Corona Vaccine: ಎರಡನೇ ಡೋಸ್ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಪಡೆಯುವವರಿಗೆ ಶುಭಸುದ್ದಿ
ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆ ಅಡಿ 2 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ದೇಶದ 25 ನಗರಗಳ ಖಾಸಗಿ ಆಸ್ಪತ್ರೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಿರುವುದಾಗಿ ಭಾರತ್ ಬಯೋಟೆಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ತಿಳಿಸಿದ್ದಾರೆ.

ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರವಾಗಿ ಲಸಿಕೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೊರೊನಾ ಲಸಿಕೆ ಪೂರೈಕೆ ಆಗಿದೆ. ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆ ಅಡಿ 2 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಅತ್ತ ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ದೇಶದ 25 ನಗರಗಳ ಖಾಸಗಿ ಆಸ್ಪತ್ರೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಿರುವುದಾಗಿ ಭಾರತ್ ಬಯೋಟೆಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ತಿಳಿಸಿದ್ದಾರೆ. ಸದ್ಯ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಈ ಎರಡೂ ಲಸಿಕೆಗಳ ಪೂರೈಕೆ ಆಗಿರುವುದರಿಂದ ರಾಜ್ಯದ ಜನತೆ ಕೊಂಚ ನಿರಾಳರಾಗಬಹುದಾಗಿದೆ.
ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆ ಅಡಿ ತರಿಸಿಕೊಳ್ಳಲಾಗಿರುವ 2 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಬೆಂಗಳೂರಿನ ಆನಂದರಾವ್ ವೃತ್ತದ ಉಗ್ರಾಣದಲ್ಲಿ ಸಂಗ್ರಹ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಕಡೆಗಳಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಜನ ವಾರಗಳಿಂದ ಕಾಯುತ್ತಿದ್ದು, ಇದೀಗ 2 ಲಕ್ಷ ಡೋಸ್ ಪೂರೈಕೆ ಆಗಿರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕೊಂಚ ಸುಲಭವಾಗಲಿದೆ.
ಹತ್ತಿರದ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆಯಾ ಎಂದು ತಿಳಿಯುವುದು ಹೇಗೆ? ಕೊವಿನ್ ಪೋರ್ಟಲ್ನಲ್ಲಿ ನೀವು ನಿಮ್ಮ ಪ್ರದೇಶದ ಪಿನ್ಕೋಡ್ ಲಗತ್ತಿಸಿದರೆ ಸಮೀಪದ ಕೇಂದ್ರಗಳಲ್ಲಿ ಯಾವ ಲಸಿಕೆ ಎಷ್ಟು ಡೋಸ್ ಲಭ್ಯವಿದೆ ಹಾಗೂ ಯಾವ ದಿನಾಂಕದಂದು ಯಾವ ವಯೋಮಾನದವರಿಗೆ ನೀಡಲಾಗುತ್ತದೆ ಎಂಬೆಲ್ಲಾ ವಿವರಗಳು ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ. ಪಿನ್ಕೋಡ್ ಬದಲಿಗೆ ರಾಜ್ಯ ಹಾಗೂ ಜಿಲ್ಲೆಯ ಹೆಸರನ್ನು ನಮೂದಿಸಿದರೆ ಇಡೀ ಜಿಲ್ಲೆಯ ಲಸಿಕಾ ಕೇಂದ್ರಗಳ ಪಟ್ಟಿ ಹಾಗೂ ಅಲ್ಲಿ ನೀಡಲಾಗುತ್ತಿರುವ ಲಸಿಕೆ ಬಗ್ಗೆ ಮಾಹಿತಿ ದೊರೆಯುತ್ತದೆ. ಇದನ್ನಾಧರಿಸಿ ನೀವು ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್ ಅಥವಾ ಕೊವಿಶೀಲ್ಡ್ ಇವೆರಡರಲ್ಲಿ ಯಾವ ಲಸಿಕೆ ಲಭ್ಯವಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಲಸಿಕೆಯ ವಿವರದ ಜತೆಗೆ ಕೊವಿನ್ ಪೋರ್ಟಲ್ನಲ್ಲಿ ಯಾವ ಕೇಂದ್ರಗಳಲ್ಲಿ ಉಚಿತ ಲಸಿಕೆ ಲಭ್ಯವಿದೆ ಹಾಗೂ ಯಾವ ಕೇಂದ್ರದಲ್ಲಿ ಹಣಕೊಟ್ಟು ಲಸಿಕೆ ಪಡೆಯಬೇಕು ಎಂಬ ವಿವರವೂ ಸಿಗಲಿದೆ. ಲಸಿಕೆ ಪಡೆಯಲು ನೀವು ಅರ್ಹರಾಗಿದ್ದು, ನೋಂದಣಿ ಮಾಡಿಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಂಬರ್ ಲಗತ್ರಿಸಿ ಓಟಿಪಿ ಪಡೆಯುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆರೋಗ್ಯ ಸೇತು ಆ್ಯಪ್ ಮೂಲಕವೂ ಲಸಿಕೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಅಂತೆಯೇ ಎರಡನೇ ಡೋಸ್ ಪಡೆಯುವವರು ಸಹ ಮೊದಲ ಈ ಮೂಲಕವೇ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಕೊರೊನಾ ದೇಹವನ್ನು ಪ್ರವೇಶಿಸಿದ ಸರಾಸರಿ 5 ದಿನಗಳ ನಂತರ ಕಂಡುಬರುವ ಈ ಬದಲಾವಣೆಗಳನ್ನು ಕಡೆಗಣಿಸಲೇಬೇಡಿ