಷಕ್ಕೆ ₹225 ಕೋಟಿ ನೀಡಲು ಪ್ರಸಕ್ತ ವರ್ಷದ ಆದೇಶದ ಬಗ್ಗೆ ಸಿಎಂ ಬೊಮ್ಮಾಯಿ ಇದೇ ವೇಳೆ ಟಿವಿ9 ಸ್ಟುಡಿಯೋದಲ್ಲಿ ಅಧಿಕೃತ ಆದೇಶ ಪ್ರಕಟಿಸಿದರು.

ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್ ಸಲಹೆ ಪಾಲಿಸುವೆ:
ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್ ಅವರು ರಾಜ್ಯ ನೀರಾವರಿ ಯೋಜನೆಗಳ ಸಂಬಂಧ ಸರ್ಕಾರಕ್ಕೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಎಸ್.ರಾಜಾರಾವ್‌ರಿಂದ ಹಲವು ವಿಚಾರ ಕಲಿತಿದ್ದೇನೆ. ರಾಜಾರಾವ್ ಹೇಳಿರುವುದು ಸತ್ಯವಾಗಿದೆ ಎಂದು ಟಿವಿ9 ಸ್ಟುಡಿಯೋದಲ್ಲಿ ಹೇಳಿದರು.

ಕೃಷ್ಣಾ ನದಿ 130 ಟಿಎಂಸಿ ನೀರು ಬಳಕೆಗೆ ಆದ್ಯತೆ ನೀಡಿದ್ದೇವೆ. ದೆಹಲಿಗೆ ಹೋದಾಗ ವಕೀಲರ ಜೊತೆ ಚರ್ಚಿಸಿದ್ದೇನೆ. ಇದಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದೇವೆ. ತಾತ್ಕಾಲಿಕ ಸ್ಟೇ ತೆಗೆದುಹಾಕುವ ನಿಟ್ಟಿನಲ್ಲಿ ಪ್ರತಿ ವಾದ ಮಂಡಿಸುವಂತೆ ತಿಳಿಸಿದ್ದೇನೆ. ವಕೀಲರ ಜತೆ ಕುಳಿತು ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆಯೂ ಮೊನ್ನೆ ದಿಲ್ಲಿಯಲ್ಲೂ ಚರ್ಚೆ ನಡೆಸಿದ್ದೇನೆ. ಯಾರಾದ್ರೂ ಉಪವಾಸ ಕೂರಲಿ, ಏನಾದ್ರೂ ಮಾಡಲಿ. ನಮ್ಮ ನೀರು ನಾವು ಪಡೆಯಲು ಯಾರ ಅಪ್ಪಣೆ ಬೇಕಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಉಪವಾಸಕ್ಕೆ ಸಿಎಂ ಬೊಮ್ಮಾಯಿ ಮತ್ತೊಮ್ಮೆ ಟಾಂಗ್ ನೀಡಿದರು.

ಬಸ್ ಇಲ್ಲದೆ ಪರದಾಡುತ್ತಿರುವ ಬೀದರ್ ಜಿಲ್ಲೆ ವಿದ್ಯಾರ್ಥಿಗಳ ಸಮಸ್ಯೆಗೆ ಸಿಎಂ ಸ್ಪಂದನೆ:

ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬೀದರ್ ಜಿಲ್ಲೆಯಲ್ಲಿ ಬಸ್ ಸೌಲಭ್ಯವಿಲ್ಲದೆ ಶಾಲಾ ವಿದ್ಯಾರ್ಥಿಗಳು ಪಡಿಪಾಟಲು ಪಡುತ್ತಿರುವುದನ್ನು ವಿಡಿಯೋ ಮೂಲಕ ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಅವರ ಗಮನ ಸೆಳೆಯಲಾಯಿತು. ಶಾಲಾ ವಿದ್ಯಾರ್ಥಿಗಳ ಪರದಾಟ ವಿಷಯವಾಗಿ ಸಾರಿಗೆ ಸಚಿವ ಶ್ರೀರಾಮುಲು ಟಿವಿ9 ಮೂಲಕ ಸಿಎಂ ಬೊಮ್ಮಾಯಿ ಸಂಪರ್ಕಕ್ಕೆ ಬಂದರು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಎಲ್ಲ ಕಡೆ ಬಸ್ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಸಿಎಂ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ. ಈಗಷ್ಟೇ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇನೆ ಎಂದು ಸಿಎಂ ಸ್ಪೀಕಿಂಗ್ ಲೈವ್‌ನಲ್ಲಿ ಶ್ರೀರಾಮುಲು ಹೇಳಿದರು.

ನಾಯತ್ವದ ಬಗ್ಗೆ ಮಾತನಾಡಿಲ್ಲ; ಜವಾಬ್ದಾರಿ ನಿರ್ವಹಿಸಲು ಸಿದ್ಧವಾಗಿ ಎಂದು ಅಮಿತ್​ ಶಾ ಹೇಳಿದ್ದಾರೆ:

ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಮಾಡಿದ್ದಾರೆ. ಬಿಜೆಪಿ ವರಿಷ್ಠರ ಮಾತುಗಳಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ನಾನು ಮೊದಲು ಕಾರ್ಯಕರ್ತ, ನಂತರ ಮುಖ್ಯಮಂತ್ರಿ. ಕಾರ್ಯಕರ್ತನಾಗಿ ಅವರ ವಿಶ್ವಾಸಗಳಿಸಿ ನಂತರ ಸಿಎಂ ಆಗಿರುವೆ. ರಾಜ್ಯದಲ್ಲಿ ಹಿರಿಯ ನಾಯಕರು, ಕಿರಿಯರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿ ಮುಂದುವರಿಯುತ್ತೇವೆ. ಮೂಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ನಾಯತ್ವದ ಬಗ್ಗೆ ಮಾತನಾಡಿಲ್ಲ; ಜವಾಬ್ದಾರಿ ನಿರ್ವಹಿಸಲು ಸಿದ್ಧವಾಗಿ ಎಂದು ಅಮಿತ್​ ಶಾ ಹೇಳಿದ್ದಾರೆ ಎಂದು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ವ್ಯಾಖ್ಯಾನಿಸಿದರು.

ಯಡಿಯೂರಪ್ಪಗೆ ಮುಖ್ಯಮಂತ್ರಿ ಹುದ್ದೆಯಿಂದ ಬಲ ಬಂದಿಲ್ಲ; ಬಿ.ಎಸ್.ಯಡಿಯೂರಪ್ಪರಿಂದ ಆ ಸ್ಥಾನಕ್ಕೆ ಬಲ ಬಂದಿದೆ:

ನಾನು ಮ್ಯಾಂಡೇಟ್​ ಇಲ್ಲದ ಮುಖ್ಯಮಂತ್ರಿ; ಆದ್ರೆ ಮ್ಯಾಂಡೇಟ್​ ಪಡೆಯುವ ಮುಖ್ಯಮಂತ್ರಿಯಾಗಿ ರೂಪುಗೊಳ್ಳುವೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಜಿಜ್ಞಾಸೆ ಇದೆ. ಆದರೆ ಭಾರತೀಯ ಜನತಾ ಪಾರ್ಟಿಯಲ್ಲಿ ನಾಯಕತ್ವ ಸಮಸ್ಯೆ ಇಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನ, ಸಲಹೆಗಳನ್ನು ಸ್ವೀಕರಿಸುತ್ತೇನೆ. ಬಿ.ಎಸ್. ಯಡಿಯೂರಪ್ಪ ಅವರು ಮಾಸ್ ಲೀಡರ್. ಒಂದು ಸ್ಥಾನದಿಂದ (ಮುಖ್ಯಮಂತ್ರಿ ಹುದ್ದೆ) ಯಡಿಯೂರಪ್ಪಗೆ ಬಲ ಬಂದಿಲ್ಲ. ಬಿ.ಎಸ್.ಯಡಿಯೂರಪ್ಪರಿಂದ ಆ ಸ್ಥಾನಕ್ಕೆ ಬಲ ಬಂದಿದೆ. ನಾನು ಸ್ಥಿತಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

ರಾಜಕೀಯ ನಾಯಕರಷ್ಟೇ ಅಲ್ಲ; ಕನ್ನಡ ನಾಡಿನ ಜನತೆಯ ಅಭಿಪ್ರಾಯ ನನಗೆ ಮುಖ್ಯ. ಅದೇ ನನಗೆ ಮಾರ್ಗದರ್ಶನ, ಪ್ರೇರಣೆ, ಸರ್ವಶಕ್ತಿ ಎಂದು ಟಿವಿ9ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕೆಲಸ ಮಾಡಲು ನೂರೆಂಟು ಸಮಸ್ಯೆ ಎದುರಾಗುತ್ತದೆ; ಆದರೆ ಸಮಸ್ಯೆ ಪಕ್ಕಕ್ಕೆ ಇಟ್ಟು ಕೆಲಸ ಮಾಡಿ:
ಸರ್ಕಾರ ನೀಡಿದ್ದ ಭೂಮಿ ನನಗೆ ಇನ್ನೂ ಸಿಕ್ಕಿಲ್ಲ ಎಂದು ನಿವೃತ್ತ ಯೋಧ ಪ್ರಹ್ಲಾದ್ ರೆಡ್ಡಿ ಟಿವಿ9 ಮೂಲಕ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪದಿಸಿದ ಬಸವರಾಜ ಬೊಮ್ಮಾಯಿ ಅವರು ಸಾಮಾನ್ಯ ಕುಟುಂಬದಿಂದ ಯೋಧರು ಬಂದಿರುತ್ತಾರೆ. ಅವರು ಆರ್ಥಿಕವಾಗಿ ಸದೃಢರಾಗದಿದ್ದರೆ ಕಷ್ಟವಾಗುತ್ತೆ. ನಿವೃತ್ತ ಯೋಧರಿಗೆ ಭೂಮಿಯನ್ನು ನೀಡುವ ವಿಚಾರದಲ್ಲಿ ಅಡೆತಡೆಗಳು ಇವೆ. ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ನಿವೃತ್ತ ಯೋಧರ ಯಾವ ಕೆಲಸಕ್ಕೂ ತೊಂದರೆಯಾಗಬಾರದು. ಸೈನಿಕರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧರ ಸಂಕಷ್ಟಕ್ಕೆ ಸಿಎಂ ಬೊಮ್ಮಾಯಿ ಟಿವಿ9 ಸ್ಟುಡಿಯೋದಲ್ಲಿ ಸ್ಪಂದಿಸಿದರು. ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಕೆಲಸ ಮಾಡಲು ನೂರೆಂಟು ಸಮಸ್ಯೆ ಎದುರಾಗುತ್ತದೆ; ಆದರೆ ಸಮಸ್ಯೆ ಪಕ್ಕಕ್ಕೆ ಇಟ್ಟು ಕೆಲಸ ಮಾಡಿ. ಯೋಧ ಪ್ರಹ್ಲಾದ್ ರೆಡ್ಡಿ ನೊಂದು ಮಾತನಾಡುತ್ತಿದ್ದಾರೆ. ಅಲ್ಲಿ ಸಮಸ್ಯೆ ಇದೆ. ಅದನ್ನು ಶೀಘ್ರವೇ ನಿವಾರಿಸಿ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಿವಿಹಿಂಡಿದರು.

Karnataka Chief Minister Basavaraj Bommai Exclusive Interview with TV9 Kannada Ganesha Chaturthi 2021

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada