ಮುಡಾ ಸೈಟ್ ಮುಟ್ಟುಗೋಲಿಗೂ ನನಗೂ ಸಂಬಂಧ ಇಲ್ಲ: ಸಿಎಂ ಸಿದ್ದರಾಮಯ್ಯ

|

Updated on: Jan 20, 2025 | 2:01 PM

ಮುಡಾ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರ ಮತ್ತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ, ಮೈಕ್ರೋ ಫೈನಾನ್ಸ್ ಹಾವಳಿ, ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಬಗ್ಗೆಯೂ ಮಾತನಾಡಿದ್ದಾರೆ. ವಿವರಗಳಿಗೆ ಮುಂದೆ ಓದಿ.

ಮುಡಾ ಸೈಟ್ ಮುಟ್ಟುಗೋಲಿಗೂ ನನಗೂ ಸಂಬಂಧ ಇಲ್ಲ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಜನವರಿ 20: ಜಾರಿ ನಿರ್ದೇಶನಾಲಯ ಮುಡಾ ಸೈಟ್​​ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಮತ್ತು ಹಗರಣ ಸಂಬಂಧ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಇಡಿ ಅಧಿಕಾರಿಗಳ ಮಾಧ್ಯಮ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ರಾಜಕೀಯ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ. 50:50 ಸೈಟ್​​ಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಅದಕ್ಕೂ ನನಗೂ ಸಂಬಂಧ ಇಲ್ಲ ಎಂದರು.

ಬಿಜೆಪಿ ಇಡಿಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿಸಿದೆ. ಅದು ರಾಜಕೀಯ ಪ್ರೇರಿತ ಮಾಧ್ಯಮ ಪ್ರಕಟಣೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಇನ್ನು ಬೆಳಗಾವಿ ಗಾಂಧಿ ಭಾರತ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಮಂಗಳವಾರ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡುತ್ತೇವೆ. ನಂತರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಯಲಿದೆ ಎಂದರು.

ಮೈಕ್ರೋ ಫೈನಾನ್ಸ್​ನವರ ಮೇಲೆ ಕ್ರಮದ ಭರವಸೆ

ರಾಜ್ಯದ ಹಲವೆಡೆ ಮೈಕ್ರೋ ಫೈನಾನ್ಸ್​ನಿಂದ ಕಿರುಕುಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಮೈಕ್ರೋ ಫೈನಾನ್ಸ್​ನವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರೇ ಕಿರುಕುಳ ಕೊಟ್ಟರೂ ಅವರ ವಿರುದ್ಧ ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದರು.

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ. ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಡಿ ದುರ್ಬಳಕೆ: ಯತೀಂದ್ರ ಸಿದ್ದರಾಮಯ್ಯ

ಮುಡಾ ಹಗರಣ ಸಂಬಂಧ ಇಡಿಯಿಂದ ಮಾಧ್ಯಮ ಪ್ರಕಟಣೆ ವಿಚಾರವಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯಿಸಿದ್ದು, ರಾಜಕೀಯ ಉದ್ದೇಶದಿಂದ ಇಡಿ ದುರ್ಬಳಕೆ ಆಗುತ್ತಿದೆ ಎಂದರು. ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಬೇರೆಯವರ ಮನೆ ಮೇಲೂ ಇಡಿ ರೇಡ್ ಆಗಿದೆ. ಬೇನಾಮಿ ಹೆಸರಿನಲ್ಲಿ ನಿವೇಶನ ಪಡೆದಿರುವ ಬಗ್ಗೆ ಮಾಹಿತಿ ಇದೆ. ಆ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದಕ್ಕೆ ಇಡಿ ಮುಂದಾಗಿದೆ. ಬೇನಾಮಿ ಹೆಸರಲ್ಲಿ ಸೈಟ್ ಪಡೆದಿದ್ದು ಅಧಿಕಾರಿಗಳು, ರಾಜಕಾರಣಿಗಳು. ಇದಕ್ಕೂ ಸಿದ್ದರಾಮಯ್ಯಗೂ ಸಂಬಂಧ ಇಲ್ಲ ಎಂದರು.

ಈ ಸಂಬಂಧ ಇಡಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ರಾಜಕೀಯ ದುರುದ್ದೇಶಕ್ಕೆ ಕೇಂದ್ರ ಸರ್ಕಾರ ಇಡಿಯನ್ನು ಬಳಕೆ ಮಾಡಿಕೊಳ್ತಿದೆ. ಸುಮ್ಮನೆ ತನಿಖೆ ಹೆಸರಲ್ಲಿ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಇದುವರೆಗೂ ಇಡಿ ತನಿಖೆ ಯಾವುದೇ ತಾತ್ವಿಕ ಅಂತ್ಯ ತಲುಪಿಲ್ಲ. ಸಿದ್ದರಾಮಯ್ಯ ಹಾಗೂ ನಮ್ಮ ಕುಟುಂಬ ಯಾವುದೇ ತಪ್ಪು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟರು ಅಂತಾ ಬಿಂಬಿಸಲು ಯತ್ನಿಸಲಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ರಾಜೀನಾಮೆ ಕೊಡಿಸಲು ತಂತ್ರ ಹೂಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಸುರ್ಜೇವಾಲ ವಿರುದ್ಧ ಸಚಿವರ ಅಸಮಾಧಾನ: ಸುಳ್ಳು ಹೇಳಿ ವರ್ಚಸ್ಸು ಹಾಳು ಮಾಡ್ತಿದ್ದಾರೆಂದ ಡಿಕೆ ಶಿವಕುಮಾರ್

ಬಿಜೆಪಿಯಲ್ಲೇ ಆಂತರಿಕ ಕಲಹ ಇದೆ, ದಿನ ಬೆಳಗಾದರೆ ಕಚ್ಚಾಟ ನಡೆಯುತ್ತಿದೆ. ಸುಖಾ ಸುಮ್ಮನೆ ನಮ್ಮ ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಯತೀಂದ್ರ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ