ಕಾಂಗ್ರೆಸ್‌ನಲ್ಲಿ ಹೆಚ್ಚಾದ ಮುಸುಕಿನ ಗುದ್ದಾಟ: ಕುಂಭ ಮೇಳದಲ್ಲೂ ಪ್ರತಿಧ್ವನಿಸಿತು ‘ಮುಂದಿನ ಸಿಎಂ’ ಕೂಗು

ಕರ್ನಾಟಕ ಕಾಂಗ್ರೆಸ್ ಮನೆ ಬೂದಿ ಮುಚ್ಚಿದ ಕೆಂಡದಂತಿದ್ದು, ಪಟ್ಟದ ಆಟ ಮುಂದುವರೆದಿದೆ. ಸಿಎಂ ರೇಸ್‌ನಲ್ಲಿ ಇರುವವರ ಬೆಂಬಲಿಗರು ಅಲ್ಲಲ್ಲಿ ಮುಂದಿನ ಸಿಎಂ ಕೂಗೆಬ್ಬಿಸ್ತಿದ್ದಾರೆ. ಈ ಕೂಗು ಇದೀಗ ಕುಂಭಮೇಳಕ್ಕೂ ವ್ಯಾಪಿಸಿದೆ. ಸತೀಶ್‌ ಜಾರಕಿಹೊಳಿ ಸಿಎಂ ಆಗಬೇಕು ಅಂತಾ ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದಾನೆ.

ಕಾಂಗ್ರೆಸ್‌ನಲ್ಲಿ ಹೆಚ್ಚಾದ ಮುಸುಕಿನ ಗುದ್ದಾಟ: ಕುಂಭ ಮೇಳದಲ್ಲೂ ಪ್ರತಿಧ್ವನಿಸಿತು ‘ಮುಂದಿನ ಸಿಎಂ’ ಕೂಗು
ಡಿಕೆ ಶಿವಕುಮಾರ್, ರಾಜಣ್ಣ ಹಾಗೂ ಬಾಲಕೃಷ್ಣ
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Feb 04, 2025 | 6:56 AM

ಬೆಂಗಳೂರು, ಫೆಬ್ರವರಿ 4: ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಳ ಏಟಿನ ರಾಜಕೀಯ ಜಬರ್ದಸ್ತಾಗಿ ನಡೆಯುತ್ತಿದೆ. ಸರ್ಕಾರದ ಪವರ್ ಶೇರಿಂಗ್‌ ವಿಚಾರಕ್ಕೆ ಶುರುವಾಗಿರುವ ಜಿದ್ದಾಜಿದ್ದಿಯಲ್ಲಿ ನಾನಾ ನೀನಾ ಅಂತಾ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್​​ಗೆ ‘ರಾಜ್ಯದ ಚುಕ್ಕಾಣಿ’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳುತ್ತಿದ್ದಂತೆಯೇ ಕೈ ಪಾಳಯದಲ್ಲಿ ಸಂಚಲನ ಶುರುವಾಗಿದೆ.

ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂಬ ಚರ್ಚೆ ಬಂದಾಗಲೆಲ್ಲಾ ವಿರೋಧಿ ಬಣವೂ ಅದೇ ವಿಚಾರವಿಟ್ಟು ಕೌಂಟರ್‌ ಕೊಡುತ್ತಿದೆ. ಅತ್ತ, ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು. ದಲಿತ ಸಿಎಂ ಆಗಬೇಕು ಎಂಬ ವಿಚಾರ ಮುನ್ನೆಲೆಗೆ ತರುತ್ತಿದೆ. ಚನ್ನಪಟ್ಟಣದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಬೆನ್ನಲ್ಲೇ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲೂ ಮುಂದಿನ ಸಿಎಂ ಕೂಗು ಕೇಳಿಸಿದೆ. ಸತೀಶ್‌ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದಾನೆ. ಕುಂಭಮೇಳದಲ್ಲೇ ಬೇಡಿಕೊಂಡಿದ್ದಾನೆ.

ಸಣ್ಣ ಸಮುದಾಯಕ್ಕೆ ಎಂಎಲ್​ಸಿ ಸ್ಥಾನಕ್ಕೆ ರಾಜಣ್ಣ ಬೇಡಿಕೆ

ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬಣದ ಆಟಕ್ಕೆ ದಲಿತ ಸಚಿವರು ಪ್ರತ್ಯುತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ. ತೆರೆಮರೆಯಲ್ಲೇ ರಣತಂತ್ರ ರೂಪಿಸುತ್ತಿದ್ದಾರೆ. ಸಚಿವ ಕೆಎನ್​​ರಾಜಣ್ಣ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್​ ನಾಯಕರಿಗೆ ಪತ್ರ ಬರೆದಿರುವ ಸಚಿವರು, ಸದ್ಯ ಖಾಲಿ ಇರುವ 4 ಪರಿಷತ್​ಗೆ ಸದಸ್ಯರ ಆಯ್ಕೆಯಲ್ಲಿ ಸಣ್ಣ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬಾಲಕೃಷ್ಣ ಹೇಳಿಕೆ ಚರ್ಚೆಯಾಗ್ತಿದ್ದಂತೆಯೇ, ಸ್ಪಷ್ಟನೆ ನೀಡಿರುವ ಸಚಿವ ಎಂಸಿ ಸುಧಾಕರ್, ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಬಾಕಕೃಷ್ಣ ಹೇಳಿದ್ದಾರೆಯೇ ವಿನಃ ಯಾವಾಗ ಅಂತ ಹೇಳಿಲ್ಲ ಎಂದದಿದ್ದಾರೆ. ಹಿರಿಯ ಸಚಿವರಾದ ಹೆಚ್‌ಕೆ ಪಾಟೀಲ್‌, ಬಾಲಕೃಷ್ಣ ಹೇಳಿಕೆಗೆ ಸಮರ್ಥನೆ ಅಥವಾ ವಿರೋಧ ಮಾಡದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತೇ ಅಂತಿಮ ಎಂದಿದ್ದಾರೆ.

ಹೆಚ್​​ಕೆ ಪಾಟೀಲ್​ರಿಗೆ ಸಿಎಂ ಆಗೋ ಯೋಗ ಇದೆ

ಮತ್ತೊಂದೆಡೆ ಮಠಾಧೀಶರು ಕೂಡ ಮುಂದಿನ ಸಿಎಂ ಚರ್ಚೆಯಲ್ಲಿ ಆಗಾಗ ದನಿಗೂಡಿಸುತ್ತಿದ್ದಾರೆ. ಈ ಹಿಂದೆ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದಿದ್ದರು. ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದಿದ್ದರು. ಇದೀಗ ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಹೆಚ್​ಕೆ ಪಾಟೀಲ್‌ಗೆ ಸಿಎಂ ಆಗುವ ಯೋಗ ಇದೆ ಎಂದಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಲೇ ಪ್ರತಿಕ್ರಿಯಿಸಿದ ಕಾನೂನು ಸಚಿವರು, ಏನೂ ಹೇಳುವುದಿಲ್ಲ ಎಂದಿದ್ದಾರೆ.

ಸಿಎಂಗೆ ಮಂಡಿನೋವು: ಡಿಕೆ ಶಿವಕುಮಾರ್​​ಗೆ ಸಭೆಗಳ ನೇತೃತ್ವ

ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಸಿದ್ದರಾಮಯ್ಯ ಮಂಡಿನೋವು ಎಂದು ವಿಶ್ರಾಂತಿಯ ಮೊರೆ ಹೋಗಿದ್ದಾರೆ. ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಹೀಗಾಗಿ, ಸಿಎಂ ಪಾಲ್ಗೊಳ್ಳಬೇಕಿದ್ದ ಎಲ್ಲಾ ಸಭೆಗಳ ಜವಾಬ್ದಾರಿಯನ್ನೂ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಸಿಎಂ ಪರವಾಗಿ ಡಿಸಿಎಂ ಡಿಕೆ ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವ ಡಿಕೆ ಶಿವಕುಮಾರ್​: ಪರೋಕ್ಷವಾಗಿ ಮುಂದಿನ ಸಿಎಂ ಎಂದ ಬಾಲಕೃಷ್ಣ

ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಟ್ಟದ ಆಟ ನಡೆಯುತ್ತಿದ್ದು, ಪ್ರತಿ ನಾಯಕರೂ ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ