AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ? ಮಹತ್ವದ ಕ್ರಮಕ್ಕೆ ಕರ್ನಾಟಕ ಸರ್ಕಾರ ಚಿಂತನೆ!

ಅಪ್ರಾಪ್ತರಲ್ಲಿ ಸೋಶಿಯಲ್ ಮೀಡಿಯಾ ದುರ್ಬಳಕೆ ಹಾಗೂ ವ್ಯಸನ ತಡೆಯುವುದಕ್ಕಾಗಿ 16 ವರ್ಷದ ಒಳಗಿನವರಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಬಗ್ಗೆ ಕರ್ನಾಟಕ ಸರ್ಕಾರ ಮಹತ್ವದ ಚಿಂತನೆ ನಡೆಸುತ್ತಿರುವುದು ತಿಳಿದುಬಂದಿದೆ. ಈ ವಿಚಾರ ವಿಧಾನಸಭೆ ವಿಶೇಷ ಅಧಿವೇಶನದಲ್ಲೂ ಚರ್ಚೆಯಾಗಿದ್ದು, ಸಚಿವರು ನೀಡಿದ ಮಾಹಿತಿ ಇಲ್ಲಿದೆ.

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ? ಮಹತ್ವದ ಕ್ರಮಕ್ಕೆ ಕರ್ನಾಟಕ ಸರ್ಕಾರ ಚಿಂತನೆ!
ಸಾಂದರ್ಭಿಕ ಚಿತ್ರImage Credit source: TV9 Network
Ganapathi Sharma
|

Updated on: Jan 31, 2026 | 9:46 AM

Share

ಬೆಂಗಳೂರು, ಜನವರಿ 31: ಆಸ್ಟ್ರೇಲಿಯಾ ಮತ್ತು ಗೋವಾ ಸರ್ಕಾರಗಳ ರೀತಿಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು (Social Media) ನಿಷೇಧಿಸುವ ಬಗ್ಗೆ ಕರ್ನಾಟಕ (Karnataka) ಕೂಡ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾಹಿತಿ ನೀಡಿದರು. ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಎಸ್ ಸುರೇಶ್ ಕುಮಾರ್‌ ಕಳವಳ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಗಂಭೀರ ವಿಷಯವಾಗಿದೆ ಎಂದು ಸಹಮತ ವ್ಯಕ್ತಪಡಿಸಿದರು. ಅಲ್ಲದೆ, ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಬಗ್ಗೆ ಯೋಚಿಸಲಾಗುವುದು ಎಂದರು.

ಈ ನಿಟ್ಟಿನಲ್ಲಿ ಫಿನ್​ಲ್ಯಾಂಡ್ ಈಗಾಗಲೇ ಕ್ರಮ ಕೈಗೊಂಡಿದೆ. ಬ್ರಿಟನ್ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿತು. ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಗಾಗಿ ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಐಟಿ-ಬಿಟಿ ಇಲಾಖೆಯು ಮೆಟಾ ಸಹಯೋಗದೊಂದಿಗೆ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಒಂದು ಲಕ್ಷ ಶಿಕ್ಷಕರನ್ನು ಒಳಗೊಂಡಂತೆ ಈ ಕಾರ್ಯ ನಡೆಸುತ್ತಿದೆ ಎಂದು ಅವರು ಹೇಳಿದರು.

ಡಿಜಿಟಲ್ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು 2025 ರ ಮಾರ್ಚ್​​ನಲ್ಲಿ ‘ಬಿಯಾಂಡ್ ಸ್ಕ್ರೀನ್ಸ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಡಿಜಿಟಲ್ ಡಿಟಾಕ್ಸ್ ಸೆಂಟರ್ ಮತ್ತು ಇಲಾಖೆಯ ಅಧಿಕೃತ ವೆಬ್‌ಸೈಟ್ ಅನ್ನು ಉದ್ಘಾಟಿಸಿದ ನಂತರ ಅವರು GAFX 2025 ಶೃಂಗಸಭೆಯಲ್ಲಿ ಈ ಉಪಕ್ರಮವನ್ನು ಘೋಷಿಸಿದ್ದರು. ಡಿಟಾಕ್ಸ್ ಸೆಂಟರ್ ಎಂಬುದು ಆರೋಗ್ಯಕರ ಡಿಜಿಟಲ್ ಬಳಕೆಗಾಗಿ ಸಂಪನ್ಮೂಲಗಳು, ಸಮಾಲೋಚನೆ ಇತ್ಯಾದಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಹುಶಾರ್​…. ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು!

ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ವಯಸ್ಸಿನ ಆಧಾರಿತ ನಿರ್ಬಂಧವನ್ನು ವಿಧಿಸುವಂತೆ ಗುರುವಾರ ಲೋಕಸಭೆಗೆ ಸಲ್ಲಿಸಲಾದ 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂಬುದನ್ನು ಸದನದಲ್ಲಿ ಸುರೇಶ್ ಕುಮಾರ್ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ