ಕರ್ನಾಟಕದಲ್ಲಿ ಕೊರೊನಾ ಉಲ್ಬಣ: ಸರ್ಕಾರದೊಂದಿಗೆ ಸಹಕರಿಸುವಂತೆ ಖಾಸಗಿ ಆಸ್ಪತ್ರೆಗಳ ಸಂಘಕ್ಕೆ ಹೈಕೋರ್ಟ್ ನೋಟಿಸ್

|

Updated on: Apr 23, 2021 | 7:26 PM

ಪರಿಸ್ಥಿತಿ ಸುಧಾರಿಸಲು ಸರ್ಕಾರಕ್ಕೆ ನೆರವಾಗುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಪರಿಸ್ಥಿತಿ ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರ ಏಪ್ರಿಲ್ 26ರ ಒಳಗೆ ಮಾಹಿತಿ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಹೈಕೋರ್ಟ್​ ಸರ್ಕಾರಕ್ಕೂ ಸೂಚಿಸಿದೆ.

ಕರ್ನಾಟಕದಲ್ಲಿ ಕೊರೊನಾ ಉಲ್ಬಣ: ಸರ್ಕಾರದೊಂದಿಗೆ ಸಹಕರಿಸುವಂತೆ ಖಾಸಗಿ ಆಸ್ಪತ್ರೆಗಳ ಸಂಘಕ್ಕೆ ಹೈಕೋರ್ಟ್ ನೋಟಿಸ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದ ಹಿನ್ನೆಲೆ‌ ಖಾಸಗಿ ಆಸ್ಪತ್ರೆಗಳ ಸಂಘ ‘ಫನಾ’ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪರಿಸ್ಥಿತಿ ಸುಧಾರಿಸಲು ಸರ್ಕಾರಕ್ಕೆ ನೆರವಾಗುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಪರಿಸ್ಥಿತಿ ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರ ಏಪ್ರಿಲ್ 26ರ ಒಳಗೆ ಮಾಹಿತಿ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಹೈಕೋರ್ಟ್​ ಸರ್ಕಾರಕ್ಕೂ ಸೂಚಿಸಿದೆ.

ರೆಮ್‌ಡಿಸಿವಿರ್‌, ಆಕ್ಸಿಜನ್ ಪ್ರತಿದಿನದ ಲಭ್ಯತೆ, ಬೇಡಿಕೆ ಮತ್ತು ಪೂರೈಕೆಯ ಮಾಹಿತಿ ನೀಡಬೇಕು. ಕೊವಿಡ್‌ ಆಸ್ಪತ್ರೆಗಳ ಎದುರು ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು. ಸಣ್ಣ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಕೊರತೆ ನೀಗಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠವು ನಿರ್ದೇಶನ ನೀಡಿತು.

ಬೆಂಗಳೂರಿನ 6 ಚಿತಾಗಾರಗಳಲ್ಲೂ ಕೊವಿಡ್ ಮೃತರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ನೀಡಿತು.

ಖಾಸಗಿ ಆಸ್ಪತ್ರೆಗಳಿಗೆ ಫನಾ ಪತ್ರ
ಕೊವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರ ಜತೆ ಕೈಜೋಡಿಸಬೇಕು ಎಂದು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಖಾಸಗಿ ಆಸ್ಪತ್ರೆಗಳ ಸಂಘ ‘ಫನಾ’ ಪತ್ರ ಬರೆದಿದೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಸರ್ಕಾರದ ಆದೇಶಗಳನ್ನು ಪಾಲಿಸಿ ಎಂದು ಫನಾದಿಂದ ಸೂಚಿಸಿದೆ.

ಕೊರೊನಾ ಸೋಂಕಿತರಿಂದ ಹೆಚ್ಚುವರಿ ಶುಲ್ಕ ಪಡೆಯಬೇಡಿ. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನೇ ಪಡೆದುಕೊಳ್ಳಿ. ಸೋಂಕಿತರಿಗೆ ಬೆಡ್‌ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿ. ಸರ್ಕಾರಕ್ಕೆ ಕೊವಿಡ್ ಬೆಡ್ ಕಾಯ್ದಿರಿಸುವ ಬಗ್ಗೆ ಮಾಹಿತಿ ಕೊಡಿ. ಪೋರ್ಟಲ್‌ನಲ್ಲಿ ಬೆಡ್ ವಿವರಗಳನ್ನು ಅಪ್​ಡೇಟ್ ಮಾಡಿ. ಸಣ್ಣಪುಟ್ಟ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಕೆಟ್ಟ ಹೆಸರು ಬೇಡ. ಒಟ್ಟಾಗಿ ಕೊವಿಡ್ ವಿರುದ್ಧ ಹೋರಾಡಿ, ಜಯ ಸಾಧಿಸೋಣ ಎಂದು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಫನಾ ಪತ್ರ ಬರೆದಿದೆ.

ಚುನಾವಣೆಗಳಿಗೆ ತಡೆ ನೀಡಲು ಹೈಕೋರ್ಟ್​ ನಕಾರ
ನಗರಪಾಲಿಕೆ ಚುನಾವಣೆಗಳಿಗೆ ತಡೆ ನೀಡಲು ಹೈಕೋರ್ಟ್ ಸಾಧ್ಯವಿಲ್ಲ ಎಂದು ಹೇಳಿದೆ. ಈ ಸಂಬಂಧ ಆಮ್ ಆದ್ಮಿ ಪಕ್ಷ (ಆಪ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಚುನಾವಣೆ ನಡೆಸುವುದು ಆಯೋಗಕ್ಕೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದೆ.

ಸಂವಿಧಾನದ ಚೌಕಟ್ಟಿನಲ್ಲಿ, ನಿರ್ದಿಷ್ಟ ಅವಧಿಯೊಳಗೆ ಚುನಾವಣೆ ನಡೆಯಬೇಕು. ಈಗ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲೂ ಉಪ ಚುನಾವಣೆ ನಡೆದಿದೆ. ಚುನಾವಣೆಯನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಚುನಾವಣಾ ಆಯೋಗವೇ ತೀರ್ಮಾನಿಸಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ ಸೇರಿ 10 ಸ್ಥಳೀಯ ಸಂಸ್ಥೆಗಳಿಗೆ ಈಗ ಚುನಾವಣೆ ನಡೆಯಬೇಕಿದೆ.

(Karnataka High court issues Notice to Pvt Hospital Association Phana to Cooperate with Govt)

ಇದನ್ನೂ ಓದಿ: ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ

ಇದನ್ನೂ ಓದಿ: ಕೋವಿಡ್ ಇಲ್ಲದವರಿಗೆ ಚಿಕಿತ್ಸೆ ವಿಚಾರ: ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ

Published On - 7:24 pm, Fri, 23 April 21