
ಬೆಂಗಳೂರು, ನವೆಂಬರ್ 23: ಹಾಸನ ಹಾಗೂ ಚಿಕ್ಕಮಗಳೂರು ವಿಭಾಗದಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಆನೆಗಳ ಸ್ಥಳಾಂತರ ವಿಚಾರವಾಗಿ ಶಾಸಕರ ಆತಂಕಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಬೇಲೂರು ಮತ್ತು ಚಿಕ್ಕಮಗಳೂರು ಭಾಗದ ಜನರಿಗೆ ತೊಂದರೆಯಾಗದಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಬೇಲೂರು ತಾಲೂಕಿನಲ್ಲಿ ಪ್ರಸ್ತುತ ಸುಮಾರು 55 ಆನೆಗಳಿದ್ದು, 13,917 ಎಕರೆ ಮಾತ್ರ ಅರಣ್ಯ ಪ್ರದೇಶವಿದೆ. 2019ರಲ್ಲಿ ಏಳು ಆನೆಗಳಿದ್ದ ಈ ಭಾಗದಲ್ಲಿ ಈಗ ಅವುಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಅರಣ್ಯ ಪ್ರದೇಶ ಕಾಫಿ ತೋಟಗಳು ಮತ್ತು ಗ್ರಾಮಗಳ ನಡುವೆ ಚದುರಿಕೊಂಡಿರುವುದರಿಂದ ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಇದರಿಂದ ಬೆಳೆ ಹಾನಿ ಹಾಗೂ ಜೀವಹಾನಿ ಸಂಭವಿಸುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ಈ ಆನೆಗಳನ್ನು ಭದ್ರಾ ಅರಣ್ಯಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯಿದೆ. ಭದ್ರಾ ಅರಣ್ಯವು 1.41 ಲಕ್ಷ ಎಕರೆ ವಿಸ್ತೀರ್ಣ ಹೊಂದಿದ್ದು, ಬಫರ್ ವಲಯ ಸೇರಿ ಒಟ್ಟು 2.62 ಲಕ್ಷ ಎಕರೆ ಪ್ರದೇಶವಿದೆ. ಆದರೆ ಸ್ಥಳಾಂತರಿಸಿದ ಆನೆಗಳು ಮತ್ತೆ ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಿಗೆ ವಾಪಸಾಗುವ ಆತಂಕವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರತಿವರ್ಷ ಆನೆ, ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳ ದಾಳಿಯಿಂದ 40ರಿಂದ 45 ಮಂದಿ ಮೃತಪಟ್ಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಆವಾಸಸ್ಥಾನ ನಾಶ ಮತ್ತು ಆಹಾರದ ಕೊರತೆಯಿಂದ ವನ್ಯಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಸಕರು ಸೂಕ್ತ ಸಲಹೆ ನೀಡಲಿ. ಬೇಲೂರು ಹಾಗೂ ಚಿಕ್ಕಮಗಳೂರು ಎರಡೂ ಭಾಗದ ಜನರಿಗೆ ತೊಂದರೆಯಾಗದ ನಿರ್ಧಾರ ಕೈಗೊಳ್ಳೋಣ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆನೆ ಓಡಿಸುವ ಕಾರ್ಯಾಚರಣೆ ಸ್ಥಗಿತ: ಮೂಡಿಗೆರೆ ಭಾಗದಲ್ಲಿ 38 ಕಾಡಾನೆಗಳಿವೆ, ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ ಸಂದೇಶ
ಏತನ್ಮಧ್ಯೆ, ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಸದ್ಯದ ಮಟ್ಟಿಗೆ ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಮುಂದಿನ ಸ್ಪಷ್ಟ ಸೂಚನೆ ಬರುವವರೆಗೂ ಕಾಡಾನೆಗಳನ್ನು ಓಡಿಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ. ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್ಒ ಬೋರಯ್ಯ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 23 November 26