
ಬೆಂಗಳೂರು, ಸೆಪ್ಟೆಂಬರ್ 24: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಮೂರು ತಿಂಗಳಲ್ಲೇ ವರದಿ ನೀಡುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 24) ರಾಜ್ಯ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ಎನ್.ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, IPS ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್, ವೆಂಕಟೇಶ್ ಪ್ರಸನ್ನ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿದೆ. ತಿಂಗಳ ಹಿಂದೆ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸಂಜಯ್ ಕುಮಾರ್ ಪೀಠ ಮೊನ್ನೇ ಮಹತ್ವದ ಆದೇಶ ನೀಡಿದ್ದು, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಡೆಡ್ಲೈನ್ ನೀಡಿದೆ. ಅಲ್ಲದೇ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ತನಿಖೆಗೆ ಸೇರಿಸದಂತೆ ಹೊಸದಾಗಿ ಪ್ರಕರಣದ ತನಿಖೆಗೆ ಸುಪ್ರೀಂ ಸೂಚನೆ ನೀಡಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಆದೇಶದ ಮೂಲಕ ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದ್ದು, ಆರೋಪಿಗಳನ್ನ ಪತ್ತೆ ಹಚ್ಚುವ ನಿರೀಕ್ಷೆ ಮತ್ತೆ ಮೂಡಿದೆ.
ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯ, ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾದಳು. ಅಕ್ಟೋಬರ್ 10, 2012: ಧರ್ಮಸ್ಥಳದ ಮಣ್ಣಸಂಕ ಎಂಬಲ್ಲಿನ ಪೊದೆಯೊಂದರಲ್ಲಿ ಸೌಜನ್ಯಳ ಅರ್ಧನಗ್ನ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು.ಆಕೆಯನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಅಕ್ಟೋಬರ್ 11, 2012: ಸ್ಥಳೀಯ ಪೊಲೀಸರು ಮಾನಸಿಕ ಅಸ್ವಸ್ಥ ಎನ್ನಲಾದ ಸಂತೋಷ್ ರಾವ್ ಎಂಬಾತನನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದ್ರು. ಆದರೆ, ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಆತನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸೌಜನ್ಯ ಕುಟುಂಬ ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸಾಕಷ್ಟು ಹೋರಾಟ, ಪ್ರತಿಭಟನೆಗಳು ನಡೆದಿವೆ.
ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೊದಲು ರಾಜ್ಯ ಸಿಐಡಿ (CID) ತನಿಖೆಗೆ ನೀಡಿತ್ತು. ನಂತರ ತನಿಖೆಯು ತೃಪ್ತಿಕರವಾಗಿಲ್ಲದ ಕಾರಣ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಬಳಿಕ ತನಿಖೆ ನಡೆಸಿದ ಸಿಬಿಐ, ಸಂತೋಷ್ ರಾವ್ ಮಾತ್ರವೇ ಏಕೈಕ ಆರೋಪಿ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದ ಇತರ ಮೂವರು ವ್ಯಕ್ತಿಗಳಿಗೆ ಸಿಬಿಐ ಕ್ಲೀನ್ ಚಿಟ್ ನೀಡಿತ್ತು.
ಇನ್ನು ಬೆಂಗಳೂರಿನ 50ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ವಿಶೇಷ ಸಿಬಿಐ) ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿತ್ತು. ತನಿಖಾ ಸಂಸ್ಥೆಗಳ ವೈಫಲ್ಯ ಹಾಗೂ ಸಾಕ್ಷ್ಯ ನಾಶದ ಸಾಧ್ಯತೆಗಳ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿತ್ತು. ಹೀಗಾಗಿ ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎನ್ನುವುದೇ ನಿಗೂಢವಾಗಿಯೇ ಉಳಿದಿಕೊಂಡಿದ್ದು, ಇದೀಗ ಹೊಸದಾಗಿ ರಚನೆಯಾಗಿರುವ ಎಸ್ಐಟಿ ತಂಡ, ಕೃತ್ಯ ಎಸಗಿದವರನ್ನ ಪತ್ತೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
Published On - 10:17 pm, Thu, 24 September 26