
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ್ (Halappa achar) ಸ್ವ ಜಿಲ್ಲೆ ಮತ್ತು ಸ್ವಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕಳೆದ ಮೂರು ತಿಂಗಳಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗೌರವಧನ ಮಂಜೂರಾಗಿಲ್ಲ. ಇದರಿಂದಾಗಿ ಜೀವನ ಸಾಗಿಸಲು ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ಪರದಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ 10 ಸಾವಿರ ರೂಪಾಯಿ ಮತ್ತು ಮಿನಿ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯರಿಗೆ 6,250 ರೂ ಹಾಗೂ ಸಹಾಯಕಿಯರಿಗೆ 5,250 ರೂಪಾಯಿ ಗೌರವಧನ ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಸರಿಯಾಗಿ ಪ್ರತಿ ತಿಂಗಳು ಗೌರವಧನ ಪಾವತಿಯಾಗುತ್ತಿತ್ತು. ಆದರೆ ಕಳೆದ 2-3 ತಿಂಗಳಿನಿಂದ ತಾಂತ್ರಿಕ ಸಮಸ್ಯೆಯಿಂದ ಗೌರವಧನ ಪಾವತಿ ಆಗಿಲ್ಲ. ಹೀಗಾಗಿ ದೈನಂದಿನ ಜೀವನ ನಡೆಸಲು ಅಂಗನವಾಡಿ ಸಿಬ್ಬಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕೊಪ್ಪಳ ತಾಲೂಕಿನಲ್ಲಿ 434 ಅಂಗನವಾಡಿ ಕಾರ್ಯಕರ್ತೆಯರು ಮತ್ತು 426 ಸಹಾಯಕಿಯರಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 326 ಕಾರ್ಯಕರ್ತೆರು, 315 ಸಹಾಯಕಿಯರಿದ್ದಾರೆ. ಕನಕಗಿರಿ ತಾಲೂಕಿನಲ್ಲಿ 321 ಕಾರ್ಯಕರ್ತೆಯರು, 302 ಸಹಾಯಕಿಯರಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 377 ಕಾರ್ಯಕರ್ತೆಯರು, 376 ಸಹಾಯಕಿಯರಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 392 ಕಾರ್ಯಕರ್ತೆರು, 381 ಸಹಾಯಕಿಯರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,850 ಕಾರ್ಯಕರ್ತೆಯರು ಮತ್ತು 1,800 ಸಹಾಯಕಿಯರಿದ್ದಾರೆ. ಈ ಪೈಕಿ ಕುಷ್ಟಗಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆರು, ಸಹಾಯಕಿಯರಿಗೆ ಅಕ್ಟೋಬರ್ ತಿಂಗಳವರೆಗೆ ಗೌರವಧನ ಪಾವತಿಯಾಗಿದ್ದು, ಉಳಿದೆಲ್ಲಾ ತಾಲೂಕುಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಆಗಷ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ಮೂರು ತಿಂಗಳಿನಿಂದಲೂ ಗೌರವಧನ ಪಾವತಿಯಾಗಿಲ್ಲ.
ಸೇವಾ ಭತ್ಯೆಯೇ ಬಳಕೆ
ಕಳೆದ ಮೂರು ತಿಂಗಳಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನಕ್ಕೆ ಅನುದಾನ ಮಂಜೂರಾಗದ ಕಾರಣಕ್ಕೆ ಸೇವಾ ಭತ್ಯೆಯನ್ನೇ ಬಳಕೆ ಮಾಡಲಾಗಿದೆ. 10 ವರ್ಷಗಳ ಒಳಗೆ ಸೇವೆ ಸಲ್ಲಿಸಿದವರಿಗೆ 10 ಸಾವಿರ ರೂ. ಸೇವಾ ಭತ್ಯೆ, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,250 ರೂ. ಹಾಗೂ 20 ವರ್ಷಗಳಿಗಿಂತಲೂ ಮೇಲ್ಪಟ್ಟು ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1,500 ರೂ. ಸೇವಾ ಭತ್ಯೆ ನೀಡಲಾಗುತ್ತದೆ. ಡಿಸೆಂಬರ್ವರೆಗಿನ ಸೇವಾ ಭತ್ಯೆಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಈ ಸೇವಾ ಭತ್ಯೆಯನ್ನೇ ಗೌರವಧನಕ್ಕೆ ಬಳಕೆ ಮಾಡಲಾಗಿದೆ. ಈ ಮೂರು ತಿಂಗಳ ಗೌರವಧನದ ಅನುದಾನವನ್ನು ಮುಂದಿನ ಸೇವಾ ಭತ್ಯೆಗೆ ಪಾವತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.
ಪಿಎಫ್ಎಂಎಸ್ ಸಾಫ್ಟ್‌ವೇರ್
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪಾವತಿಸುತ್ತಿವೆ. ರಾಜ್ಯ ಅನುದಾನ ಮತ್ತು ಕೇಂದ್ರದ ಅನುದಾನ ಬೇರೆ ಬೇರೆ ಸಮಯದಲ್ಲಿ ಬರುತ್ತಿತ್ತು. ಇದರಿಂದ ಅಂಗನವಾಡಿ ಸಿಬ್ಬಂದಿಗೆ ಗೌರವಧನ ಪಾವತಿಸಲು ತೊಂದರೆ ಆಗುತ್ತಿತ್ತು. ಆದರೆ ಈಗ ಪಬ್ಲಿಕ್ ಪೈನಾನ್ಸ್ ಮ್ಯಾನೇಜಮೆಂಟ್ ಸರ್ವಿಸ್ ಹೊಸ ಸಾಫ್ಟ್ ವೇರ್ ಅನುಷ್ಠಾನಗೊಳಿಸಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ಒಂದೇ ಬಾರಿಗೆ ಅಂಗನವಾಡಿ ಸಿಬ್ಬಂದಿಗೆ ಪಾವತಿಸಲಾಗುತ್ತದೆ. ಹೀಗಾಗಿ ಅಂಗನವಾಡಿ ಸಿಬ್ಬಂದಿಗೆ ಅನುಕೂಲ ಆಗಲಿದೆ. ಸಾಫ್ಟ್‌ವೇರ್ ಹೊಂದಾಣಿಕೆ ಆಗುವವರೆಗೆ ಮಾತ್ರ ಸಮಸ್ಯೆ ಇರಲಿದ್ದು, ಮುಂದೆ ಹೆಚ್ಚು ಅನುಕೂಲ ಆಗಲಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು.
ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಪಾವತಿ ಆಗಿಲ್ಲ
“ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂರು ತಿಂಗಳ ಗೌರವಧನ ಪಾವತಿ ಆಗಿಲ್ಲ. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ, ಗೌರವಧನ ಪಾವತಿಸುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ವರದಿ-ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 pm, Fri, 18 November 22