ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಹಾಕುವ ಮುನ್ನ ಎಚ್ಚರ: ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್ಲೈನ್ಸ್
ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆ ಬೆನ್ನಲ್ಲೇ ರಾಜ್ಯ ಸರ್ಕಾರವೂ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.

ಬೆಂಗಳೂರು, ಅಕ್ಟೋಬರ್ 06: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವನೆಯಿಂದಾಗಿ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲರ್ಟ್ ಆಗಿವೆ. 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈಗ ರಾಜ್ಯ ಆರೋಗ್ಯ ಇಲಾಖೆಯಿಂದಲೂ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಲವು ಪ್ರಮುಖ ಅಂಶಗಳನ್ನ ಇದರಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
- 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ಗಳನ್ನು ನೀಡಬಾರದು.
- 2ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಔಷಧಿಗಳನ್ನು ನೀಡಿ.
- ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಿ. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್ಗಳ ಬಳಕೆ ಬೇಡ.
- ಸುರಕ್ಷಿತ ಮನೆ ಮದ್ದು, ಹೆಚ್ಚು ದ್ರವ ಪದಾರ್ಥಗಳನ್ನ ಮಕ್ಕಳಿಗೆ ನೀಡುವ ಜೊತೆ ವಿಶ್ರಾಂತಿ ಮತ್ತು ನಿದ್ರೆಗೆ ಅವಕಾಶ ಮಾಡಿಕೊಡಿ.
- ಮಕ್ಕಳಿಗೆ ಸಾಧ್ಯವಾದಷ್ಟು ಪೌಷ್ಟಿಕ ಆಹಾರಗಳನ್ನೇ ನೀಡಿ. ಯಾವುದೇ ಕಾರಣಕ್ಕೂ ಸ್ವಯಂ ಔಷಧೋಪಚಾರ ಮಾಡಬೇಡಿ.
- ವೈದ್ಯರ prescription ಇಲ್ಲದೆ ಕೆಮ್ಮಿನ ಸಿರಪ್ಗಳನ್ನು ಎಂದಿಗೂ ಖರೀದಿಸಬೇಡಿ ಅಥವಾ ಬಳಸಬೇಡಿ.
- ಈ ಹಿಂದೆ ಬಳಸಿ ಉಳಿದ ಔಷಧಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಗಳನ್ನು ಬಳಸುವುದನ್ನು ನಿಲ್ಲಿಸಿ.
- ಮಕ್ಕಳಲ್ಲಿ ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ.
- ಔಷಧದ ಅವಧಿ ಮುಗಿಯುವ ದಿನಾಂಕ ಪರಿಶೀಲಿಸಿ ಮತ್ತು ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ನಲ್ಲಿ ಕೋಲ್ಡ್ರಿಪ್ ಸಿರಪ್ ಬ್ಯಾನ್; ಮಾರಕ ಸಿರಪ್ ನಾವು ಬಳಸುವುದೇ ಇಲ್ಲ ಎಂದ ವೈದ್ಯರು
ಕರ್ನಾಟಕದಲ್ಲಿ ಮುನ್ನೆಚ್ಚರಿಕೆ
ರಾಜ್ಯದಲ್ಲಿ ಎಲ್ಲಾ ಕಂಪನಿಗಳ ಕೆಮ್ಮಿನ ಸಿರಪ್ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಯಾರೂ ಭಯಪಡಬೇಕಿಲ್ಲ. ಹೀಗಿದ್ದರೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್ ಕುಡಿಸುವಾಗಲೂ ಪೋಷಕರು ಬಹಳ ಎಚ್ಚರ ವಹಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Mon, 6 October 25



