ಸಿದ್ದರಾಮಯ್ಯ ಮೇಲೆ ರಾಹುಲ್​​ ಗಾಂಧಿ ಬೇಸರ, ಗದ್ದುಗೆ ಗುದ್ದಾಟಕ್ಕೆ ಹೊಸ ತಿರುವು?

ದಿನದಿಂದ ದಿನಕ್ಕೆ ಹಾವು ಏಣಿಯಾಟದಂತೆ ನಡೆಯುತ್ತಿರುವ ಅಧಿಕಾರ ಹಸ್ತಾಂತರದ ಆಟ, ಈಗ ಬಣ ಬಡಿದಾಟವಾಗಿ ನಿಂತಿಲ್ಲ. ದೆಹಲಿಯಲ್ಲಿ ಭಾರಿ ಸಂಚಲನ ಸೃಷ್ಟಿ ಮೂಡಿಸಿದ ಈ ಬೆಳವಣಿಗೆ ಪಕ್ಷದ ನಾಯಕ ರಾಹುಲ್ ಗಾಂಧಿಗೂ ಸವಾಲಾಗಿದೆ. ಈ ಎಲ್ಲ ಬೆಳವಣಿಗೆ ಮತ್ತು ಇದರಲ್ಲಿ ಇಲ್ಲೀವರೆಗೆ ಸಿದ್ದರಾಮಯ್ಯ ಇಟ್ಟ ಹೆಜ್ಜೆ ಕುರಿತು ರಾಹುಲ್ ಬೇಸರಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮೇಲೆ ರಾಹುಲ್​​ ಗಾಂಧಿ ಬೇಸರ, ಗದ್ದುಗೆ ಗುದ್ದಾಟಕ್ಕೆ ಹೊಸ ತಿರುವು?
ರಾಹುಲ್ ಗಾಂಧಿ, ಸಿದ್ದರಾಮಯ್ಯ
Updated By: ರಮೇಶ್ ಬಿ. ಜವಳಗೇರಾ

Updated on: Nov 27, 2025 | 5:02 PM

ಬೆಂಗಳೂರು, (ನವೆಂಬರ್ 27): ಕರ್ನಾಟಕದಲ್ಲಿ ನಡೆಯುತ್ತಿರುವ ‘ಗದ್ದುಗೆ ಗುದ್ದಾಟ’ದ ನಿಜವಾದ ಪ್ರಹಸನದಲ್ಲಿ ಗಂಭೀರ ಬೆಳವಣಿಗೆಯೊಂದು ನಡೆದಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah)  ಹೊಸ ತಲೆನೋವೊಂದನ್ನು ತರುವ ಸಾಧ್ಯತೆಯಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಅಸಹಕಾರ ಧೋರಣೆ” (recalcitrant attitude) ಗೆ ಬೇಸರಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಬರುವ ದಿನಗಳಲ್ಲಿ, ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಮಸ್ಯೆ ತೊಂದೊಡ್ಡುವ ಸಾಧ್ಯತೆ ಇದೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜೊತೆಗಿನ ಅಧಿಕಾರ ಹಸ್ತಾಂತರದ ಹೋರಾಟವನ್ನು ನಿರ್ಧರಿಸುವ ಮಟ್ಟಕ್ಕೂ ಹೋಗಬಹುದಾಗಿದೆ.

ಕಳೆದ ವಾರಾಂತ್ಯ ನಗರದಲ್ಲಿ ಬೀಡುಬಿಟ್ಟಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ನಿಮ್ಮ ಅಹವಾಲು ಏನಾದರೂ ಇದ್ದರೆ ಅವರಿಗೆ ಹೇಳಿ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಸಂದೇಶ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಖರ್ಗೆಯವರನ್ನು ಸಿದ್ದರಾಮಯ್ಯ ಭೇಟಿ ಆದರೂ, ತಾನು ರಾಹುಲ್ ಗಾಂಧಿ ಜೊತೆ ಮಾತ್ರ ಈ ವಿಚಾರ ಚರ್ಚಿಸಬೇಕು ಎಂದು ಹೇಳಿದ್ದಾರೆನ್ನಲಾಗಿದೆ. ಈ ವಿಚಾರ ತಿಳಿದುಕೊಂಡ ರಾಹುಲ್ ಗಾಂಧಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ: ಸಿಎಂ ಕುರ್ಚಿ ಕಿತ್ತಾಟಕ್ಕೆ ಅಸಹಾಯಕತೆ ಹೊರಹಾಕಿದ ಖರ್ಗೆ

ಖರ್ಗೆಯ ಆ ಮಾತಿಗೆ ಇದೇ ಕಾರಣನಾ?

ಪ್ರಾಯಶಃ ಇದೇ ಕಾರಣವಿರಬೇಕು, ಖರ್ಗೆಯವರು ಮಾಧ್ಯಮದ ಜೊತೆ ಮಾತನಾಡುತ್ತ ಅಧಿಕಾರ ಹಸ್ತಾಂತರದ ವಿಚಾರದಲ್ಲಿ, “ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದರು. ಖುದ್ದು ಏಐಸಿಸಿ ಅಧ್ಯಕ್ಷರು ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದಾಗ, ಹಾಗಾದರೇ ಕಾಂಗ್ರೆಸ್ ಹೈ ಕಮಾಂಡ್ ಯಾರು? ಎಐಸಿಸಿ ಅಧ್ಯಕ್ಷರಾದ ಖರ್ಗೆಯವರಲ್ಲವೇ? ಈ ವಿಚಾರ ಸಾರ್ವಜನಿಕ ವಲಯದಲ್ಲಿ, ಸಾಮಾಜಿ ಜಾಲತಾಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೂಡ ಚರ್ಚೆಯಾಯಿತು. ಹಾಗೂ ವಿರೋಧ ಪಕ್ಷಗಳ ನಾಯಕರುಗಳಿಂದ ಟೀಕೆಗೆ ಗುರಿಯಾದ ಪಕ್ಷ ಸಂಕೋಚಕ್ಕೆ ಸಿಲುಕಿತು. ಈ ಹೇಳಿಕೆಗೆ ಕಾರಣವಾಗಿದ್ದು-ಸಿದ್ದರಾಮಯ್ಯನವರ ಅಸಹಕಾರ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಅಸಮಾಧಾನಕ್ಕೆ ಇನ್ನೊಂದು ಕಾರಣ, ಸಿದ್ದರಾಮಯ್ಯನವರ ಪುತ್ರನ ವರ್ತನೆ. ಡಾ. ಯತೀಂದ್ರ ಸಿದ್ದರಾಮಯ್ಯ ಸರಕಾರದ ಕೆಲಸದಲ್ಲಿ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಕೆಲ ವರದಿ ರಾಹುಲ್ ಗಾಂಧಿಯವರ ಕೈ ತಲುಪಿದ್ದು, ಈ ಬೆಳವಣಿಗೆ ರಾಹುಲ್ ಗಾಂಧಿಯವರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ, ಪಕ್ಷದೊಳಗೆ ಸಿದ್ದರಾಮಯ್ಯನವರ ಸ್ಥಾನ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ದರಾಮಯ್ಯ ಮಾನಸಿಕವಾಗಿ ತಯಾರಾಗಿದ್ದಾರೆ ಎಂದು ಅವರ ಗುಂಪಿನ ಕೆಲ ಸಚಿವರುಗಳು ಮಗುಮ್ಮಾಗಿ ಹೇಳುತ್ತಿದ್ದಾರೆ. ಒತ್ತಡ ತೀರಾ ಜಾಸ್ತಿ ಆದರೆ, ಫೆಬ್ರುವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮುಂದಿನ ಬಜೆಟ್‌ ಮಂಡಿಸಿ ಆ ಮೇಲೆ ಕೆಳಗಿಳಿಯುವ ಸಾಧ್ಯತೆ ಇದೆ ಎಂಬುದು ಅವರ ವಾದ. ಅದರ ಜೊತೆಗೆ ಕರ್ನಾಟಕದಲ್ಲಿ ಅತೀ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅವರ ದಾಖಲೆಯನ್ನು ಸಿದ್ದರಾಮಯ್ಯು ಡಿಸೆಂಬರ್ನಲ್ಲಿ ಮುರಿಯುವ ಸಾಧ್ಯತೆ ಇದ್ದು, ಆ ನಂತರ ಕೂಡ ಅವರು ತಮ್ಮ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಎಂಬುದು ಅವರ ವಾದ.

ರಾಜಸ್ತಾನ, ಚತ್ತೀಸ್ಗಢನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಅವಕಾಶ ಕೊಡದೇ-ಅಶೋಕ್ ಗೆಹಲೋಟ್ ಮತ್ತು ಭೂಪೇಶ್ ಮಗೇಲ್ ಅವರಿಗೆ ಐದು ವರ್ಷದ ಅವಧಿ ನೀಡಿದ್ದ ಕಾಂಗ್ರೆಸ್ ಹೈ ಕಮಾಂಡ್- ಕರ್ನಾಟಕದಲ್ಲಿ ಒಂದು ಹೊಸ ಸಂಪ್ರದಾಯವನ್ನು ಹುಟ್ಟು ಹಾಕುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.