ಪತ್ರಿಕಾ ವಿತರಕರ ಬೇಡಿಕೆಗಳ ಬಗ್ಗೆ ಸರ್ಕಾರ ಸಹಾನುಭೂತಿಯಿಂದ ಪರಿಗಣನೆ: ಕೆವಿಪಿ
ಪತ್ರಿಕಾ ವಿತರಕರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ. ಈಗಾಗಲೇ ನೀಡಿದ್ದ ಭರವಸೆಯಂತೆ ಕಾರ್ಮಿಕ ಇಲಾಖೆಯ ಮೂಲಕ ಪತ್ರಿಕಾ ವಿತರಕರಿಗೆ ಸೌಲಭ್ಯ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ತಿಳಿಸಿದ್ದಾರೆ.
ಬೆಂಗಳೂರು, ಜೂನ್ 19: ಪತ್ರಿಕಾ ವಿತರಕರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ತಿಳಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರುಗಳು ವಿಧಾನಸೌಧದಲ್ಲಿ (Vidhansoudha) ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಅವರು ಈ ಭರವಸೆ ನೀಡಿದರು.
ಈಗಾಗಲೇ ನೀಡಿದ್ದ ಭರವಸೆಯಂತೆ ಕಾರ್ಮಿಕ ಇಲಾಖೆಯ ಮೂಲಕ ಪತ್ರಿಕಾ ವಿತರಕರಿಗೆ ಸೌಲಭ್ಯ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ಪತ್ರಿಕೆ ಹಾಕುವಾಗ ಮೃತಪಟ್ಟವರಿಗೆ ಮತ್ತು ಅಪಘಾತದಲ್ಲಿ ಗಾಯಗೊಂಡ ಪತ್ರಿಕಾ ವಿತರಕರಿಗೆ ನೆರವು ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ವಿತರಕರಿಗೆ ನಿವೇಶನವನ್ನು ನೀಡಲಾಗಿದ್ದು, ಅದು ತಾಂತ್ರಿಕ ಕಾರಣಕ್ಕಾಗಿ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದಾಗ, ತಕ್ಷಣವೇ ಕಂದಾಯ ಇಲಾಖೆ ಸಚಿವಾಲಯಕ್ಕೆ ಪೋನಾಯಿಸಿದ ಕೆ.ವಿ.ಪ್ರಭಾಕರ್ ಅವರು, ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಮಾಡಿ ನಿವೇಶನ ನೀಡುವಂತೆ ಸೂಚಿಸಿದರು.
ಪತ್ರಿಕಾ ವಿತರಕರ ದಿನಾಚರಣೆಗೆ ಆಹ್ವಾನ:
ಚಿತ್ರದುರ್ಗದಲ್ಲಿ ನಡೆಸಲು ಉದ್ದೇಶಿಸಿರುವ ಪತ್ರಿಕಾ ವಿತರಕರ ದಿನಾಚರಣೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಇದೇ ಸಂದರ್ಭದಲ್ಲಿ ಆಹ್ವಾನಿಸಲಾಯಿತು. ಕಳೆದ ಬಾರಿ ತುಮಕೂರಿನಲ್ಲಿ ನಡೆದ ವಿತರಕರ ದಿನಾಚರಣೆಯಲ್ಲಿ ಭಾಗವಹಿಸಿದ್ದೆ. ಚಿತ್ರದುರ್ಗ ಕಾರ್ಯಕ್ರಮಕ್ಕೂ ಬರುವುದಾಗಿ ಪ್ರಭಾಕರ್ ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ