500ಕ್ಕೂ ಹೆಚ್ಚು RSS ಕಾರ್ಯಕ್ರಮ, ಪಥಸಂಚಲನ: ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!

ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದೆಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಆರ್​​ಎಸ್​ಎಸ್ ಪಥಸಂಚಲನವನ್ನು ವಿರೋಧಿಸಿದ್ದರು. ಆದರೆ, ಅದೇ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕ ಸರ್ಕಾರ, ರಾಜ್ಯಾದ್ಯಂತ 518 ಆರ್​ಎಸ್​ಎಸ್ ಪಥಸಂಚಲನಗಳು ಶಾಂತಿಯುತವಾಗಿ ನಡೆದಿವೆ ಎಂದು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ. ಯಾವುದೇ ಗಲಾಟೆ ಅಥವಾ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.

500ಕ್ಕೂ ಹೆಚ್ಚು RSS ಕಾರ್ಯಕ್ರಮ, ಪಥಸಂಚಲನ: ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!
ಆರ್​ಎಸ್​ಎಸ್ ಪಥಸಂಚಲನ (ಸಾಂದರ್ಭಿಕ ಚಿತ್ರ)

Updated on: Dec 10, 2025 | 11:48 AM

ಬೆಳಗಾವಿ, ಡಿಸೆಂಬರ್ 10: ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್​ಎಸ್​ಎಸ್ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡಲೇಬಾರದು. ಆರ್​ಎಸ್​ಎಸ್ (RSS) ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಆರ್​ಎಸ್​ಎಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್​ ಮೆಟ್ಟಿಲೇರಿ, ಕೊನೆಗೂ ಪಥಸಂಚಲನ ನಡೆದಿದ್ದು ಈಗ ಇತಿಹಾಸ. ಅಂಥದ್ದರಲ್ಲಿ, ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್​ಎಸ್​ಎಸ್ ಕಾರ್ಯಕ್ರಮ, ಪಥಸಂಚಲ ನಡೆದಿದೆ. ಎಲ್ಲಿಯೂ ಗಲಾಟೆ, ದೊಂಬಿ ಆಗಿಲ್ಲ ಎಂದು ಕಾಂಗ್ರೆಸ್ (Congress) ಸರ್ಕಾರವೇ ಹೇಳಿದೆ!

ಆರ್​ಎಸ್​ ಕಾರ್ಯಕ್ರಮಗಳ ಬಗ್ಗೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ, ಕರ್ನಾಟಕದಾದ್ಯಂತ ಒಟ್ಟು 518 ಕಡೆಗಳಲ್ಲಿ ಆರ್​ಎಸ್​ಎಸ್ ಪಥ ಸಂಚಲನ ನಡೆದಿದೆ. ಅಂದಾಜು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಯಾವುದೇ ಗಲಾಟೆ, ದೊಂಬಿ ಅಥವಾ ಕೋಮು ಗಲಭೆಗಳು ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆರ್​ಎಸ್​ಎಸ್ ಪಥಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಿಲ್ಲವೆಂದ ಸರ್ಕಾರ

ಚಿತ್ತಾಪುರದಲ್ಲಿ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವಾಗ ಕಲಬುರಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆಯ ಕಾರಣ ನೀಡಿತ್ತು. ಆದರೆ, ಇಡೀ ರಾಜ್ಯದಲ್ಲೇ ಆರ್​​ಎಸ್​​ಎಸ್ ಕಾರ್ಯಕ್ರಮಗಳಿಂದಾಗಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಿಲ್ಲ ಎಂದು ಖುದ್ದು ಸರ್ಕಾರವೇ ಈಗ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಕೊಂಡಿದೆ.

ಕಲಬುರಗಿ, ಬೆಂಗಳೂರಿನಲ್ಲೇ ಅತಿಹೆಚ್ಚು ಆರ್​ಎಸ್​​ಎಸ್ ಪಥಸಂಚಲನ

ವಿಶೇಷವೆಂದರೆ, ಗೃಹ ಸಚಿವರ ಉತ್ತರ ಪ್ರಕಾರ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲೇ ಎರಡನೇ ಅತಿ ಹೆಚ್ಚು (51) ಪಥ ಸಂಚಲನಗಳು ನಡೆದಿವೆ. 6ರಿಂದ 7 ಸಾವಿರಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ. ಅತಿ ಹೆಚ್ಚು (97) ಪಥಸಂಚಲನಗಳು ಬೆಂಗಳೂರು ನಗರದಲ್ಲಿ ನಡೆದಿವೆ. 27 ರಿಂದ 30 ಸಾವಿರ ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ.

ವಿಧಾನಸಭೆಗೆ ಗೃಹ ಸಚಿವ ಪರಮೇಶ್ವರ್ ನೀಡಿದ ಲಿಖಿತ ಉತ್ತರದ ಪ್ರತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ 45 ಪಥಸಂಚಲನಗಳು, ಬಾಗಲಕೋಟೆ ಜಿಲ್ಲೆಯಲ್ಲಿ 33 ಪಥಸಂಚಲನಗಳು, ಬೀದರ್ ಜಿಲ್ಲೆಯಲ್ಲಿ 41 ಪಥಸಂಚಲನಗಳು, ಶಿವಮೊಗ್ಗ ಜಿಲ್ಲೆಯಲ್ಲಿ 19 ಪಥಸಂಚಲನಗಳು, ವಿಜಯಪುರ ಜಿಲ್ಲೆಯಲ್ಲಿ 18 ಪಥಸಂಚಲನಗಳು ನಡೆದಿವೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್

ಉಳಿದಂತೆ ಬೆಳಗಾವಿಯಲ್ಲಿ 17, ತುಮಕೂರು ಜಿಲ್ಲೆಯಲ್ಲಿ 11, ಚಿತ್ರದುರ್ಗ ಜಿಲ್ಲೆಯಲ್ಲಿ 11, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10, ಉಡುಪಿ ಜಿಲ್ಲೆಯಲ್ಲಿ 10, ಚಿಕ್ಕಗಳೂರು ಜಿಲ್ಲೆಯಲ್ಲಿ 11, ಯಾದಗಿರಿ ಜಿಲ್ಲೆಯಲ್ಲಿ 12, ರಾಯಚೂರು ಜಿಲ್ಲೆಯಲ್ಲಿ 10 ಪಥಸಂಚಲನಗಳು ನಡೆದಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Wed, 10 December 25