Belagavi: ಚುನಾವಣೆ ಹೊತ್ತಲ್ಲೇ ಬೆಳಗಾವಿ ಜಿಲ್ಲೆ ವಿಭಜನೆಗೆ ಆಸಕ್ತಿ ತೋರಿಸಿದ ಸರ್ಕಾರ
Divinding of Belagavi district: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಲರ್ಟ್ ಆಗಿದೆ. ಜಿಲ್ಲೆ ವಿಭಜನೆ ವಿಚಾರವಾಗಿ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರಗೆ ಸರ್ಕಾರ ನಿರ್ದೇಶನ ನೀಡಿದೆ.
ಬೆಳಗಾವಿ, ಫೆಬ್ರವರಿ 13: ಲೋಕಸಭೆ ಚುನಾವಣೆ (Lok Sabha Elections) ಇನ್ನೇನು ಸಮೀಪಿಸುತ್ತಿದೆ ಎಂಬ ಹೊತ್ತಿನಲ್ಲಿಯೇ ಬೆಳಗಾವಿ (Belagavi) ಜಿಲ್ಲೆ ವಿಭಜನೆ ಎಂಬ ಜೇನಗೂಡಿಗೆ ಕಾಂಗ್ರೆಸ್ ಸರ್ಕಾರ (Congress Government) ಕೈಹಾಕುತ್ತಿರುವಂತಿದೆ. ಬೆಳಗಾವಿ ಜಿಲ್ಲೆ ರಾಜಕೀಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ಅಸ್ತ್ರವನ್ನು ಪ್ರಯೋಗ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಬೆಳಗಾವಿ ಜಿಲ್ಲೆ ಅಧಿಕಾರದ ಕೇಂದ್ರ ಬಿಂದು. ಬೆಳಗಾವಿ ರಾಜಕಾರಣಿಗಳ ಪ್ರತಿಷ್ಠೆಗೆ ಸರ್ಕಾರಗಳೇ ಪತನವಾದ ಉದಾಹರಣೆಗಳೂ ಇವೆ.
ಭೌಗೋಳಿಕವಾಗಿ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಗಡಿ ವಿವಾದದ ಕಾರಣಕ್ಕೆ ಜಿಲ್ಲೆ ವಿಭಜನೆ ಪ್ರಸ್ತಾವ ನೆನೆಗುದ್ದಿಗೆ ಬಿದ್ದಿತ್ತು. ಆದರೆ, ಈಗ ಚುನಾವಣೆ ಹೊತ್ತಲ್ಲೇ ಸರ್ಕಾರ ಜಿಲ್ಲೆ ವಿಭಜನೆಗೆ ಆಸಕ್ತಿ ತೋರಿದೆ.
ಮತ್ತೊಂದೆಡೆ ಪ್ರತ್ಯೇಕ ಜಿಲ್ಲೆಗಾಗಿ ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ ಹಾಗೂ ಅಥಣಿ ಜನರಿಂದ ಹೋರಾಟ ನಡೆಯುತ್ತಿದೆ. ಹಲವು ದಕಶಗಳಿಂದ ಜಿಲ್ಲೆ ವಿಭಜನೆ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ, ಜಿಲ್ಲಾ ವಿಭಜನೆ ಸಂಬಂಧ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರ ನಿರ್ದೇಶನ ನೀಡಿದೆ. ಸಮಗ್ರ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರಗೆ ಸರ್ಕಾರ ಪತ್ರ ಬರೆದಿದೆ.
ಸದ್ಯ ಅಸ್ತಿತ್ವದಲ್ಲಿರುವ ಉಪವಿಭಾಗ, ತಾಲೂಕು-ಹೋಬಳಿ ಮಧ್ಯೆ ಇರುವ ವ್ಯಾಪ್ತಿ ವಿವರ, ಸಾರ್ವಜನಿಕರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳೇನು? ಜನಸಂಖ್ಯೆ ಎಷ್ಟು? ಮೂಲಸೌಕರ್ಯ ಹಾಗೂ ಭೌಗೋಳಿಕ ವಿಸ್ತೀರ್ಣ ಒಳಗೊಂಡ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ.
ಹಲವು ಬಾರಿ ನಡೆದಿದ್ದ ಪ್ರತಿಭಟನೆ
ಬೆಳಗಾವಿ ಜಿಲ್ಲೆ ವಿಭಜನೆಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಕಳೆದ ವರ್ಷವಂತೂ ಅಥಣಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಕೆಲವು ಬಾರಿ ಅಥಣಿ ಬಂದ್ ಮಾಡಲಾಗಿತ್ತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅಥಣಿ ಬಂದ್ ಸಹ ಆಚರಿಸಲಾಗಿತ್ತು. ಅಥಣಿಯನ್ನು ಜಿಲ್ಲೆ ಮಾಡುವಂತೆ ಹೋರಾಟ ಮಾಡುವ ಬಗ್ಗೆ ಮಠಾಧೀಶರ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳೂ ನಡೆದಿದ್ದವು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ; ಅಥಣಿ ಬಂದ್
ಅಥಣಿ ಜಿಲ್ಲೆಗೆ ಆಗ್ರಹಿಸಿ ಹೋರಾಟ ಮಾಡುವ ಬಗ್ಗೆ 2023ರ ಆಗಸ್ಟ್ನಲ್ಲಿ ಅಥಣಿ ಪಟ್ಟಣದಲ್ಲಿರುವ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಗಚ್ಚಿನಮಠದ ಶಿವಬಸವಶ್ರೀ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ರೈತ ಮುಖಂಡರು, ಸಾಹಿತಿಗಳು, ಮಾಜಿ ಯೋಧರ ಸಭೆ ನಡೆಸಲಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ