ಗ್ರಾಮಸ್ಥರ ಅಲೆದಾಟ ತಪ್ಪಿಸಲು ಮನೆಬಾಗಿಲಿಗೇ ಬರಲಿದೆ ಇ-ಸ್ವತ್ತು! ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ

ಗ್ರಾಮೀಣ ಪ್ರದೇಶದ ಜನರು ಪಂಚಾಯಿತಿ ಕಚೇರಿಗಳಿಗೆ ಅಲೆದಾಡುವ ಮತ್ತು ಸರ್ವರ್ ಸಮಸ್ಯೆಯಿಂದಾಗುವ ವಿಳಂಬ ತಪ್ಪಿಸಲು ಮನೆಬಾಗಿಲಿಗೇ ಇ-ಸ್ವತ್ತು ನೀಡುವ ಯೋಜನೆ ರೂಪಿಸಲಾಗುತ್ತಿದೆ. ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚಿಸಲು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಗ್ರಾಮಸ್ಥರ ಅಲೆದಾಟ ತಪ್ಪಿಸಲು ಮನೆಬಾಗಿಲಿಗೇ ಬರಲಿದೆ ಇ-ಸ್ವತ್ತು! ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ
ಸಚಿವ ಈಶ್ವರ್ ಖಂಡ್ರೆ (ಎಡ ಚಿತ್ರ) ಹಾಗೂ ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Jul 17, 2026 | 12:40 PM

ಮುಖ್ಯಾಂಶಗಳು

  • ಮನೆಬಾಗಿಲಿಗೇ ಇ-ಸ್ವತ್ತು ನೀಡಲು ತೀರ್ಮಾನ
  • ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ
  • ಗ್ರಾಮಠಾಣಾ ಆಸ್ತಿಗಳಿಗೂ ಪರಿಹಾರಕ್ಕೆ ಒತ್ತು

ಬೆಂಗಳೂರು, ಜುಲೈ 18: ಗ್ರಾಮೀಣ ಪ್ರದೇಶದ ಜನರು ಇ-ಸ್ವತ್ತು (E-Swathu) ಪಡೆಯಲು ಪಂಚಾಯಿತಿ ಕಚೇರಿಗಳಿಗೆ ಅಲೆದಾಡುವ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದೆ. ಗ್ರಾಮಸ್ಥರ ಮನೆಬಾಗಿಲಿಗೇ ಇ-ಸ್ವತ್ತು ತಲುಪಿಸುವ ವ್ಯವಸ್ಥೆ ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಇ-ಸ್ವತ್ತು ಪ್ರಕ್ರಿಯೆಯಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಪಂಚ ಸದಸ್ಯರ ಸಮಿತಿ ರಚಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ.

ಸರ್ವರ್ ಸಮಸ್ಯೆಯಿಂದ ಭಾರೀ ಸಮಸ್ಯೆ

ರಾಜ್ಯದಲ್ಲಿ ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ನಾಗರಿಕರಿಗೆ ಸುಲಭ ಮತ್ತು ವೇಗವಾಗಿ ಇ-ಸ್ವತ್ತು ಒದಗಿಸುವ ಉದ್ದೇಶದಿಂದ ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ.

ಇ-ಸ್ವತ್ತು ತೊಡಕು ನಿವಾರಣೆಗೆ ವಿಶೇಷ ಸಮಿತಿ

ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಲು ಸಚಿವರು ಸೂಚಿಸಿದ್ದಾರೆ. ಈ ಸಮಿತಿಯು ಇ-ಸ್ವತ್ತು ಪ್ರಕ್ರಿಯೆಯಲ್ಲಿ ಅಗತ್ಯವಿರುವ ನಿಯಮ ಬದಲಾವಣೆಗಳು, ತಾಂತ್ರಿಕ ಸುಧಾರಣೆಗಳು ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು 10 ದಿನಗಳೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.

ದಾಖಲೆ ಇಲ್ಲದ ಗ್ರಾಮಠಾಣಾ ಆಸ್ತಿಗಳಿಗೂ ಇ-ಸ್ವತ್ತು

ರಾಜ್ಯದ ಗ್ರಾಮಠಾಣಾ ಪ್ರದೇಶಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ತಮ್ಮ ಮನೆ ಅಥವಾ ಜಾಗಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳಿಲ್ಲ. ಇದರಿಂದ ಅವರಿಗೆ ಇ-ಸ್ವತ್ತು ದೊರೆಯದೆ ಬ್ಯಾಂಕ್ ಸಾಲ, ಮನೆ ದುರಸ್ತಿ, ಪುನರ್ ನಿರ್ಮಾಣ, ಕಟ್ಟಡ ನಕ್ಷೆ ಅನುಮೋದನೆ ಹಾಗೂ ಆಸ್ತಿ ಮಾರಾಟದಂತಹ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನೆಮನೆ ಸಮೀಕ್ಷೆ ನಡೆಸಿ, ದಾಖಲೆರಹಿತ ಸ್ವತ್ತುಗಳಿಗೂ ಇ-ಸ್ವತ್ತು ನೀಡಲು ಅನುಕೂಲವಾಗುವ ಮಾರ್ಗೋಪಾಯಗಳನ್ನು ಸಮಿತಿ ಸೂಚಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಬಿ-ಖಾತೆ ನೀಡುವ ಬಗ್ಗೆಯೂ ಪರಿಶೀಲನೆ

ಗ್ರಾಮಠಾಣಾ ವ್ಯಾಪ್ತಿಯ ಹೊರಗಿನ ಭೂಪರಿವರ್ತಿತ ಹಾಗೂ ಭೂಪರಿವರ್ತನೆ ಆಗದ ಕಂದಾಯ ಭೂಮಿಗಳಲ್ಲಿಯೂ ಅನೇಕ ಬಡಾವಣೆಗಳು ನಿರ್ಮಾಣವಾಗಿವೆ. ಕೆಲವು ಕಡೆ ಬಿ-ಖರಾಬು ಹಾಗೂ ಗೋಮಾಳ ಭೂಮಿಯನ್ನೂ ಸೇರಿಸಿ ಅಭಿವೃದ್ಧಿಪಡಿಸಿರುವುದರಿಂದ ನಮೂನೆ 11-ಬಿ ನೀಡಲು ತೊಂದರೆ ಉಂಟಾಗಿದೆ. ಆದರೆ ಗ್ರಾಮ ಪಂಚಾಯಿತಿಗಳು ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಆಸ್ತಿಗಳಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ತೆರಿಗೆ ಸಂಗ್ರಹದಲ್ಲೂ ಸಮಸ್ಯೆ ಎದುರಿಸುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಗ್ರಾಮೀಣ ಸ್ವತ್ತುಗಳಿಗೆ ಸುಲಭವಾಗಿ ಇ-ಸ್ವತ್ತು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸುವ ಕುರಿತು ವರದಿ ಸಲ್ಲಿಸುವಂತೆ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us