AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲ ಕಂಟಕ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 10 ಮಂದಿ ನೀರು ಪಾಲು

ಕರ್ನಾಟಕದಾದ್ಯಂತ ಒಂದೇ ದಿನ ಹತ್ತು ಜನರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಬೆಳಗಾವಿ, ವಿಜಯಪುರ, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ದುರ್ಘಟನೆಗಳು ನಡೆದಿವೆ. ಮಕ್ಕಳು ಮತ್ತು ವಯಸ್ಕರ ಸಾವುಗಳು ವರದಿಯಾಗಿವೆ, ಕೆಲವು ಘಟನೆಗಳು ಅಪಘಾತಗಳಾಗಿದ್ದರೆ, ಇತರವು ಆತ್ಮಹತ್ಯೆಗಳಾಗಿವೆ.

ಜಲ ಕಂಟಕ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 10 ಮಂದಿ ನೀರು ಪಾಲು
ಸಾಂದರ್ಭಿಕ ಚಿತ್ರ
Sahadev Mane
| Edited By: |

Updated on: Nov 18, 2024 | 9:05 PM

Share

ಬೆಳಗಾವಿ, ನವೆಂಬರ್​ 18: ಕರ್ನಾಟಕದಾದ್ಯಂತ (Karnataka) ಇವತ್ತು (ನ.18) ಒಂದೇ ದಿನ ನೀರಲ್ಲಿ ಮುಳುಗಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ, ವಿಜಯಪುರ, ತುಮಕೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಘಟನೆಗಳು ನಡೆದಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಲಕ್ಷ್ಮಣರಾಮ (49), ರಮೇಶ್ (15), ಯಲ್ಲಪ್ಪ (13) ಮೃತ ದುರ್ದೈವಿಗಳು.

ಮೀನು ಹಿಡಿಯಲು ಬಲೆ ಹಾಕಲು ತಂದೆ ಮತ್ತು ಮಕ್ಕಳು ನದಿಗೆ ಇಳಿದಿದ್ದಾರೆ. ಈ ವೇಳೆ‌ ಓರ್ವ ಪುತ್ರ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಹೋಗಿದ್ದ ತಂದೆ ಮತ್ತು ಮತ್ತೊಬ್ಬ ಮಗ ಕೂಡ ನೀರುಪಾಲಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ, ಪೊಲೀಸ್​, ಎನ್​ಡಿಆರ್​ಎಫ್ ಮತ್ತು ಅಗ್ನಿಶಾಮಕ​ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ರಮೇಶ್ ಅಂಬಲಿ, ಯಲ್ಲಪ್ಪ ಅಂಬಲಿ ಮೃತದೇಹ ಪತ್ತೆಯಾಗಿವೆ. ಲಕ್ಷ್ಮಣರಾಮ ಅವರಿಗಾಗಿ ಹುಡುಕಾಡ ಮುಂದುವರೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಬಳಿಯ ಕರೆಗೆ ಕಾಲು ಜಾರಿ ಬಿದ್ದ ಮಗಳನ್ನು ರಕ್ಷಣೆ ಮಾಡಲು ಹೋಗಿ ತಂದೆಯೂ ನೀರುಪಾಲಾಗಿದ್ದಾರೆ. ತಂದೆ ಫಿರ್ದೋಸ್ (45), ಮಗಳು ಆಯಿಮಾ (6) ಮೃತ ದುರ್ದೈವಿಗಳು. ಇಬ್ಬರೂ ಬೆಂಗಳೂರಿನ ಶಿವಾಜಿನಗರದಿಂದ ತುಂಬಾಡಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದರು.

ಕೆರೆ ನೋಡಲು ಹೋಗಿದ್ದ ವೇಳೆ ಮಗಳು ಕಾಲುಜಾರಿ ನೀರಿನೊಳಗೆ ಬಿದ್ದಿದ್ದಾಳೆ. ಮಗಳ ರಕ್ಷಣೆಗೆಂದು ಕೆರೆಗೆ ಇಳಿದಿದ್ದ ಫಿರ್ದೋಸ್ ಕೂಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.

ಯಾದಗಿರಿಯಲ್ಲಿ ಇಬ್ಬರು ಬಾಲಕರು ದನ ಮೇಯಿಸಲು ಹೋಗಿ ನೀರುಪಾಲಾಗಿದ್ದಾರೆ. ಸುರಪುರದ ದೇವತ್ಕಲ್​ನ (10) ಯುವರಾಜ್ ಹಾಗೂ ಶ್ರೇಯಣ್ಣ (8) ಶಾಲೆಗೆ ರಜೆ ಇದ್ದ ಕಾರಣ ದನ ಮೇಯಿಸಲು ಹೋಗಿದ್ದರು. ಆದರೆ, ಊರ ಬಳಿಯ ಹಿರೇಹಳ್ಳದ ಬಳಿ ದನ ಮೇಯಿಸುತ್ತಿದ್ದಾಗ ಏಕಾಏಕಿ ಕಾಲು ಜಾರಿಬಿದ್ದು ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ.

ಹಾವೇರಿಯ ಶಿಗ್ಗಾಂವಿ ತಾಲೂಕಿನ ಚಂದಾಪುರ ತಾಂಡಾದಲ್ಲಿ 3 ವರ್ಷದ ಕಂದಮ್ಮ ನೀರಿನ ಬ್ಯಾರೆಲ್​ಗೆ ಬಿದ್ದು ಪ್ರಾಣ ಬಿಟ್ಟಿದೆ. ಯಲ್ಲಮ್ಮ ಶಂಕರ್ ಲಮಾಣಿ ದಂಪತಿ ಮಗ ಆದಿತ್ಯನನ್ನ ಅಕ್ಕನ ಜತೆ ಬಿಟ್ಟು ಗದ್ದೆಗೆ ಹೋಗಿದ್ದರು. ಆದರೆ, ಮಗು ಆಟವಾಡುತ್ತಾ ಬ್ಯಾರೆಲ್​ಗೆ ಬಿದ್ದು ಕಣ್ಮುಚ್ಚಿದೆ.

ಗರ್ಭಕೋಶ ತೆಗೆದಿದ್ದಕ್ಕೆ ಮಗು ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ ಗ್ರಾಮದಲ್ಲಿ ನಡೆದಿದೆ. ಅಮೀರಾ (4) ರಿಹಾನಾ (24) ಮೃತ ದುರ್ದೈವಿಗಳು. ರಿಹಾನಾ ಇನಾಂದಾರ್ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಅನಾರೋಗ್ಯದ ಕಾರಣ ವೈದ್ಯರು ರಿಹಾನಾ ಗರ್ಭಕೋಶ ತೆಗೆದಿದ್ದರು.

ಮತ್ತೆ ಮಕ್ಕಳಾಗಲ್ಲ ಎಂದು ಮಾನಸಿಕವಾಗಿ ನೊಂದಿದ್ದ ರಿಹಾನಾ ನಾಲ್ಕು ವರ್ಷದ ಮಗಳು ಅಮೀರಾ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ