ಬೆರಳು ಕೊಟ್ಟರೆ ಹಸ್ತ ನುಂಗಿದ್ರಾ? ಸಿಎಂ, ಸಚಿವರಿಗೆ ಮಾಹಿತಿ ನೀಡಿದೇ ವರ್ಗಾವಣೆ ಪಟ್ಟಿ ತಯಾರಿಸಿದ ಅಧಿಕಾರಿಗಳು
ಕಾರ್ಮಿಕ ಇಲಾಖೆಯ ವರ್ಗಾವಣೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವ ಸಂತೋಷ ಲಾಡ್ ಅವರ ಶಿಫಾರಸನ್ನೇ, ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಮೂಲೆಗೆ ಎಸೆದಿದ್ದಾರೆ. ಸಚಿವರಿಗೂ ಮಾಹಿತಿ ನೀಡದೇ ಅಧಿಕಾರಿಗಳು ತಮ್ಮದೇಯಾದ ವರ್ಗಾವಣೆ ಪಟ್ಟಿ ಸಿದ್ದಪಡಿಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಅ.29: ಅಭೂತ ಪೂರ್ವ ಬಹುಮತದೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರದ ಗದ್ದುಗೆ ಹಿಡಿದಿದೆ. ಸರ್ಕಾರ ರಚನೆಯಾಗುತ್ತಿದ್ದಂತೆಯೇ ಅಧಿಕಾರಿಗಳ ವರ್ಗಾವಣೆ (Transfer) ಜೋರಾಗಿಯೇ ನಡೆಯಿತು. ಸಚಿವರು ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗ ಮಾಡಲು ಆರಂಭಿಸಿದರು. ಸಚಿವರ (Minister) ಈ ನಡೆಯನ್ನು ಕಂಡ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದವು. ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸುತ್ತಿವೆ. ಇದರ ನಡುವೆಯೇ ಸಚಿವರ ಶಿಫಾರಸುಗಳನ್ನು ಕಸದ ಬುಟ್ಟಿಗೆ ಚೆಲ್ಲಿ, ಅಧಿಕಾರಿಗಳು ಸಚಿವರ ಹೆಸರಲ್ಲಿ ತಾವೇ ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾರ್ಮಿಕ ಇಲಾಖೆಯ ವರ್ಗಾವಣೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವ ಸಂತೋಷ ಲಾಡ್ ಅವರ ಶಿಫಾರಸನ್ನೇ, ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಮೂಲೆಗೆ ಎಸೆದಿದ್ದಾರೆ. ಸಚಿವರಿಗೂ ಮಾಹಿತಿ ನೀಡದೇ ಅಧಿಕಾರಿಗಳು ತಮ್ಮದೇಯಾದ ವರ್ಗಾವಣೆ ಪಟ್ಟಿ ಸಿದ್ದಪಡಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೇ ವರ್ಗಾವಣೆ ಪಟ್ಟಿ ಸಿದ್ದಗೊಂಡ ಬಗ್ಗೆಯೂ ಸಚಿವರಿಗೂ ಮಾಹಿತಿ ನೀಡದೇ ಯಾಮಾರಿಸಿರುವ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಈ ನಡೆಯಿಂದ ಸಚಿವ ಸಂತೋಷ್ ಲಾಡ್ ಗರಂ ಆಗಿದ್ದು, ತೀವ್ರ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ವರ್ಗಾವಣೆಗೆ ಡೋಂಟ್ ಕೇರ್: 27 ಅಧಿಕಾರಿಗಳಿಗೆ ಗೇಟ್‌ಪಾಸ್
ಏನಿದು ಅಸಲಿ ಪ್ರಕರಣ..?
ಕಾರ್ಮಿಕ ಇಲಾಖೆ 40 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗಸ್ಟ್ ತಿಂಗಳಲ್ಲಿ ಸಚಿವ ಸಂತೋಷ್ ಲಾಡ್ ಶಿಫಾರಸು ಮಾಡಿದ್ದರು. ವರ್ಗಾವಣೆಗೆ ಸಿಎಂ ಅನುಮೋದನೆ ಇಲ್ಲ ಎಂದು ಐದೇ ದಿನಕ್ಕೆ ವರ್ಗಾವಣೆ ರದ್ದಾಗಿತ್ತು. ಇದೀಗ ಕೇವಲ ನಾಲ್ಕು ಜನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು, ಮುಖ್ಯಮಂತ್ರಿಗಳ ಅನುಮೋದನೆಗೆ ಸಚಿವ ಸಂತೋಷ್ ಲಾಡ್ ಕಳುಹಿಸಿದ್ದಾರೆ. ಆದರೆ ಅಧಿಕಾರಿಗಳು ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯುವ ಮುಂಚೆ ಸಚಿವರು ಕೊಟ್ಟಿದ್ದ ಪಟ್ಟಿಯನ್ನು ಕಸದ ಬುಟ್ಟಿಗೆ ಹಾಕಿ, ತಾವೇ ಹೊಸದಾಗಿ 40 ಜನರ ವರ್ಗಾವಣೆ ಪಟ್ಟಿ ತಯಾರಿಸಿದ್ದಾರೆ.
ಇದನ್ನು ತಿಳಿಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಇದರಿಂದ ಕಾರ್ಮಿಕ ಇಲಾಖೆಯ 40 ಜನ ಅಧಿಕಾರಿಗಳ ವರ್ಗಾವಣೆಗೆ ಅಂಕಿತ ಬಿದ್ದಿದೆ. ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡದೇ ಅಧಿಕಾರಿಗಳೇ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಸಿಎಂ ಕಚೇರಿ ಅಧಿಕಾರಿಗಳ ನಡೆಗೆ ಸಚಿವ ಸಂತೋಷ್ ಲಾಡ್ ತೀವ್ರ ಬೇಸರಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ