ಹುಣಸೋಡು ಪ್ರಕರಣ ತನಿಖೆಗೆ ಸರಕಾರಿ ಆದೇಶವೇ ಹೊರಬಿದ್ದಿಲ್ಲ! ಆದ್ರೆ ಗಣಿಗಾರಿಕೆ ಪರವಾನಿಗೆ ಕೋರಿದ್ದ 23 ಹೊಸ ಅರ್ಜಿ ವಜಾ..
ಹುಣಸೋಡಿನಲ್ಲಿ ಕಳೆದ ವಾರ ನಡೆದ ಗಣಿ ವಿಸ್ಫೋಟದ ತನಿಖೆ ಹಳ್ಳ ಹಿಡಿಯುವ ಎಲ್ಲಾ ಲಕ್ಷಣ ಕಾಣುತ್ತಿದೆ. ಜಿಲ್ಲಾಡಳಿತ ಗಣಿಗಾರಿಕೆಯ ಹೊಸ ಅರ್ಜಿಗಳನ್ನು ತಿರಸ್ಕರಿಸಿದರೂ ತನಿಖೆ ಚುರುಕಾಗಿ ನಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗದ ಹುಣಸೋಡಿನಲ್ಲಿ ಕಳೆದ ವಾರ ನಡೆದ ಸ್ಫೋಟದ ನಂತರ, ಗಣಿಗಾರಿಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಇನ್ನೂ 23 ಅರ್ಜಿಗಳನ್ನು ಜಿಲ್ಲಾಡಳಿತ ವಜಾಗೊಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ, ಅನಂತ ಹೆಗಡೆ ಆಶೀಸರ ಅವರ ನೇತೃತ್ವದಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಶೆಟ್ಟಿಹಳ್ಳಿ ಅಭಯಾರಣ್ಯದ ಸುತ್ತಮತ್ತು ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಅಥವಾ ಅದರ ಅಂಚಿನ ಜಾಗದಲ್ಲಿ ಇರುವ ಕಂದಾಯ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಬೇರೆ ಬೇರೆ ಕಂಪೆನಿಗಳು ಮತ್ತು ಸ್ಥಳೀಯ ವ್ಯಕ್ತಿಗಳು 23 ಅರ್ಜಿಗಳನ್ನು ಸಲ್ಲಿಸಿದ್ದರು. ಅರಣ್ಯ ಪ್ರದೇಶ ಅಥವಾ ಸುತ್ತಮುತ್ತಲಿನೆ ಕಂದಾಯ ಭೂಮಿಯಲ್ಲಿ ಗಣಿಗಾರಿಕೆಗೆ ನೀಡಬಾರದು ಎಂಬ ಕಟ್ಟುನಿಟ್ಟಿನ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ 23 ಅರ್ಜಿಗಳನ್ನು ವಜಾಗೊಳಿಸಲಾಗಿದೆ.
ಶಿವಮೊಗ್ಗದ ಜಿಲ್ಲೆಯಲ್ಲಿ ಒಟ್ಟೂ 150 ಕಡೆ ಗಣಿಗಾರಿಕೆ ನಡೆಯುತ್ತಿತ್ತು. ಅದರಲ್ಲಿ 75 ಕ್ಕೆ ಯಾವ ಅನುಮತಿಯೂ ಇರಲಿಲ್ಲ. ಹುಣಸೋಡಿನ ದುರ್ಘಟನೆಯ ನಂತರ ಈಗ ಎಲ್ಲಾ ಗಣಿಗಳನ್ನು ಮುಚ್ಚಲಾಗಿದೆ ಮತ್ತು ಕ್ರಶರ್ಗಳನ್ನು ನಡೆಸುವವರಿಗೆ ನೋಟಿಸ್ ನೀಡಲಾಗಿದೆ ಎಂದು ಮೊನ್ನೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯ ಪ್ರಗತಿ ಪೊಲೀಸ್ ತನಿಖೆ ಕುಂಟುತ್ತ ಸಾಗಿದೆ. ಹುಣಸೋಡಿನ ಘಟನೆಯ ತನಿಖೆಯಲ್ಲಿ ಹೊಸ ತಿರುವುಗಳು ಯಾವುದೂ ಕಾಣಿಸುತ್ತಿಲ್ಲ. ಇದಕ್ಕೆ ಎರಡು ಕಾರಣಗಳು ಎಂದು ತನಿಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು, ಪ್ರಮುಖ ಆರೋಪಿಯ ಸುಳಿವು ಸಿಗದಿದ್ದುದು. ಎರಡು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ ವಿಶೇಷ ತನಿಖೆಯ ಅದೇಶ ಇನ್ನೂ ಹೊರ ಬೀಳದೇ ಇರುವುದು.
ಯಡಿಯೂರಪ್ಪ ಘಟನೆ ನಡೆದ ಮರುದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ವಿಶೇಷ ತನಿಖೆ ಮಾಡಿಸುವುದಾಗಿ ಘೋಷಿಸಿದ್ದರು. ಇನ್ನೂವರೆಗೆ ಆ ತನಿಖೆಯ ಸ್ವರೂಪವಾಗಲೀ ಅದರ ಕುರಿತಾದ ಸರಕಾರಿ ಆದೇಶವಾಗಲೀ ಹೊರಬಿದ್ದಿಲ್ಲ. ತನಿಖೆ ಕುಂಟುತ್ತ ನಡೆಯಲು ಇದೂ ಒಂದು ಕಾರಣ, ಎಂದು ಶಿವಮೊಗ್ಗ ಜಿಲ್ಲೆಯ ಓರ್ವ ಬಿಜೆಪಿ ಶಾಸಕರು ಹೇಳಿದ್ದಾರೆ.
ಇಲ್ಲೀವರೆಗೆ ಬಂದಿರುವ ಹೊಸ ಮಾಹಿತಿಗಳೇನೆಂದರೆ, ಕೆಲವರು ಬಗರ್ ಹುಕುಮ್ ಭೂಮಿಯನ್ನು ಪಡೆದು ಅದನ್ನು ವ್ಯವಸಾಯಕ್ಕೆ ಬಳಸದೇ ಗಣಿಗಾರಿಕೆಗೆ ಗೇಣಿ ಕೊಟ್ಟಿರುವುದು ಪೊಲೀಸ್ರಿಗೆ ತಿಳಿದುಬಂದಿದೆ. ಬಡವರಿಗೆ ಮಾತ್ರ ಭೂಮಿ ಕೊಡುವು ಈ ಯೋಜನೆಯ ದುರುಪಯೋಗ ಪಡೆದುಕೊಂಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ, ಜಿಲ್ಲಾಡಳಿತ ಬಗರ್ ಹುಕುಮ್ ಭೂಮಿ ದುರುಪಯೋಗ ಮಾಡಿಕೊಂಡವರಿಗೆ ನೋಟೀಸ್ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಗಣಿಗಾರಿಕೆಯ ಹಿಂದೆ ದೊಡ್ಡ ರಾಜಕೀಯ ಕುಳಗಳು ಇರಬಹುದು ಎಂದು ಕೆಲವು ಮಾಧ್ಯಮಗಳು ಘಟನೆ ನಡೆದ ಎರಡನೇ ದಿನವೇ ಬಿತ್ತರಿಸಿದ್ದವು. ಆದರೆ, ಸ್ಥಳೀಯ ಪುಡಾರಿ ರಾಜಕಾರಿಣಿಗಳ ನಂಟನ್ನು ಬಿಟ್ಟರೆ, ಇಲ್ಲೀವರೆಗೂ ಈ ಗಣಿ ಗುತ್ತಿಗೆದಾರರಿಗೂ ಮತ್ತು ದೊಡ್ಡ ರಾಜಕಾರಣಿಗಳಿಗೂ ಸಂಬಂಧ ಇರುವುದು ಕಾಣುತ್ತಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.