ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ವೈದ್ಯಕೀಯ ಸೌಲಭ್ಯದ ಅಭಾವ ಸೃಷ್ಟಿಯಾಗಿದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲೇ ಸಮಸ್ಯೆಗಳನ್ನು ಸರಿಪಡಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿತ್ತು. ಇದೀಗ ಕೊವಿಡ್ ಬೆಡ್ ಹೆಚ್ಚಳ ಮಾಡುವಂತೆ ಉಚ್ಛ ನ್ಯಾಯಾಲಯ ಆದೇಶ ನೀಡಿದ್ದು, ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕೂ ಸೇರಿದೆ, ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ.
ಕೊರೊನಾದಿಂದ ಅಸಾಮಾನ್ಯ ಸ್ಥಿತಿ ಎದುರಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ನೈಋತ್ಯ ರೈಲ್ವೆ 300 ಆಕ್ಸಿಜನ್ ಕೋಚ್ ಬೆಡ್ ಒದಗಿಸಲು ಸಿದ್ಧವಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಕೋಚ್ ಲಭ್ಯವಿದ್ದು, ಬಿಬಿಎಂಪಿ ಹಾಗೂ ಸರ್ಕಾರ ತಕ್ಷಣ ಈ ಬೆಡ್ ಪಡೆದುಕೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲದೇ, ಸೈನಿಕ ಆಸ್ಪತ್ರೆಗಳಲ್ಲಿ ಬೆಡ್ಗಳು ಖಾಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ಅನಾಹುತಗಳಾದಾಗ ಸೇನೆ ಜನಸಾಮಾನ್ಯರಿಗೆ ಸಾಕಷ್ಟು ಬಾರಿ ನೆರವಾಗಿದೆ. ಈಗ ಬೆಂಗಳೂರಿನ ಸೋಂಕಿತರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಬೆಂಗಳೂರಿನಲ್ಲಿ ಬೆಡ್ ಸೃಷ್ಟಿಸಲು ಸೇನೆಗೆ ಹೈಕೋರ್ಟ್ ಮನವಿ ಮಾಡಿದೆ.
ಖಾಸಗಿ ಆಸ್ಪತ್ರೆಗಳು ಖಾಲಿ ಬೆಡ್ಗಳ ಬಗ್ಗೆ ಮಾಹಿತಿ ನೀಡಬೇಕು. 24 ಗಂಟೆಗಳಲ್ಲಿ ವೆಬ್ಸೈಟ್ ರಚಿಸಬೇಕು ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಫನಾಗೆ ಸೂಚನೆ ನೀಡಿದೆ.
ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್ಡೆಸಿವರ್ಗೆ ಅನಗತ್ಯ ಬೇಡಿಕೆ: ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ
ವೈದ್ಯಕೀಯ ಸೌಲಭ್ಯ ಕೊರತೆ್ಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಉತ್ತರ ಒದಗಿಸಿರುವ ರಾಜ್ಯ ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳ ಪ್ರಮಾಣವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. ಮಾರ್ಚ್ 11ರ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ 22,001ಆಕ್ಸಿಜನ್ ಬೆಡ್, 1248 ಹೆಚ್ಎಫ್ಎನ್ಸಿ ಬೆಡ್, 701 ಐಸಿಯು, 1548 ವೆಂಟಿಲೇಟರ್ ಬೆಡ್ಗಳನ್ನು ಹೆಚ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಜತೆಗೆ, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ. 9405 ಆಕ್ಸಿಜನ್ ಬೆಡ್, 646 ವೆಂಟಿಲೇಟರ್, 570ರಷ್ಟು ಹೆಚ್ಎಫ್ಎನ್ ಬೆಡ್ ಹೆಚ್ಚಿಸಲಾಗಿದೆ. ಕಮಾಂಡ್ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ಗಾಗಿ ಮನವಿ ಮಾಡಲಾಗಿದ್ದು ಹಜ್ ಭವನ್, ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 1500 ಬೆಡ್ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ತಿಳಿಸಿದೆ. ಗಂಭೀರ ಸೋಂಕಿತರಿಗಷ್ಟೇ ಆಕ್ಸಿಜನ್ ಬೆಡ್, ರೆಮ್ಡಿಸಿವರ್ ಪೂರೈಕೆ ಮಾಡುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿಕೆ ನೀಡಿದೆ.
ಅಲ್ಲದೇ, ರಾಜ್ಯದಲ್ಲಿ ರೆಮ್ಡಿಸಿವಿರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, ಕೇಂದ್ರದಿಂದ ರಾಜ್ಯಕ್ಕೆ 1,22,000 ರೆಮ್ಡಿಸಿವಿರ್ ಹಂಚಿಕೆ ಆಗಿದೆ. ಇಲ್ಲಿಯವರೆಗೆ ಇಷ್ಟು ರೆಮ್ಡಿಸಿವಿರ್ ರಾಜ್ಯಕ್ಕೆ ಹಂಚಲಾಗಿದೆ. ನಿತ್ಯ 20 ಸಾವಿರಕ್ಕೂ ಹೆಚ್ಚು ರೆಮ್ಡಿಸಿವಿರ್ಗೆ ಬೇಡಿಕೆಯಿದ್ದು, ವೆಬ್ಸೈಟ್ನಲ್ಲಿ ರೆಮ್ಡಿಸಿವಿರ್ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವಾರ್ ರೂಮ್ನಲ್ಲಿ ರೆಮ್ಡಿಸಿವಿರ್ಗಾಗಿ ಅಧಿಕಾರಿ ನೇಮಕ ಮಾಡಲಾಗಿದ್ದು, 38,420 ರೆಮ್ಡಿಸಿವಿರ್ ಈಗಾಗಲೇ ಸ್ಟಾಕ್ ಇದೆ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೈಕೋರ್ಟ್ಗೆ ಮಾಹಿತಿ ಒದಗಿಸಿದ್ದಾರೆ.
ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ರೆಮ್ಡಿಸಿವಿರ್ಗೆ ಬೇಡಿಕೆ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್ಡಿಸಿವಿರ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ವಾಟ್ಸಾಪ್, ಎಸ್ಎಂಎಸ್, ಇ-ಮೇಲ್ ಮೂಲಕ ಬೇಡಿಕೆ ಬರುತ್ತಿದೆ. ಖಾಸಗಿ ಆಸ್ಪತ್ರೆಗಳೇ ಸೋಂಕಿತರಿಗೆ ರೆಮ್ಡಿಸಿವಿರ್ ಪೂರೈಸಲಿ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ; ಮರಣ ಪ್ರಮಾಣದಲ್ಲಿ 3ನೇ ಸ್ಥಾನ
Coronavirus: ಪ್ಲಾಸ್ಮಾ ಚಿಕಿತ್ಸೆಯು ಕೊರೊನಾ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡುತ್ತದೆ? ಇಲ್ಲಿದೆ ವಿವರ