
ಬೆಂಗಳೂರು, ಜೂನ್ 29: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕ (Cosmetics) ಉತ್ಪನ್ನಗಳ ಭರಾಟೆ ಜೋರಾಗಿದೆ. ಕಾಸ್ಮೆಟಿಕ್ಸ್‌ಗಳನ್ನ ಬಳಸದೇ ಇರುವವರು ಯಾರೂ ಇಲ್ಲ. ಎಲ್ಲರು ಕೂಡ ದಿನನಿತ್ಯದ ಜೀವನದಲ್ಲಿ ಇದಕ್ಕೆ ಅವಲಂಬಿತರಾಗಿದ್ದಾರೆ. ಆದರೆ ಈಗ ಕಾಸ್ಮೆಟಿಕ್ಸ್ಗಳು ನಮ್ಮ ಆರೋಗ್ಯಕ್ಕೆ (health) ಹಾನಿಕಾರಕವಾಗ್ತಿವೆ. ಸಡನ್ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್‌ಗಳನ್ನ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇದೇ ಕ್ರೀಮ್‌ಗಳು ಸೇಫ್ ಅಲ್ಲ ಅಂತ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಇವುಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಕಣ್ಣಿಟ್ಟಿದೆ.
ಕಾಸ್ಮಟಿಕ್ಸ್‌ನ ಹೆಚ್ಚಾಗಿ ಬಳಸುತ್ತಿದ್ದರೆ, ಒಮ್ಮೆ ಎಚ್ಚರ ವಹಿಸುವುದು ಉತ್ತಮ. ಏಕೆಂದರೆ ನೀವು ಬಳಸುವ ದಿನನಿತ್ಯದ ಕ್ರೀಮ್‌ಗಳು, ಲಿಪ್‌ಸ್ಟಿಕ್ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗೆ ಕುಂಕುಮ, ಪ್ಯಾರಸಿಟಮೋಲ್ ಸೇರಿ 15 ಔಷಧ ನಿರ್ಬಂಧ ಮಾಡಲಾಗಿತ್ತು. ಇದೀಗ ಅನೇಕ ಕಾಸ್ಮೆಟಿಕ್ಸ್‌ಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಕಣ್ಣಿಟ್ಟಿದೆ. ಈಗ ಮತಷ್ಟು ಸೌಂದರ್ಯ ವರ್ಧಕಗಳ ಸ್ಯಾಂಪಲ್ಸ್ಗೆ ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ
ಮುಖ ಹೊಳಪಿಗೆ ಬಳಸುವ ಫೋಲಿಕ್ ಆಸಿಡ್, ಸ್ಟೀರಾಯಡ್ ಬೇಸ್ ಕ್ರೀಮ್, ವಿಟಮಿನ್ ಡಿ, ಸಿ ಕ್ರೀಮ್, ಸಿರಮ್‌ಗಳು ಗುಣಮಟ್ಟದ್ದಲ್ಲ ಅನ್ನೋದು ಈಗ ಸಾಬೀತಾಗಿದೆ. ಅನೇಕ ಜನರು ಮುಖದ ಕಾಂತಿ ಹೆಚ್ಚಿಸೋದಕ್ಕೆ ವಿಟಮಿನ್ ಸಿ ಗಳ ಸೀರಮ್ ಕ್ರೀಮ್, ಸನ್‌ಸ್ಕ್ರೀನ್ ಕ್ರೀಮ್‌ಗಳನ್ನ ಬಳಸುತ್ತಾರೆ. ಅದರಲ್ಲೂ ಫೊಲಿಕ್ ಆಸಿಡ್, ವಿಟಮಿನ್ ಒಳಗೊಂಡಿರುವ ಲಿಕ್ವಿಡ್ ಕ್ರೀಮ್ ಬಳಸಲಾಗುತ್ತಿದೆ. ಆದರೆ ಅನೇಕ ಕ್ರೀಮ್‌ಗಳು ಕಳಪೆ ಗುಣಮಟ್ಟದ್ದಾಗಿವೆ.
ಈ ಹಿನ್ನೆಲೆ ಕಾಂತಿವರ್ಧಕ ಉತ್ಪನ್ನಗಳ ಮೇಲೆ ಆಹಾರ ಸುರಕ್ಷತ ಔಷಧ ಇಲಾಖೆ ಸಮರ ಸಾರಿದೆ. ಇನ್ಮುಂದೆ ಎಲ್ಲಾ ಕಾಸ್ಮೆಟಿಕ್ಸ್‌ಗಳ ಪರೀಕ್ಷೆಗೆ ಆದೇಶ ಮಾಡಲಾಗಿದ್ದು, ಬಾಡಿಲೋಷನ್, ಲಿಪ್ಸ್ಟಿಕ್, ಕ್ರೀಮ್, ಸೇರಿದಂತೆ ಎಲ್ಲವೂ ಪರೀಕ್ಷೆಗೆ ಒಳಪಡಲಿದೆ. ಈ ಬಗ್ಗೆ ಲಿಸ್ಟ್ ತಯಾರಿಸಿರುವ ಇಲಾಖೆ, ಈಗಾಗಲೇ ಅಧಿಕಾರಿಗಳಿಗೆ ಯಾವೆಲ್ಲಾ ಕಾಂತಿವರ್ಧಕಗಳನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚನೆ ನೀಡಿದೆ. ಎಲ್ಲಾ ಬ್ರಾಂಡೆಡ್ಗಳ ಕಾಂತಿವರ್ಧಕಗಳು ಪರೀಕ್ಷೆಗೆ ಒಳಪಡಿಸಲಿದ್ದು, ಹೊಸ ಆ್ಯಕ್ಟ್ ಮೂಲಕ ಕಾಸ್ಮೆಟಿಕ್ಸ್‌ಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ.
ಈ ರೀತಿಯ ಸ್ಟೀರಾಯ್ಡ್ ಬೇಸ್ಡ್ ಕ್ರೀಮ್, ವಿಟಮಿನ್ ಸಿ ಕ್ರೀಮ್‌ಗಳಲ್ಲಿ ಅನೇಕ ಕ್ರೀಮ್‌ಗಳು ಸಿರಮ್‌ಗಳು ಕಳಪೆ ಗುಣಮಟ್ಟದ ಉತ್ಪನ್ನಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿದ್ದು, ಇವುಗಳ ಬಳಕೆಯಿಂದ ತ್ವಚೆಗೆ ಹಾನಿ ಉಂಟಾಗುವುದು ಎಂದು ಚರ್ಮ ರೋಗದ ತಜ್ಞ ವೈದ್ಯ ಡಾ.ಯೋಗಿಶ್ ಹೇಳಿದ್ದಾರೆ.
ಒಂದು ಕಡೆ ಸೌಂದರ್ಯವರ್ಧಕಗಳ ಮೇಲೆ ಸಮರ ಸಾರಿದ್ದರೆ, ಮತ್ತೊಂದೆಡೆ ಆಹಾರ ಇಲಾಖೆಯಿಂದ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸುಗಳ ಮೇಲೆ ಕಣ್ಣಿಟ್ಟಿದೆ. ಶನಿವಾರದಿಂದ ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರೇಡ್ಗೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ ಮಳಿಗೆಗಳ ಮೇಲೆ ರೇಡ್ ಮಾಡಿದ್ದು, ಉತ್ತಮ ಗುಣಮಟ್ಟದ ಆಹಾರ ತಯಾರಿಸದವರಿಗೆ ನೋಟಿಸ್ ನೀಡಲಾಗುತ್ತಿದೆ.
ಇದನ್ನೂ ಓದಿ: ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು
ಒಟ್ಟಿನಲ್ಲಿ ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಇಲಾಖೆ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಹಾಗೂ ತಿನಿಸುಗಳ ಮಾರಾಟರಗಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಹೊಸ ಕಾಸ್ಮೆಟಿಕ್ಸ್ ಆ್ಯಕ್ಟ್ ರೂಪಿಸಲು ಇಲಾಖೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Sun, 29 June 25