Karnataka Floods: ಮಳೆಯಿಂದ 32 ಸಾವು, 1062 ಮನೆಗಳು, 355 ಹೆಕ್ಟೇರ್ ಬೆಳೆಗೆ ಹಾನಿ; ಸಿಎಂ ಬಸವರಾಜ ಬೊಮ್ಮಾಯಿ
CM Basavaraj Bommai: ಸಂತ್ರಸ್ತರು ಒಂದು ವೇಳೆ ಅವರ ಸಂಬಂಧಿಗಳು ಅಥವಾ ಗೆಳೆಯರ ಮನೆಗಳಲ್ಲಿ ಉಳಿದುಕೊಂಡಿದ್ದರೆ ಅಲ್ಲಿಗೇ ದಿನಸಿ ತಲುಪಿಸಬೇಕು ಎಂದು ಆದೇಶ ಮಾಡಿದರು.

ಉಡುಪಿ: ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದವರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ವಿಪತ್ತು ನಿರ್ವಹಣಾ ಖಾತೆಯಲ್ಲಿರುವ ಹಣವನ್ನು ಜಿಲ್ಲಾಧಿಕಾರಿಗಳು ಬಳಸಿಕೊಳ್ಳಬೇಕು. ಅಗತ್ಯ ಆಹಾರ ವಸ್ತುಗಳನ್ನು ನೆರೆಪೀಡಿತರ ಮನೆಗಳಿಗೆ ತಲುಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೂಚಿಸಿದ್ದಾರೆ. ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಳಜಿ ಕೇಂದ್ರಕ್ಕೆ ಸಂತ್ರಸ್ತರು ಬರಲು ಒಪ್ಪುತ್ತಿಲ್ಲ. ಸಂತ್ರಸ್ತರು ಒಂದು ವೇಳೆ ಅವರ ಸಂಬಂಧಿಗಳು ಅಥವಾ ಗೆಳೆಯರ ಮನೆಗಳಲ್ಲಿ ಉಳಿದುಕೊಂಡಿದ್ದರೆ ಅಲ್ಲಿಗೇ ದಿನಸಿ ತಲುಪಿಸಬೇಕು ಎಂದು ಆದೇಶ ಮಾಡಿದರು. ರಸ್ತೆಗಳು ಹಾಳಾಗಿರುವ ಕಡೆ ಶೀಘ್ರವೇ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣ ಪ್ರಕ್ರಿಯೆ ಆರಂಭಿಸಬೇಕು ಎಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮೂರೂ ಜಿಲ್ಲೆಯ ಜಿಲ್ಲಾಧಿಕಾರಿಗಳು ನಷ್ಟದ ಬಗ್ಗೆ ವಿವರಣೆ ನೀಡಿದರು. ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಸವಣ್ಣ ಅವರ ಚಿತ್ರಪಟಕ್ಕೆ ಗೌರವ ಸಲ್ಲಿಸಿದರು.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಭೂಕಂಪ ಮತ್ತು ಭೂಕುಸಿತ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. ಕಡಲಕೊರತೆ ತಡೆಯಲು ಹೊಸ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ ನಡೆದಿದೆ. ಮೂರು ಜಿಲ್ಲೆಯ ಹಾನಿ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದೇವೆ. ಮಳೆಯ ನಂತರ ಎದುರಾಗುವ ಸಮಸ್ಯೆಗಳ ತುರ್ತು ಮತ್ತು ದೀರ್ಘಕಾಲೀನ ಪರಿಹಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೈಂದೂರು, ಕಾಪು ತಾಲೂಕಿಗೂ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತೇನೆ. 10 ದಿನಗಳ ನಂತರ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಸಂತ್ರಸ್ತರಿಗೆ ಶೀಘ್ರ ನೆರವು ಒದಗಿಸಲು ಮತ್ತು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು. ಭೂಕಂಪ ಮತ್ತು ಭೂಕುಸಿತವಾದ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಲು ನಾಲ್ಕು ಸಂಸ್ಥೆಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಮಣಿಪಾಲದ ರಜತಾದ್ರಿ ಕಟ್ಟಡದಲ್ಲಿ ಸಭೆ ನಡೆಯಿತು. ಸಚಿವರಾದ ಆರ್.ಅಶೋಕ್, ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಮೂರೂ ಜಿಲ್ಲೆಗಳ ಶಾಸಕರು, ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯ ನಂತರ ಮುಖ್ಯಮಂತ್ರಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.
ಮಳೆಯಿಂದ 32 ಮಂದಿ ಸಾವು: ಬೊಮ್ಮಾಯಿ
ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೂ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. 300 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ಮಳೆಯಿಂದಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ 355 ಹೆಕ್ಟರ್ ಬೆಳೆ ನಾಶವಾಗಿದ್ದು, 1,062 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಐವರು ಮತ್ತು ಉತ್ತರ ಕನ್ನಡದಲ್ಲಿ ಮೂವರು ಮೃತಪಟ್ಟಿದ್ದಾರೆ. ರಾಜ್ಯದ ವಿವಿಧೆಡೆ 14 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳು, 4 ರಾಜ್ಯ ವಿಪತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ವರ್ಷದ ಜುಲೈ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
Published On - 1:29 pm, Wed, 13 July 22




