Karnataka Rain: ಕರ್ನಾಟಕದಲ್ಲಿ ಮಳೆಹಾನಿ; ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಲು ಆದೇಶ

ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Karnataka Rain: ಕರ್ನಾಟಕದಲ್ಲಿ ಮಳೆಹಾನಿ; ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಲು ಆದೇಶ
ದಕ್ಷಿಣ ಕನ್ನಡದ ಮಳೆಪೀಡಿತ ಸ್ಥಳಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
Edited By:

Updated on: Jul 13, 2022 | 3:01 PM

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ (Rainfall) ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮನೆಗಳು ಕುಸಿದಿದ್ದು, ಜೀವ ಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಇಂದು ಉಡುಪಿ, ಕೊಡಗು, ಮಡಿಕೇರಿ ಸುತ್ತಮುತ್ತಲು ತೆರಳಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ್ದಾರೆ.

ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಮಾರ್ಗಸೂಚಿ ದರ ಮತ್ತು ಪರಿಷ್ಕೃತ ದರ ಹೀಗಿದೆ:

* ಮಾನವ ಜೀವಹಾನಿಗೆ ಎಸ್​ಡಿಆರ್​ಎಫ್/ ಎನ್​ಡಿಆರ್​ಎಫ್ ಮಾರ್ಗಸೂಚಿ ದರ 4 ಲಕ್ಷ ರೂ. ಇದ್ದು, ಅದನ್ನು 5 ಲಕ್ಷ ರೂ.ಗೆ ನಿಗದಿಪಡಿಸಿದೆ.

* ಪ್ರವಾಹದ ನೀರು ನುಗ್ಗಿರುವ ಮನೆಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಗೆ 3,800 ರೂ. ಇದ್ದು, (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 10,000 ರೂ. ನಿಗದಿಪಡಿಸಲಾಗಿದೆ.

* ಶೇ. 75ಕ್ಕಿಂತ ಹೆಚ್ಚು ಸಂಪೂರ್ಣ ಹಾನಿ ವರ್ಗಕ್ಕೆ 95,100 (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ) ಇದ್ದು, ಪರಿಷ್ಕೃತ ದರ 5 ಲಕ್ಷ ರೂ. ನಿಗದಿಪಡಿಸಲಾಗಿದೆ.

* ಶೇ. 25ರಿಂದ ಶೇ. 75ರಷ್ಟು ತೀವ್ರ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು) ಬಿ2 ವರ್ಗಕ್ಕೆ 95,000 ರೂ. (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 5 ಲಕ್ಷ ರೂ. ನಿಗದಿಪಡಿಸಲಾಗಿದೆ.

* ಶೇ. 15ರಿಂದ ಶೇ. 25ರಷ್ಟು ಭಾಗಶಃ ಮನೆ ಹಾನಿ ಸಿ ವರ್ಗಕ್ಕೆ 5,200 ರೂ. (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 50 ಸಾವಿರ ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Karnataka Floods:  ಮಳೆಯಿಂದ 32 ಸಾವು, 1062 ಮನೆಗಳು, 355 ಹೆಕ್ಟೇರ್ ಬೆಳೆಗೆ ಹಾನಿ; ಸಿಎಂ ಬಸವರಾಜ ಬೊಮ್ಮಾಯಿ

ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದವರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ವಿಪತ್ತು ನಿರ್ವಹಣಾ ಖಾತೆಯಲ್ಲಿರುವ ಹಣವನ್ನು ಜಿಲ್ಲಾಧಿಕಾರಿಗಳು ಬಳಸಿಕೊಳ್ಳಬೇಕು. ಅಗತ್ಯ ಆಹಾರ ವಸ್ತುಗಳನ್ನು ನೆರೆಪೀಡಿತರ ಮನೆಗಳಿಗೆ ತಲುಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ರಸ್ತೆಗಳು ಹಾಳಾಗಿರುವ ಕಡೆ ಶೀಘ್ರವೇ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣ ಪ್ರಕ್ರಿಯೆ ಆರಂಭಿಸಬೇಕು ಎಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಯಿಂದಾಗಿ ಕರ್ನಾಟಕದಲ್ಲಿ ಇದುವರೆಗೂ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. 300 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ 355 ಹೆಕ್ಟರ್ ಬೆಳೆ ನಾಶವಾಗಿದ್ದು, 1,062 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಐವರು ಮತ್ತು ಉತ್ತರ ಕನ್ನಡದಲ್ಲಿ ಮೂವರು ಮೃತಪಟ್ಟಿದ್ದಾರೆ. ರಾಜ್ಯದ ವಿವಿಧೆಡೆ 14 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳು, 4 ರಾಜ್ಯ ವಿಪತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.