ಕರ್ನಾಟಕದ ಬರ ಕುರಿತು ವಸ್ತುನಿಷ್ಠ ವರದಿ ಸಲ್ಲಿಕೆ: ಸಿಎಂ ಡಿಕೆಶಿಗೆ ಬರ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಭರವಸೆ

ಕರ್ನಾಟಕದ ಬರ ಪರಿಸ್ಥಿತಿ ಕುರಿತು ವಸ್ತುನಿಷ್ಠ ವರದಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ಗೆ ಕೇಂದ್ರದ ಬರ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಭರವಸೆ ನೀಡಿದ್ದಾರೆ. ಮೂರು ದಿನ ರಾಜ್ಯದಲ್ಲಿ ಪ್ರವಾಸ ಮಾಡಿ ವಸ್ತುಸ್ಥಿತಿ ಹಾಗೂ ಸರ್ಕಾರದ ದತ್ತಾಂಶ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಬರ ಕುರಿತು ವಸ್ತುನಿಷ್ಠ ವರದಿ ಸಲ್ಲಿಕೆ: ಸಿಎಂ ಡಿಕೆಶಿಗೆ ಬರ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಭರವಸೆ
ಕೇಂದ್ರದ ಬರ ಅಧ್ಯಯನ ತಂಡದ ಜತೆಗೆ ಸಿಎಂ ಹಾಗೂ ಡಿಸಿಎಂ ಸಭೆ
Image Credit source: tv9
Edited By:

Updated on: Oct 03, 2026 | 12:29 PM

ಬೆಂಗಳೂರು, ಅಕ್ಟೋಬರ್ 3: ಕರ್ನಾಟಕದ ಬರ ಪರಿಸ್ಥಿತಿ ಕುರಿತು ವಸ್ತುನಿಷ್ಠ ವರದಿ ಸಲ್ಲಿಸುವುದಾಗಿ ಕೇಂದ್ರದ ಬರ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನವಿಗೆ ಪ್ರತಿಕ್ರಿಯಿಸಿದ ಅಜಿತ್ ಕುಮಾರ್ ಸಾಹು, ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಬರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಪಡೆದುಕೊಳ್ಳುವುದಾಗಿ ತಿಳಿಸಿರುವ ಅವರು, ರಾಜ್ಯದ ವಸ್ತುಸ್ಥಿತಿಯನ್ನು ಅರಿಯುವುದರ ಜೊತೆಗೆ ದತ್ತಾಂಶಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವಸ್ತುನಿಷ್ಠ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ರಾಜ್ಯದ ಒಟ್ಟಾರೆ ಬರ ಪರಿಸ್ಥಿತಿಗೆ ಸಂಬಂಧಿಸಿದ ವರದಿಯನ್ನು ತಂಡಕ್ಕೆ ನೀಡಿದ್ದಾರೆ.

ಕೇಂದ್ರದ ಬರ ಅಧ್ಯಯನ ತಂಡದ ಜೊತೆ ಸಿಎಂ, ಡಿಸಿಎಂ ಸಭೆ

ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಕೇಂದ್ರದ ಬರ ಅಧ್ಯಯನ ತಂಡದ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು. ಅಜಿತ್ ಕುಮಾರ್ ಸಾಹು ನೇತೃತ್ವದ ತಂಡದ ಜೊತೆ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಉಮಾ ಮಹಾದೇವನ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಭಾಗವಹಿಸಿದ್ದರು.

3,705.30 ಕೋಟಿ ರೂ. ಪರಿಹಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ತಂಡಕ್ಕೆ ಮನವಿ ಮಾಡಿದ್ದಾರೆ. ಎನ್‌ಡಿಆರ್‌ಎಫ್‌ ಮಾನದಂಡಗಳ ಅನ್ವಯ ಪರಿಹಾರ ನೀಡಬೇಕು. ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ‘ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತಗೊಂಡಂತೆ’ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಬರ ಪರಿಸ್ಥಿತಿಯನ್ನು ಪರಿಗಣಿಸಿ ಅಗತ್ಯ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ಬರ ಪರಿಹಾರ: ರಾಜ್ಯ ಸರ್ಕಾರದ ಸಲ್ಲಿಸಿದ ಬೇಡಿಕೆಯ ವಿವರ

  • 583 ಮೇವು ಸಂಗ್ರಹಣಾ ಘಟಕ‌ ಸ್ಥಾಪನೆಗೆ 241 ಕೋಟಿ ರೂ.ಗೆ ಬೇಡಿಕೆ
  • ಔಷಧಿ, ವ್ಯಾಕ್ಸಿನ್ ಸಾಗಾಟ 21.27 ಕೋಟಿ ರೂ.ಗೆ ಬೇಡಿಕೆ
  • ಪಶುಪಾಲನೆ ಪೌಷ್ಟಿಕ ಆಹಾರ ಪೂರೈಕೆ – 21.40 ಕೋಟಿ ರೂ.ಗೆ ಬೇಡಿಕೆ
  • ಮೇವಿನ ಬೀಜಗಳ ಕಿಟ್ ವಿತರಣೆಗೆ 583 ಕೋಟಿ ರೂ.ಗೆ ಬೇಡಿಕೆ
  • ಒಟ್ಟಾರೆ ಪಶು ಸಂಗೋಪನೆ ನಿರ್ವಹಣೆಗೆ 583.4 ಕೋಟಿ ರೂ.ಗೆ ಬೇಡಿಕೆ
  • SDRF ಮಾನದಂಡ ಅಡಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ 805 ಕೋಟಿ ರೂ.ಗೆ ಬೇಡಿಕೆ
  • ರೈತರಿಗೆ 90 ದಿನಗಳ ಬರ ಪರಿಹಾರ ವಿತರಣೆಗೆ 300 ಕೋಟಿ ರೂ.ಗೆ ಬೇಡಿಕೆ.
  • ದಿನವೊಂದಕ್ಕೆ 327 ರೂ. ನಂತೆ ಪರಿಹರ ನೀಡಲು ಬೇಡಿಕೆ
  • ಒಟ್ಟಾರೆ 3705 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿರುವ ಸರ್ಕಾರ

ನಮ್ಮ ಗ್ರಹಚಾರಕ್ಕೆ ಈಗಲೇ ಮಳೆ ಬಂದಿದೆ: ಸಚಿವ ಬಾಲಕೃಷ್ಣ!

ಏತನ್ಮಧ್ಯೆ, ರಾಮನಗರದಲ್ಲಿ ಮಾತನಾಡಿದ ಸಚಿವ ಹೆಚ್.ಸಿ. ಬಾಲಕೃಷ್ಣ, ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಗ್ರಹಚಾರಕ್ಕೆ ನಿನ್ನೆ ಮೊನ್ನೆ ಮಳೆ ಬಂದಿದೆ. ಹಸಿರು ಕಾಣುತ್ತಿದೆ ಎಂಬುದು ನಮಗೆ ದೊಡ್ಡ ಸಮಸ್ಯೆ’ ಎಂದು ಹೇಳಿದ್ದಾರೆ. ಕೇಂದ್ರದ ತಂಡ ಏನು ವರದಿ ನೀಡುತ್ತದೆ ನೋಡೋಣ ಎಂದಿರುವ ಬಾಲಕೃಷ್ಣ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಕೇಂದ್ರದಿಂದ ಎಷ್ಟು ಪರಿಹಾರ ಬಿಡುಗಡೆ ಮಾಡಿಸುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ ₹2,500 ಪರಿಹಾರ ಘೋಷಣೆ ಮಾಡಿರುವುದಾಗಿ ತಿಳಿಸಿದ ಬಾಲಕೃಷ್ಣ, ದಸರಾ ಒಳಗೆ ಎಲ್ಲ ರೈತರ ಖಾತೆಗಳಿಗೆ ಹಣ ಹಾಕುವುದಾಗಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us