ಕರ್ನಾಟಕದ ಉರ್ದು ಪ್ರಾಥಮಿಕ ಹಾಗು ಪ್ರೌಢ ಶಾಲೆ ಅವಧಿ ಬದಲಾವಣೆ, ಕಾರಣವೇನು?

2025-26ನೆ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ ಅವಧಿ (ಶಾಲಾ ವೇಳಾಪಟ್ಟಿ) ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಅಧಿಕೃತ ಸುತ್ತೋಲೆ ಹೊರಡಿಸಿದೆ. ಹಾಗಾದ್ರೆ, ಹೊಸ ವೇಳಾಪಟ್ಟಿ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಕರ್ನಾಟಕದ ಉರ್ದು ಪ್ರಾಥಮಿಕ ಹಾಗು ಪ್ರೌಢ ಶಾಲೆ ಅವಧಿ ಬದಲಾವಣೆ, ಕಾರಣವೇನು?
Urdu Schools Timings
Edited By:

Updated on: Feb 02, 2026 | 5:14 PM

ಬೆಂಗಳುರು, (ಫೆಬ್ರವರಿ 02): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಬ್ಬ (Ramzan Festival)  ಹಿನ್ನೆಲೆಯಲ್ಲಿ ಕರ್ನಾಟಕದ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಲಾಗಿದೆ. ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ (Urdu medium school) ಸಮಯವನ್ನು ಬದಲಾವಣೆ ಮಾಡಲಾಗಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ. ಈ ಕುರಿತು ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 12.45ರವರೆಗೆ ತರಗತಿ

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಪರಿಷ್ಕೃತ ಸಮಯ ಅನ್ವಯವಾಗಲಿದೆ. ರಂಜಾನ್ ತಿಂಗಳು ಆರಂಭವಾಗುವ ದಿನದಿಂದ 2026ರ ಮಾರ್ಚ್ 20ರವರೆಗೆ ಶಾಲೆಗಳು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.45ರವರೆಗೆ ಕಾರ್ಯನಿರ್ವಹಿಸಲಿವೆ. ಸಾಮಾನ್ಯ ದಿನಗಳಲ್ಲಿ ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.20ರವರೆಗೆ ನಡೆಯುತ್ತಿದ್ದವು. ಆದರೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಪುರಸ್ಕರಿಸಿ ಮತ್ತು 2002ರಲ್ಲಿದ್ದ ಹಳೆಯ ಆದೇಶವನ್ನು ಪರಿಶೀಲಿಸಿ ಸರ್ಕಾರ ಈ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿ: ಇಲ್ಲಿದೆ ಮಾರ್ಗಸೂಚಿ

ಸುತ್ತೋಲೆತಲ್ಲೇನಿದೆ?

2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂದಿಂದ ದಿನಾಂಕ: 20-03-2026ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆ ಮಾಡಲಾಗಿದೆ.

ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೇ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳತಕ್ಕದ್ದು. ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ಮಾಹೆಯಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರುಗಳಿಗೆ ರಂಜಾನ್ ಮಾಹೆಯಲ್ಲಿ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು.

2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷಾ ವೇಳಾಪಟ್ಟಿಯಂತೆ ನಡೆಸುವಂತೆ ಕ್ರಮವಹಿಸುವುದು. 2025-26ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಆಕ್ಷೇಪಕ್ಕೆ ಗೃಹ ಸಚಿವ ತಿರುಗೇಟು

ಭಾರತೀಯ ಜನತಾ ಪಕ್ಷವು ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ್ದು, ಕಾಂಗ್ರೆಸ್ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ. ಯಾವುದೇ ಹಿಂದೂ ಹಬ್ಬಕ್ಕೂ ಅದು ಅದೇ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂದೂ ಬಿಜೆಪಿ ಪ್ರಶ್ನಿಸಿದೆ. ಇನ್ನು ಇದಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಇದು ಅಲ್ಪಸಂಖ್ಯಾತರ ಓಲೈಕೆಯ ಪ್ರಶ್ನೆಯಲ್ಲ. ಸಂವಿಧಾನದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಿರುವುದು ಮತ್ತು ಹಿಂದುಳಿದ ವರ್ಗಗಳನ್ನು ಪರಿಗಣಿಸಿರುವುದು ಅವರನ್ನು ಇತರರಿಗೆ ಸಮಾನರನ್ನಾಗಿ ಮಾಡಲು. ಸಾವಿರಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತಲು ಇಂತಹ ಪ್ರೋತ್ಸಾಹ ಅಗತ್ಯ,” ಎಂದು ಅವರು ಹೇಳಿದ್ದಾರೆ. ಉರ್ದು ಮಾಧ್ಯಮದ ಮಕ್ಕಳು ಇತರರೊಂದಿಗೆ ಸಮಾನವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಸಣ್ಣ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಸಹಿಸದಿದ್ದರೆ, ನೀವು ಸಮಾನತೆಯ ವಿರೋಧಿಗಳು ಎಂದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ