ವಕ್ಫ್ ಬೆನ್ನಲ್ಲೇ ದೇವಸ್ಥಾನಗಳ ಆಸ್ತಿ ರಕ್ಷಣೆಗೆ ತೀರ್ಮಾನ, ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಸಹಾಯ ಧನ
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ವೈಷ್ಣೋದೇವಿಗೆ ತೆರಳುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಸಹಾಯ ಧನ , ದೇವಸ್ಥಾನಗಳ ಆಸ್ತಿಗಳನ್ನು ರಕ್ಷಣೆ ಸೇರಿದಂತೆ ಇನ್ನು ಕೆಲ ಮಹತ್ವದ ತೀರ್ಮಾನನ್ನು ಕೈಗೊಂಡಿದ್ದು, ಅವು ಈ ಕೆಳಗಿನಂತಿವೆ ನೋಡಿ.
ಬೆಂಗಳೂರು, (ನವೆಂಬರ್ 13): ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಸಹಾಯ ಧನ ನೀಡಲು ತೀರ್ಮಾನಿಸಲಾಗಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆ ವಕ್ಫ್ ಆಸ್ತಿ ಬೆನ್ನಲ್ಲೇ ದೇವಸ್ಥಾನಗಳ ಆಸ್ತಿ ರಕ್ಷಣೆಗಾಗಿ ಸರ್ವೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪ್ರಮುಖವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದದ ಬಳಿಕ ಮುಜುರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಕೂಡಲೇ ಸರ್ವೆ ಮಾಡಲು ತೀರ್ಮಾನಿಸಲಾಗಿದೆ.
ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
- ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್ ಎದುರು ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
- ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಲು ತೀರ್ಮಾನ.
- ಮಕ್ಕಳಿಗೆ ನೀಡುತ್ತಿರುವ ವಿದ್ಯಾ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿ ಡಿ. 31 ರವರೆಗೂ ಕಾಲಾವಕಾಶ.
- ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ದಾಖಲೆ ಮಾಡಲು ಹಾಗೂ ಆಸ್ತಿಗಳನ್ನು ರಕ್ಷಿಸಲು ತೀರ್ಮಾನ.
- ಅವಧಿ ಮುಗಿಯುವ 14 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅವಧಿ ಮುಗಿದ ನಂತರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನ.
- ಅರ್ಜಿ ಸ್ವೀಕಾರವಾಗಿರುವ 28 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅರ್ಜಿ ಸ್ವೀಕಾರವಾಗದೇ ಇರುವ 13 ದೇವಾಲಯಗಳಿಗೆ ಪುನಃ ಅರ್ಜಿ ಕರೆಯಲು ತೀರ್ಮಾನ.
- ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಖಾಲಿ ಇರುವ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲು ತೀರ್ಮಾನ.
Published On - 10:02 pm, Wed, 13 November 24