AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಹಂಚಿಕೆ ಕದನದ ಹೊತ್ತಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡೆ ನಿಗೂಢ! ಏನಿದರ ಗುಟ್ಟು?

ಕರ್ನಾಟಕ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಜಟಾಪಟಿ ಜೋರಾಗಿದೆ. ನಾಯಕರ ಪಟ್ಟುಗಳು, ದಾಳಗಳು ಅಂತರಂಗವಾಗಿಯೇ ಪ್ರಯೋಗವಾಗುತ್ತಿವೆ. ಆದರೆ ಇದೆಲ್ಲದರ ಕೇಂದ್ರ ಬಿಂದುವಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಿರಂಗ ನಡೆ ಮತ್ತು ಹೇಳಿಕೆಗಳು ನಿಗೂಢವಾಗಿಯೇ ಇವೆ. ಹಾಗಾದರೆ ಏನಿದು ನಿಗೂಢ ನಡೆ?

ಅಧಿಕಾರ ಹಂಚಿಕೆ ಕದನದ ಹೊತ್ತಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡೆ ನಿಗೂಢ! ಏನಿದರ ಗುಟ್ಟು?
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Edited By: |

Updated on: Nov 25, 2025 | 7:01 AM

Share

ಬೆಂಗಳೂರು, ನವೆಂಬರ್ 25: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವೆ ತೆರೆ ಮರೆಯ ಬಾಂಧವ್ಯ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಹೊರ ಜಗತ್ತಿನ ಕೆಮೆಸ್ಟ್ರಿ ಮಾತ್ರ ಎಲ್ಲರನ್ನೂ ಹುಬ್ಬೇರುವಂತೆ ಮಾಡುತ್ತದೆ. ಅದಕ್ಕೆ ಅನೇಕ ಸ್ಪಷ್ಟ ಉದಾಹರಣೆಗಳನ್ನೂ ಕಾಣಬಹುದಾಗಿದೆ.

ಬದಲಾವಣೆ ಕಿಡಿ ಸೋಕಿದಾಗಲೇ ದೆಹಲಿಯಲ್ಲಿ ಒಟ್ಟಿಗೆ ಕುಳಿತು ಊಟ!

ಬಿಹಾರ ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ, ಅಂದರೆ ನವೆಂಬರ್ 15ರಂದು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಯಾಗಿದ್ದರು ಸಿದ್ದರಾಮಯ್ಯ. ಅಲ್ಲಿಂದಲೇ ಪಟ್ಟದ ಆಟದ ಕಿಡಿ ಹೊತ್ತುಕೊಂಡಿತ್ತು. ಇದಾದ ಬೆನ್ನಲ್ಲೇ ಖರ್ಗೆ ಅವರನ್ನು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಹೀಗೆ ಬದಲಾವಣೆ ಕಿಡಿ ಸೋಕಿದಾಗಲೇ, ಅಂದರೆ ನವೆಂಬರ್ 17ರಂದು ಖರ್ಗೆ ಭೇಟಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಖರ್ಗೆ ಭೇಟಿಗೂ ಮುನ್ನವೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಮುಖಾಮುಖಿಯಾಗಿದ್ದರು. ಒಟ್ಟಿಗೆ ಕೂತು ಊಟ ಮಾಡಿದ್ದರು. ಒಟ್ಟಿಗೆ ಕಾಣಿಸಿಕೊಂಡರೂ ಡಿಕೆ ಶಿವಕುಮಾರ್, ‘ನಾನು ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ಹೈಕಮಾಂಡ್ ನಾಲ್ಕೈದು ತಿಂಗಳ ಹಿಂದೆಯೇ ಒಪ್ಪಿತ್ತು ಎಂದಿದ್ದರು.

ಮತ್ಸ್ಯಮೇಳದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಜೊತೆಯಲೇ ಹೆಜ್ಜೆ!

ಸಿದ್ದರಾಮಯ್ಯ ದೆಹಲಿಗೆ ಹೋಗಿ ಬರುತ್ತಿದ್ದಂತೆಯೇ, ಪವರ್ ಶೇರಿಂಗ್ ಫೈಟ್ ಕಿಡಿ ಜ್ವಾಲೆ ಆಗುವತ್ತ ತಿರುಗಿತ್ತು. ಶುಕ್ರವಾರ ಡಿಕೆಶಿ ಬಣದ ಶಾಸಕರ ತಂಡ ದೆಹಲಿಗೆ ಹೋಗಿ ಖರ್ಗೆ ಅವರನ್ನ ಭೇಟಿಯಾಗಿತ್ತು. ಶನಿವಾರ ಖರ್ಗೆ ಬೆಂಗಳೂರಿಗೆ ಬಂದಿದ್ದರು. ಇತ್ತ ಡಿಕೆಶಿ ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಶಾಸಕರಾದ ವಿನಯ್ ಕುಲಕರ್ಣಿ, ವಿರೇಂದ್ರ ಪಪ್ಪಿ ಅವರನ್ನ ಭೇಟಿಯಾಗಿದ್ದರು. ಇದೇ ವೇಳೆ ಸಹಿ ಸಂಗ್ರವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಬೆಂಗಳೂರಿನಲ್ಲಿ ನಡೆದ ಮತ್ಸ್ಯ ಮೇಳದಲ್ಲಿ ಡಿಸಿಎಂ ಡಿಕೆಶಿ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲೇ ನಿಂತು ಮಾರ್ಮಿಕವಾಗಿ ಮಾತನಾಡಿದ್ದ ಡಿಕೆ, ನಾನು ಮೀನುಗಳಿಗೆ ಗಾಳ ಹಾಕುತ್ತಿದ್ದೆ. ಮೀನು ಹಿಡಿಯಲು ತಾಳ್ಮೆ ಬೇಕು ಎಂದಿದ್ದರು.

ಕಾಂಗ್ರೆಸ್​​​ನಲ್ಲಿ ಕಾಂತ್ರಿಯ ಕಿಚ್ಚು ಧಗಧಗಿಸುತ್ತಿರುವಾಗಲೇ ಸಿಎಂ, ಡಿಸಿಎಂ ಸೋಮವಾರ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಜೊತೆ ಜೊತೆಯಾಗಿಯೇ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಜೊತೆಯಾಗಿ ಕುಳಿತು ಗುಸು ಗುಸು ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಡಿಕೆಶಿ, ಕೊಟ್ಟು ಹೋಗುವ ಮತ್ತು ಬಿಟ್ಟು ಹೋಗುವ ಮಾತನ್ನು ಹೇಳಿದ್ದಾರೆ.

ದೇವರು ನಮಗೆ ಕೊಟ್ಟಿರುವುದು ಎರಡು ಆಯ್ಕೆ; ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಹಾಗೆಯೇ ಇವತ್ತು ಏನೇನ್ ಕೊಡಬೇಕೋ ಕೊಟ್ಟು ಹೋಗ್ತಾ ಇದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ ಬಿಟ್ಟು ಸಹ ಹೋಗ್ತಾ ಇದ್ದೇವೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಡಿಕೆಶಿ ಹೇಳಿದ್ದಾರೆ.

ಹೈಕಮಾಂಡ್ ಹೇಳಿದರೆ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ! ಸಿದ್ದರಾಮಯ್ಯ ಪಕ್ಷದ ಆಸ್ತಿ ಎಂದ ಡಿಕೆಶಿ

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಎಲ್ಲರೂ ಕೇಳ್ಬೇಕು. ಡಿಕೆಶಿನೂ ಕೇಳ್ಬೇಕು ಎಂದಿದ್ದಾರೆ. ಆ ಮೂಲಕ ಹೈಕಮಾಂಡ್‌ನತ್ತ ಚೆಂಡು ಎಸೆದಿದ್ದಾರೆ. ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿ, ಅವರು ಹೇಳಿದ್ದೇ ವೇದ ವಾಕ್ಯ, ಅವರು ಹೇಳಿದ್ದಕ್ಕೆ ತಕರಾರಿಲ್ಲ, ಸಿದ್ದರಾಮಯ್ಯ ನಮ್ಮ ಪಕ್ಷದ ಆಸ್ತಿ ಎಂದಿದ್ದಾರೆ.

ಇದನ್ನೂ ಓದಿ: ಪಟ್ಟದ ಫೈಟ್​​ ನಡುವೆ ಸ್ಫೋಟಕ ಭವಿಷ್ಯ ನುಡಿದ ಹುಲಿಗೆಮ್ಮ ಜೋಗತಿ: ಡಿಕೆಶಿಗೆ ಇದ್ಯಾ ಸಿಎಂ ಯೋಗ?

ನವೆಂಬರ್ ಮುಗಿಯಲು ಇನ್ನು ಕೇವಲ ಐದೇ ಐದು ದಿನ ಬಾಕಿ ಇದೆ. ಸದ್ಯ ತೆರೆ ಮೇಲೆ ಒಟ್ಟೊಟ್ಟಿಗೆ ವಿಜೃಂಭಿಸುವ ಸಿದ್ದು, ಡಿಕೆಶಿ ತೆರೆಯ ಹಿಂದೆ ಪಟ್ಟಕ್ಕಾಗಿ ತಂತ್ರಗಳ ಕತ್ತಿ ಝಳಪಿಸುತ್ತಲೇ ಇದ್ದಾರೆ. ಹೀಗಾಗಿ ಕಾಂಗ್ರೆಸ್​​​ನ ನವೆಂಬರ್ ಕ್ರಾಂತಿ ಕಿಚ್ಚು ಏನಾಗಲಿದೆ ಎಂಬುದೇ ಕುತೂಹಲವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us