
ಬೆಂಗಳೂರು, ಏಪ್ರಿಲ್ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ಉದ್ವಿಗ್ನತೆ ಮತ್ತು ಜಾಗತಿಕ ವಿದ್ಯಮಾನಗಳ ಮಧ್ಯೆ ಇತ್ತ ಕರ್ನಾಟಕದಲ್ಲಿ (Karnataka) ತೈಲ ಮತ್ತು ಅನಿಲ ಪೂರೈಕೆ ಸ್ಥಿರ, ಸದೃಢ ಮತ್ತು ಸಂಪೂರ್ಣ ನಿಯಂತ್ರಣದಲ್ಲಿದೆ. ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯ ಜಾಲವನ್ನು ಹೊಂದಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಮಾಹಿತಿ ನೀಡಿವೆ.
ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಹಾಗೂ ಭಾರತದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಗೇಲ್ ಇಂಡಿಯಾ ಜಂಟಿಯಾಗಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಸಿದ್ಧಾರ್ಥ ಅಗರವಾಲ್, ರಾಜ್ಯವು 15 ಎಂಎಂಟಿಪಿಎ (ಮೆಟ್ರಿಕ್ ಟನ್ಸ್ ಪರ್ ಆನಮ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಸಂಸ್ಕರಣಾಗಾರವನ್ನು ಹೊಂದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ ಮತ್ತು ಎಲ್ಲಾ ರಿಟೇಲ್ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಸ್ಕರಣಾಗಾರಗಳಿಂದ ಟರ್ಮಿನಲ್, ಡಿಪೋ ಹಾಗೂ ರಿಟೇಲ್ ಮಳಿಗೆಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ತೈಲದ ಪೂರೈಕೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!
ಗೃಹಬಳಕೆಯ ಎಲ್ಪಿಜಿಗೆ ಸಂಬಂಧಿಸಿದಂತೆ, ಕರ್ನಾಟಕವು ಸಮರ್ಪಕ ಮತ್ತು ನಿರಂತರ ಪೂರೈಕೆಯನ್ನು ಪಡೆಯುತ್ತಿದೆ. ಮಾರ್ಚ್ನಲ್ಲಿ ಆತಂಕ ಕಾರಣಕ್ಕೆ ಖರೀದಿ ಹಿನ್ನೆಲೆ ಬುಕ್ಕಿಂಗ್ಗಳು ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾಗಿದ್ದು, ಇದರಿಂದ ವಿತರಣಾ ಅವಧಿ ಸ್ವಲ್ಪ ವಿಳಂಬವಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ದಿನಕ್ಕೆ 3.06 ಲಕ್ಷಕ್ಕೆ ಬುಕ್ಕಿಂಗ್ ಇಳಿಕೆಯಾಗಿದ್ದು, ವಿತರಣಾ ಅವಧಿಯೂ ಕ್ರಮೇಣ ಸುಧಾರಿಸಲಾಗುತ್ತಿದೆ ಎಂದರು.
ಎಲ್‌ಪಿಜಿ ಸೇವೆಗಳಲ್ಲಿ ಡಿಜಿಟಲ್ ಬಳಕೆಯು ಗಣನೀಯವಾಗಿ ಸುಧಾರಿಸಿದ್ದು, ಶೇಕಡಾ 94.5 ರಷ್ಟು ಬುಕ್ಕಿಂಗ್ ಡಿಜಿಟಲ್ ಮೂಲಕ ನಡೆಯುತ್ತಿವೆ. ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ವ್ಯವಸ್ಥೆಯ ಪಾಲನೆಯಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಇದು ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಿದೆ ಹಾಗೂ ಸಿಲಿಂಡರ್ಗಳು ಸರಿಯಾದ ಗ್ರಾಹಕರಿಗೆ ತಲುಪಿಸುತ್ತದೆ.
ವಾಣಿಜ್ಯ ಎಲ್.ಪಿ.ಜಿ. ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, ಮಾರ್ಚ್ 2026ರಲ್ಲಿ ಕರ್ನಾಟಕ ಸರ್ಕಾರವು ಹೊರಡಿಸಿದ ನಿರ್ದೇಶನಗಳ ಅನುಸಾರವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾರಿಗೆಯಂತಹ ಅಗತ್ಯ ಸೇವೆಗಳಿಗೆ ಆದ್ಯತೆ ನೀಡಿ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ನಿರ್ವಹಿಸಲಾಗುತ್ತಿದೆ. ಸಿಎನ್ಜಿ ಬಳಕೆಯಲ್ಲಿನ ಸ್ಥಿರ ಬೆಳವಣಿಗೆ ಮತ್ತು ಸಿಟಿ ಗ್ಯಾಸ್ ವಿತರಣಾ ಜಾಲಗಳ ವಿಸ್ತರಣೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ಗಾಗಿ ರಾಜಧಾನಿ ಜನರ ಕ್ಯೂ!
ಆಟೋ ಎಲ್‌ಪಿಜಿ ಗೆ ಸಂಬಂಧಿಸಿದಂತೆ, ಖಾಸಗಿ ಕಂಪನಿಗಳ ಕಾರ್ಯಾಚರಣೆ ಕಡಿಮೆಯಾದ ಕಾರಣ ತೈಲ ಮಾರುಕಟ್ಟೆ ಕಂಪನಿಗಳ ಮಳಿಗೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಕೇವಲ ಶೇ 20ರಷ್ಟು ಮಾರುಕಟ್ಟೆ ಪಾಲನ್ನು ಮಾತ್ರ ಹೊಂದಿವೆ ಎಂಬುದು ಗಮನಾರ್ಹ. ಈ ಸೀಮಿತ ಅಸ್ತಿತ್ವ ಮತ್ತು ವಿತರಣಾ ಮೂಲಸೌಕರ್ಯದ ಮಿತಿಗಳ ನಡುವೆಯೂ, ಹೆಚ್ಚಿದ ಬೇಡಿಕೆಯನ್ನು ಪೂರೈಸಲು ತೈಲ ಕಂಪನಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ಮೀರಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿದರು.
ಗೇಲ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂಜಯಕುಮಾರ ಸಿಂಗ್ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಆರಂಭವಾದಾಗಿನಿಂದ ಈವರೆಗೆ ದೇಶದಲ್ಲಿ 5.01 ಲಕ್ಷ ಪಿಎನ್ಜಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಗ್ರಾಹಕರು ಆನ್ಲೈನ್ ಅಥವಾ ನೇರವಾಗಿ ಕಚೇರಿಗೆ ಬಂದು ಪಿಎನ್ಜಿ ಸಂಪರ್ಕ ಪಡೆಯಬಹುದು. ಪಿಎನ್ಜಿ ಸಂಪರ್ಕದ ಜಾಲವನ್ನು ಮತ್ತಷ್ಟು ಬಲಪಡಿಸಲು ಹೊಟೇಲ್ ಸಂಘಗಳು ಹಾಗೂ ಅಪಾರ್ಟ್‌ಮೆಂಟ್ ಮಾಲೀಕರ ಜೊತೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್ಜಿ ರವೀಂದ್ರ ಮಾತನಾಡಿ, ಗ್ರಾಹಕರು ಪಿಎನ್ಜಿ ಸೌಲಭ್ಯಕ್ಕೆ ವರ್ಗಾಯಿಸುವಂತೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇದು ಕಡಿಮೆ ವೆಚ್ಚದಾಯಕ ಹಾಗೂ ಸುಲಭವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.