RSS ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಆರ್ಎಸ್ಎಸ್ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡುವಣ ಸಂಘರ್ಷ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಪಥಸಂಚಲನ ಅಥವಾ ಚಟುವಟಿಕೆಗಳನ್ನು ನಿರ್ಬಂಧಿಸಿ (ನೇರವಾಗಿ ಆರ್ಎಸ್ಎಸ್ ಹೆಸರಿಸಿಲ್ಲ) ಹೊರಡಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಬೆಂಗಳೂರು, ಅಕ್ಟೋಬರ್ 28: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಆರ್ಎಸ್ಎಸ್ (RSS) ಚಟುವಟಿಕೆಗಳು ಹಾಗೂ ಪಥಸಂಚಲನ (RSS March) ನಿರ್ಬಂಧಿಸಿ (ನೇರವಾಗಿ ಆರ್ಎಸ್ಎಸ್ ಹೆಸರು ಉಲ್ಲೇಖಿಸಿಲ್ಲ) ಆದೇಶ ಹೊರಡಿಸಿದ್ದ ಕಾಂಗ್ರೆಸ್ (Congress) ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಪಥಸಂಚಲನ ನಿರ್ಬಂಧಿಸುವ ಸಂಬಂಧ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ನ (Karnataka High Court) ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ‘ಪುನಶ್ಚೇತನ ಸೇವಾ ಸಂಸ್ಥೆ’ ಹೈಕೋರ್ಟ್ನ ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಕಮಿಷನರ್ಗೆ ನೋಟಿಸ್ ನೀಡಿದೆ.
ಆರ್ಎಸ್ಎಸ್ ಚಟುವಟಿಕೆ ನಿರ್ಬಂಧ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
2025 ರ ಅ.18 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಧಾರವಾಡದ ಪುನಶ್ಚೇತನ ಸೇವಾ ಸಂಸ್ಥೆ ಪ್ರಶ್ನಿಸಿತ್ತು. ಈ ವಿಚಾರವಾಗಿ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್ನ ಧಾರವಾಡ ಪೀಠ, ಅನುಮತಿಯಿಲ್ಲದೇ 10 ಜನ ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್ ಕಾಯ್ದೆಯಲ್ಲಿ ಇರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಸಂವಿಧಾನದ ಆರ್ಟಿಕಲ್ 19 (1)A, B, ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ. ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಸರ್ಕಾರದ ಆದೇಶದಲ್ಲಿ ಆರ್ಎಸ್ಎಸ್ ಬಗ್ಗೆ ಉಲ್ಲೇಖವಿತ್ತೇ?
ಸರ್ಕಾರದ ಆದೇಶದಲ್ಲಿ ನೇರವಾಗಿ ಆರ್ಎಸ್ಎಸ್ ಬಗ್ಗೆ ಉಲ್ಲೇಖವಿರಲಿಲ್ಲ. ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶದ ಪ್ರಕಾರ, ಸಾರ್ವಜನಿಕ ಪ್ರದೇಶಗಳಾದ ಮೈದಾನ, ಪಾರ್ಕ್, ರಸ್ತೆ, ಕೆರೆ-ಕಟ್ಟೆ, ಕಾಲುವೆ ಮುಂತಾದ ಯಾವುದೇ ಸ್ಥಳಗಳಲ್ಲಿ 10 ಜನರಿಗಿಂತ ಹೆಚ್ಚು ಮಂದಿ ಒಟ್ಟಾಗಿ ಸೇರುವುದಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿತ್ತು. ಅನುಮತಿ ಇಲ್ಲದೆ 10 ಜನ ಸೇರಿಕೊಂಡರೆ ಅದನ್ನು ಅಪರಾಧ ಎಂದು ಪರಿಗಣಿಸಿ, ಕ್ರಿಮಿನಲ್ ಕೇಸುಗಳನ್ನು ದಾಖಲಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿತ್ತು. ಈ ಆದೇಶವು ಆರ್ಎಸ್ಎಸ್ ಪಥಸಂಚಲನ ಸೇರಿದಂತೆ ಇತರೆ ಸಾರ್ವಜನಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ ಉದ್ದೇಶವನ್ನು ಹೊಂದಿತ್ತು. ಆದರೆ, ಸರ್ಕಾರ ಆರ್ಎಸ್ಎಸ್ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಎಂಬ ಸಂಘಟನೆಯು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.
ಪುನಶ್ಚೇತನ ಸೇವಾ ಸಂಸ್ಥೆಯ ವಾದವೇನು?
ಪುನಶ್ಚೇತನ ಸೇವಾ ಸಂಸ್ಥೆಯ ವಾದದ ಪ್ರಕಾರ, ಭಾರತದ ಸಂವಿಧಾನವು ನಾಗರಿಕರಿಗೆ ಆರ್ಟಿಕಲ್ 19 (1) ಎ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಆರ್ಟಿಕಲ್ 19 (1) ಬಿ (ಶಾಂತಿಯುತವಾಗಿ ಮತ್ತು ನಿರಾಯುಧರಾಗಿ ಸಭೆ ಸೇರುವ ಸ್ವಾತಂತ್ರ್ಯ) ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿದೆ. ಸರ್ಕಾರದ ಆದೇಶವು ಈ ಸಂವಿಧಾನದತ್ತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದೆ ಮತ್ತು ಇದು ಒಂದು ಡ್ರಕೋನಿಯನ್ ಕಾಯ್ದೆಯಾಗಿದೆ. ಈಗಾಗಲೇ ಪೊಲೀಸ್ ಕಾಯ್ದೆಗಳು ಜಾರಿಯಲ್ಲಿರುವಾಗ, ಇಂತಹ ಹೊಸ ಆದೇಶದ ಮೂಲಕ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ಅರ್ಜಿದಾರರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಹೈಕೋರ್ಟ್ ಈ ವಾದಗಳನ್ನು ಗಂಭೀರವಾಗಿ ಪರಿಗಣಿಸಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಸರ್ಕಾರಿ ಆದೇಶದ ಮೂಲಕ ಕಿತ್ತುಕೊಳ್ಳುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ನೋಟಕ್ಕೆ ಸರ್ಕಾರದ ಈ ಆದೇಶ ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಅದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಕಲಬುರಗಿ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನದ ಭವಿಷ್ಯ ಏನು?
ಸದ್ಯ ಆರ್ಎಸ್ಎಸ್ ಚಟುವಟಿಕೆ ಸಂಬಂಧ ಪೊಲೀಸ್ ಕಾಯ್ದೆಯಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ, ಅತ್ತ ಕಲಬುರಗಿ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನ ವಿಚಾರವಾಗಿ ಹೈಕೋರ್ಟ್ನ ಕಲಬುರಗಿ ಪೀಠ ಈಗಾಗಲೇ ವಿಚಾರಣೆ ನಡೆಸಿದ್ದು, ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ಕೋರ್ಟ್ ತಿಳಿಸಿದೆ. ಸರ್ಕಾರ ಸಲ್ಲಿರುವ ವರದಿಯ ಆಧಾರದಲ್ಲಿ ತೀರ್ಪು ನೀಡಬೇಕಿದೆ. ಆದರೆ, ಈಗ ಒಟ್ಟಾರೆಯಾಗಿ ಸರ್ಕಾರದ ಆದೇಶಕ್ಕೆ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಇದು ಕಲಬುರಗಿ ಪೀಠದ ಆದೇಶದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ: ಆರ್ಎಸ್ಎಸ್ ಚಟುವಟಿಕೆ: ನಿಜಕ್ಕೂ ಸರ್ಕಾರದ ಆದೇಶದಲ್ಲಿ ಏನಿತ್ತು? ಇಲ್ಲಿದೆ ನೋಡಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Tue, 28 October 25



