ಇ ಖಾತಾ ಹಂಚಿಕೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಜಂಟಿ ಕಾರ್ಯಪಡೆ ರಚನೆ
ಕರ್ನಾಟಕ ಸರ್ಕಾರವು ಇ-ಖಾತಾ ಹಂಚಿಕೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಒಂದು ಜಂಟಿ ಕಾರ್ಯಪಡೆಯನ್ನು ರಚಿಸಿದೆ. ಗ್ರಾಮೀಣಾಭಿವೃದ್ಧಿ, ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ರಚನೆ ಮಾಡಲಾಗಿದೆ. ಎರಡು ತಿಂಗಳೊಳಗೆ ವರದಿ ಸಲ್ಲಿಸಲು ಕಾರ್ಯಪಡೆಗೆ ಸೂಚಿಸಲಾಗಿದೆ.
ಬೆಂಗಳೂರು, ನವೆಂಬರ್ 13: ಇ-ಖಾತಾ (E-Khata) ಹಂಚಿಕೆಯಲ್ಲಿನ ಸಮಸ್ಯೆ ಪರಿಹಾರಕ್ಕೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ & ಗ್ರಾಮಾಂತರ ಮೂರು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ರಚನೆ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ, ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ವಿಕಾಸಸೌಧದಲ್ಲಿ ನಡೆದ ಸಚಿವತ್ರಯರ ಸಭೆಯಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಇ-ಸ್ವತ್ತು, ಇ-ಆಸ್ತಿ, ಇ-ವಿನ್ಯಾಸ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸೂಚಿಸಲಾಗಿದೆ.
ಪರಿಹಾರೋಪಾಯಕ್ಕೆ ಸೂಚನೆ
ಇನ್ನು ಸಭೆಯಲ್ಲಿ ಖಾತಾ ರಹಿತ ಆಸ್ತಿಗಳ ನೋಂದಣಿ ಸ್ಥಗಿತದಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲಾಗಿದೆ. ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಕಾರ್ಯಪಡೆ ಅಧ್ಯಕ್ಷತೆಯ ಅಭಿವೃದ್ಧಿ ಆಯುಕ್ತ ಉಮಾ ಮಹದೇವನ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್
ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣಾ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡುವಂತೆ ಸೂಚಿಸಲಾಗಿದ್ದು, ಖಾತಾ ವಿತರಿಸುವಲ್ಲಿ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳೂ ಸೇರಿ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಂತೆ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಸೌಲಭ್ಯ ಲಭ್ಯ
ಇ ಖಾತಾ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಕೃಷ್ಣಬೈರೇಗೌಡ, ಇ ಖಾತಾ ಪ್ರಕ್ರಿಯೆಯನ್ನು ಸುಧಾರಿಸುವ ಸಲುವಾಗಿ ಬಿಬಿಎಂಪಿಯೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ್ದು, ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗಿದೆ. ಇ ಖಾತಾ ಅಗತ್ಯವಿರುವವರಿಗೆ ಸಹಾಯ ಮಾಡಲು ಬಿಬಿಎಂಪಿಯ 11 ಸಮರ್ಪಿತ ಸಿಬ್ಬಂದಿಗಳನ್ನು ತಕ್ಷಣದ ವಹಿವಾಟು, ನೋಂದಣಿಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಇ-ಖಾತಾ ಪಡೆಯುವ ಸುಲಭ ಮಾಹಿತಿ ನೀಡಲು ಕನ್ನಡ ಮತ್ತು ಇಂಗ್ಲಿಷ್ ವೀಡಿಯೋಗಳು ಲಭ್ಯವಿವೆ.
ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ
ಕರಡು ಇ- ಖಾತಾದಲ್ಲಿನ ದೋಷಗಳಿಗಾಗಿ ತಿದ್ದುಪಡಿಗಳನ್ನು ಅನುಮತಿಸಲಾಗಿದೆ. ಮೊದಲ ಬಾರಿಗೆ ಖಾತಾ ಪಡೆಯುತ್ತಿರುವ ಅಪಾರ್ಟ್‌ಮೆಂಟ್‌ಗಳು, ಪಾರ್ಕ್‌ಗಳು, ಸಿಎ ಸೈಟ್‌ಗಳು, ಹೊಸ ಲೇಔಟ್‌ಗಳಲ್ಲಿನ ರಸ್ತೆಗಳು ಇತ್ಯಾದಿಗಳಿಗೆ ಪರಿಹಾರಗಳನ್ನು ಒದಗಿಸಬೇಕು. ಇನ್ನೂ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಎಂದು ತಿಳಿಸಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.