ರಾಜ್ಯದಲ್ಲಿ ಹಿಜಾಬ್ (Hijab) ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆಯ (Annual Examination) ಆತಂಕ ಶುರುವಾಗಿದೆ. ಹಿಜಾಬ್ ತೆಗೆದು ತರಗತಿಗೆ ಬಾರದ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆಯೂ ಕೈ ತಪ್ಪುವ ಸಾಧ್ಯತೆಯಿದೆ. ಸದ್ಯ ಕೋರ್ಟ್ ಆದೇಶಕ್ಕೆ ಎಲ್ಲರು ಕಾದು ಕುಳಿತಿದ್ದಾರೆ. ಹಿಜಾಬ್ ಧರಿಸಿ ಬಂದವರಿಗೆ ತರಗತಿಗೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಮಾರ್ಚ್, ಏಪ್ರಿಲ್ನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ನಡೆಲಿದೆ. ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದಂತೆ ಹಾಲ್ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಹಾಲ್ ಟಿಕೆಟ್ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆ ಮರು ಪರೀಕ್ಷೆ ನೀಡದಿರಲು ನಿರ್ಧಾರ ಮಾಡಿದೆ. ಈ ಮಧ್ಯೆ, ಇಂದು (ಫೆಬ್ರವರಿ 23) ಕೂಡ ಹಿಜಾಬ್ ವಿವಾದ ವಿಚಾರಣೆಯನ್ನು ನಾಳೆಗೆ (ಫೆಬ್ರವರಿ 24) ಮುಂದೂಡಿ ಆದೇಶ ನೀಡಲಾಗಿದೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರವಾಗಿ ಹೈಕೋರ್ಟ್ ಮಧ್ಯಂತರ ಆದೇಶದ ಸ್ಪಷ್ಟನೆಗೆ ತಾಹಿರ್ ಮನವಿ ಮಾಡಿದ್ದಾರೆ. ಪದವಿ ಕಾಲೇಜುಗಳಲ್ಲೂ ಹಿಜಾಬ್ ಧರಿಸದಂತೆ ಸೂಚಿಸುತ್ತಿದ್ದಾರೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೂ ಅವಕಾಶ ನೀಡುತ್ತಿಲ್ಲ. ಪದವಿ ಇರಲಿ, PUC ಇರಲಿ, ಸಮವಸ್ತ್ರ ನೀತಿಯಿದ್ದರೆ ಪಾಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರಿಂದ ಸೂಚನೆ ನೀಡಲಾಗಿದೆ.
ಹಲವಾರು ಮಂದಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರಿಗೂ ವಾದಮಂಡನೆಗೆ ಅವಕಾಶ ಸಾಧ್ಯವಿಲ್ಲ. ಹೀಗಾಗಿ ಲಿಖಿತ ವಾದಗಳಿದ್ದರೆ ಸಲ್ಲಿಸಿ ಎಂದು ಸಿಜೆ ಹೇಳಿದ್ದಾರೆ. ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ವಿಚಾರಣೆ ಮುಂದೂಡಲಾಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ಮುಂದೂಡಿದೆ.
ಪಿಯು ಕಾಲೇಜು ಸಂಪೂರ್ಣ ವಿದ್ಯಾರ್ಥಿನಿಯರ ಕಾಲೇಜೇ? ಎಂದು ಸಮಿತಿ ಪರ ವಕೀಲರಿಗೆ ನ್ಯಾ. ಜೆ.ಎಂ.ಖಾಜಿ ಪ್ರಶ್ನೆ ಮಾಡಿದ್ದಾರೆ. ಉಡುಪಿಯ ಪಿಯು ಕಾಲೇಜು ಸಂಪೂರ್ಣ ವಿದ್ಯಾರ್ಥಿನಿಯರ ಕಾಲೇಜು. ಜಾತ್ಯಾತೀತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಧಾರ್ಮಿಕ ಗುರುತಿಗಲ್ಲ ಎಂದು ಸಜನ್ ಹೇಳಿದ್ದಾರೆ. ಯಾವುದೇ ಸಮುದಾಯದವರಾದರೂ ತರಗತಿಯಲ್ಲಿ ಸಮಾನತೆ ಇರಬೇಕು. ಸಮವಸ್ತ್ರ ನಿಗದಿಪಡಿಸಿದಾಗ ಧರ್ಮವನ್ನು ಪರಿಗಣಿಸುವುದಿಲ್ಲ. ಧಾರ್ಮಿಕ ಗುರುತುಗಳಿಗೆ ಅವಕಾಶ ನೀಡಿದರೆ ಜಾತ್ಯಾತೀತ ಶಿಕ್ಷಣ ನೀಡುವುದು ಹೇಗೆ. ಧಾರ್ಮಿಕ ಗುರುತಿಗೆ ಅವಕಾಶ ನೀಡಿ ಫಿಸಿಕ್ಸ್, ಜಿಯೋಗ್ರಫಿ, ಕೆಮಿಸ್ಟ್ರಿ ಕಲಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಲೇಜು ಅಭಿವೃದ್ಧಿ ಸಮಿತಿ ಪರ ಸಜನ್ ಪೂವಯ್ಯ ವಾದ ಮಾಡಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿಗೂ ಬೈಲಾಗಳಿವೆ. ಬೈಲಾ ಪ್ರಕಾರವೇ ಸಮಿತಿಯ ಸದಸ್ಯರ ಆಯ್ಕೆಯಾಗುತ್ತಿದೆ. ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಣ ತಜ್ಞರು ಸಮಿತಿಯಲ್ಲಿರುತ್ತಾರೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ 19(2) ಅಡಿ ಇತಿಮಿತಿಗಳಿವೆ ಎಂದು ತಿಳಿಸಿದ್ದಾರೆ. ಕಾಲೇಜಿನ ಆವರಣದೊಳಗೆ ಧಾರ್ಮಿಕ ಗುರುತುಗಳ ಅಗತ್ಯವಿಲ್ಲ. ಗಂಡು, ಹೆಣ್ಣು ಮಕ್ಕಳಿಗೂ ಸಮಾನ ಸಮವಸ್ತ್ರವಿರಬೇಕೆಂಬ ಚರ್ಚೆಯಾಗ್ತಿದೆ. ಈ ಸಮಯದಲ್ಲಿ ಧಾರ್ಮಿಕ ಗುರುತುಗಳನ್ನು ಹೇರುವುದು ಸೂಕ್ತವಲ್ಲ. 100 ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸಜನ್ ಪೂವಯ್ಯ ವಾದ ಮಂಡಿಸಿದ್ದಾರೆ.
ಕಾಲೇಜಿನ ಪರ ವಕೀಲ ರಾಘವೇಂದ್ರ ಶ್ರೀವತ್ಸ ವಾದ ಮಂಡಿಸಿದ್ದಾರೆ. ಇತರೆ ರಾಷ್ಟ್ರಗಳ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಪರ ಸಜನ್ ಪೂವಯ್ಯ ವಾದ ಆರಂಭ ಮಾಡಿದ್ದಾರೆ.
ರಸ್ತೆಯಲ್ಲಿ ಡ್ರಮ್ ಬಾರಿಸುತ್ತಿರುವವರು ಸಮಾಜವನ್ನು ಬೆದರಿಸಬಾರದು. ಉಡುಪಿ ಶ್ರೀಕೃಷ್ಣ ಮಠದ ಸುತ್ತ ಹಲವು ಮುಸ್ಲಿಂ ಕುಟುಂಬಗಳಿವೆ. ರಥೋತ್ಸವದ ವೇಳೆ ಮುಸ್ಲಿಂ ಸಮಾಜದವರೂ ಪಾಲ್ಗೊಳ್ಳುತ್ತಾರೆ. ಇಂತಹ ಸಾಮರಸ್ಯ ವಾತಾವರಣ ಹಾಳು ಮಾಡುತ್ತಿದ್ದಾರೆ. ಎಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕೆಂದು ಸಾಯಿಬಾಬಾ ಹೇಳಿದ್ದಾರೆ. ನಾಳೆ ಕೇಸರಿ ಸಮವಸ್ತ್ರ ಕೇಳಬಹುದು. ಮುಸ್ಲಿಂ ಯುವಕರು ಟೋಪಿ ಧರಿಸಿ ಬರುತ್ತೇವೆ ಎನ್ನಬಹುದು. ಇದಕ್ಕೆಲ್ಲಾ ಅವಕಾಶ ನೀಡದೇ ರಿಟ್ ಅರ್ಜಿ ವಜಾಗೊಳಿಸಬೇಕು ಎಂದು ಪಿಯು ಕಾಲೇಜು ಪರ ನಾಗಾನಂದ್ ವಾದ ಮಂಡನೆ ಮುಕ್ತಾಯವಾಗಿದೆ.
ಬಿಜಾಯ್ ಎಮ್ಯಾನುಯಲ್ ಕೇಸ್ ಬಗ್ಗೆ ಉಲ್ಲೇಖಿಸಿದ್ದಾರೆ. ಜೊರಾಷ್ಟ್ರಿಯನ್ ಧರ್ಮದಲ್ಲಿ ಹಾಡುವುದು ನಿಷಿದ್ಧ. ಆದರೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ಕಡ್ಡಾಯವಲ್ಲ. ಇರಾನ್ನಲ್ಲಿ ಷಾನ ಆಡಳಿತದಲ್ಲಿ ಪ್ಯಾರಿಸ್ನಂತೆ ಸ್ವಾತಂತ್ರ್ಯವಿತ್ತು. ಮುಸ್ಲಿಂ ಮಹಿಳೆಯರು ಹಿಜಾಬ್, ಬುರ್ಖಾ ಧರಿಸುತ್ತಿರಲಿಲ್ಲ. ಮಹಮ್ಮದೀಯ ಕಾನೂನು ಷರಿಯತ್, ಖುರಾನ್ ಆಧಾರಿತವಾಗಿದೆ. ಕಚ್ಚಿ ಮೆಮನ್ ಸೇರಿ ಕೆಲ ಮುಸ್ಲಿಂ ಪಂಗಡಗಳಲ್ಲಿ ಅನ್ವಯಿಸುತ್ತೆ. ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯವಾಗುತ್ತಿದೆ ಎಂದು ನಾಗಾನಂದ್ ಹೇಳಿದ್ದಾರೆ.
ಎಷ್ಟೇ ದೊಡ್ಡ ಹಕ್ಕಿದ್ದರೂ ಇತರರ ಹಕ್ಕಿಗೆ ಘಾಸಿ ಮಾಡಬಾರದು. ಹಿಂದೂಗಳಲ್ಲಿ ಬಹುಪತ್ನಿತ್ವವನ್ನು ರದ್ದು ಮಾಡಲಾಗಿದೆ. ಸತಿ ಪದ್ಧತಿಯನ್ನೂ ರದ್ದು ಮಾಡಲಾಗಿದೆ. ಜನರ ಒಳಿತಿಗಿಂತ ಧಾರ್ಮಿಕ ಆಚರಣೆಗೆ ಆದ್ಯತೆ ಸಿಗುವುದಿಲ್ಲ. ಅಮೆರಿಕದ ನ್ಯಾ.ಡಗ್ಲಾಸ್ ಹೇಳಿದಂತೆ ಸ್ವಾತಂತ್ರ್ಯಕ್ಕೂ ಅಪವಾದಗಳಿವೆ. ಮೂಲಭೂತ ಹಕ್ಕುಗಳೂ ಕೆಲ ನಿರ್ಬಂಧಗಳಿಂದ ಕೂಡಿವೆ. ಭಾರತದ ಸಂವಿಧಾನವನ್ನು ಉಲ್ಲೇಖಿಸಿ ನಾಗಾನಂದ್ ಅವರು ಹೇಳಿದ್ದಾರೆ. ಇದಕ್ಕೆ, ಸಂವಿಧಾನ ರಚಿಸಲು ಅಮೆರಿಕಕ್ಕೆ ಮಹಾನ್ ವ್ಯಕ್ತಿ ಸಿಕ್ಕಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ರಂತಹ ಮಹಾನ್ ವ್ಯಕ್ತಿ ಸಿಕ್ಕಿಲ್ಲ. ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸಿಕ್ಕಿರುವುದೇ ಅಡ್ವಾಂಟೇಜ್ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಿತಿಯ ಕಾನೂನು ಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಸಂಪೂರ್ಣ ಹಕ್ಕಲ್ಲ. ಸುಪ್ರೀಂಕೋರ್ಟ್ ಧ್ವನಿವರ್ಧಕದ ವಿಚಾರದಲ್ಲಿ ಈ ತೀರ್ಪು ನೀಡಿದೆ. ಧರ್ಮದ ಪ್ರಚಾರಕ್ಕಾಗಿ ಧ್ವನಿವರ್ಧಕ ಬಳಸುವುದು ಹಕ್ಕಲ್ಲ. ಬೇರೆಯವರಿಗೆ ಆ ಧಾರ್ಮಿಕ ಪ್ರಚಾರ ಇಷ್ಟವಾಗದಿರಬಹುದು. ಧ್ವನಿವರ್ಧಕದ ಮೂಲಕ ಅದನ್ನು ಹೇರುವುದು ತಪ್ಪೆಂದು ಹೇಳಿದೆ. ಶಿಕ್ಷಣಕ್ಕಾಗಿ ಕಾಲೇಜಿಗೆ ಬಂದಾಗ ಧಾರ್ಮಿಕ ಗುರುತು ಏಕೆ ಎಂದು ಪಿಯು ಕಾಲೇಜು ಪರ ಎಸ್.ಎಸ್.ನಾಗಾನಂದ್ ವಾದ ಮಂಡನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮವಸ್ತ್ರ ನೀತಿ ರೂಪಿಸಲಾಗಿದೆ. ಬ್ರಾಹ್ಮಣರ ಮಕ್ಕಳು ಉಪನಯನದ ವೇಳೆ ಶರ್ಟ್ ಧರಿಸುವಂತಿಲ್ಲ. ಹಾಗೆಂದು ಶರ್ಟ್ ಧರಿಸದೇ ಕಾಲೇಜಿಗೆ ಬರುತ್ತೇನೆ ಎನ್ನಲಾಗದು. ಶಾಲೆಯಲ್ಲಿ ಶಿಸ್ತು ಅನ್ನುವುದು ಇರಲೇಬೇಕು. ಉಡುಪಿ PU ಕಾಲೇಜಿನಲ್ಲಿ 18 ವರ್ಷಗಳಿಂದ ಸಮವಸ್ತ್ರ ನೀತಿ ಇದೆ. ಇಷ್ಟು ವರ್ಷಗಳ ಶಿಸ್ತನ್ನು ಈಗ ಮುರಿಯುವುದು ಏಕೆ ಎಂದು ನಾಗಾನಂದ್ ಪ್ರಶ್ನೆ ಮಾಡಿದ್ದಾರೆ. ಸಮಿತಿಯಲ್ಲಿ ಶಾಸಕರೂ ಇರುವುದು ತಪ್ಪಾಗುವುದಿಲ್ಲ. ಪೋಷಕರ ರೀತಿಯೇ ಶಾಸಕರು ಇರುತ್ತಾರಷ್ಟೇ. ಅಲ್ಲಿ ಅವರು ದಬ್ಬಾಳಿಕೆ ನಡೆಸಲು ಅವಕಾಶವಿರುವುದಿಲ್ಲ. ತಮ್ಮ ಚಿಂತನೆ ಹೇರಲು ಅಲ್ಲಿ ಅವಕಾಶವಿಲ್ಲ ಎಂದು ನಾಗಾನಂದ್ ಹೇಳಿದ್ದಾರೆ.
ಶಿಕ್ಷಕರು ನೀಡಿರುವ ದೂರಿನ ಪ್ರತಿ ಏಕೆ ಹಾಜರುಪಡಿಸಿಲ್ಲ. ಸರ್ಕಾರ ನ್ಯಾಯಬದ್ಧವಾಗಿ ಇದನ್ನು ಕೋರ್ಟ್ಗೆ ನೀಡಬೇಕಿತ್ತು. ಸರ್ಕಾರ ಯಾವುದಕ್ಕಾದರೂ ಹೆದರುತ್ತಿದೆಯೇ. ಶಿಕ್ಷಕರ ಮೇಲೆ ವಿದ್ಯಾರ್ಥಿನಿಯರು ಸುಳ್ಳು ಆರೋಪ ಮಾಡಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆದ ಘಟನೆಯನ್ನು ಈಗ ಪ್ರಸ್ತಾಪಿಸುತ್ತಿದ್ದಾರೆ. ರಿಟ್ ಅರ್ಜಿ ಸಲ್ಲಿಸುವವರೆಗೆ ಚಕಾರವೇಕೆ ಎತ್ತಿಲ್ಲ. ಆತ್ಮಸಾಕ್ಷಿಯ ಸ್ವಾತಂತ್ರ್ಯವೆಂದರೆ ಹೃದಯ ಹೇಳಿದಂತೆ ಕೇಳುವುದು. ಚಿಂತನೆಯ ಸ್ವಾತಂತ್ರ್ಯ ನೀಡುವುದೇ ಆತ್ಮಸಾಕ್ಷಿ. ಕಾಲೇಜು ಅಭಿವೃದ್ಧಿ ಸಮಿತಿ ಪ್ರಜಾಸತ್ತಾತ್ಮಕ ಸಮಿತಿ. ಎಲ್ಲಾ ವರ್ಗದ ಗಣ್ಯರೂ ಈ ಸಮಿತಿಯಲ್ಲಿದ್ದಾರೆ. ಶಿಕ್ಷಕರು, ಪೋಷಕರೂ ಈ ಸಮಿತಿಯಲ್ಲಿದ್ದಾರೆ. ಹೀಗಾಗಿ ಸುವ್ಯವಸ್ಥೆ ರೂಪಿಸುವ ಹೊಣೆಯೂ ಸಮಿತಿಯ ಮೇಲಿದೆ. ಸಮವಸ್ತ್ರ ಕೂಡಾ ಸುವ್ಯವಸ್ಥೆಯ ಒಂದು ಭಾಗ. ಹೆತ್ತವರು ಮಕ್ಕಳನ್ನು ಗದರಿದರೆ ಅದು ದಂಡನೆ ಎಂದು ಪರಿಗಣಿಸಬಾರದು. ಅಶಿಸ್ತಿನ ವರ್ತನೆ ಮಾಡಿದರೆ ಶಿಕ್ಷಕರೂ ಕ್ರಮ ಕೈಗೊಳ್ಳಬಹುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮವಸ್ತ್ರ ನೀತಿ ರೂಪಿಸಲಾಗಿದೆ ಎಂದು ನಾಗಾನಂದ್ ತಿಳಿಸಿದ್ದಾರೆ.
ಸಿಎಫ್ಐ ಸಂಘಟನೆ ಶಿಕ್ಷಕರಿಗೂ ಬೆದರಿಕೆ ಹಾಕಿದೆ. ಶಿಕ್ಷಕರು ದೂರು ನೀಡಲೂ ಹೆದರಿದ್ದರು. ಈಗ ಕೆಲ ಶಿಕ್ಷಕರು ದೂರು ನೀಡಿದ ಬಗ್ಗೆ ಮಾಹಿತಿ ಇದೆ. ಶಿಕ್ಷಕರು ವಿದ್ಯಾರ್ಥಿನಿಯರನ್ನು ತೆಗಳುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಶಿಕ್ಷಕರಿಗೆ ಹಲವು ವರ್ಷಗಳ ಅನುಭವವಿದೆ. ಶಿಕ್ಷಕರ ವಿರುದ್ಧ ಇಂತಹ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಶಿಕ್ಷಕರು ಯಾವಾಗ ತೆಗಳಿದರು, ಏನೆಂದು ತೆಗಳಿದರು. ಏನೆಂದು ಬೆದರಿಕೆ ಹಾಕಿದರೆಂಬುದನ್ನು ಅರ್ಜಿಯಲ್ಲಿ ಹೇಳಿಲ್ಲ. ಗೈರಾದರೆ ಆಬ್ಸೆಂಟ್ ಹಾಕುವುದಾಗಿ ಹೇಳಿದ್ರೆ ಬೆದರಿಕೆ ಹಾಕಿದಂತಾಗುವುದೇ ಎಂದು ಪಿಯು ಕಾಲೇಜು ಪರ ಎಸ್.ಎಸ್.ನಾಗಾನಂದ್ ವಾದ ಮಂಡನೆ ಮಾಡಿದ್ದಾರೆ.
ಸಿಎಫ್ಐ ಸಂಘಟನೆ ಎಬಿವಿಪಿಯಂತೆಯೇ ವಿದ್ಯಾರ್ಥಿ ಸಂಘಟನೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ವಾದ ಮಂಡಿಸಿದ್ದಾರೆ. CFI ಸಂಘಟನೆ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದೆಯೇ. ಏಕಾಏಕಿ ಈ ಸಂಘಟನೆ ಹೀಗೆ ಮಾಡುತ್ತಿರುವುದೇಕೆ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಬಳಿ ಮಾಹಿತಿ ಇದೆ ನೀಡುತ್ತೇನೆ ಎಂದು ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ. ಕೆಲ ಶಾಸಕರು, ಸಚಿವರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿದ್ದಾರೆ. ಕೇಸರಿ ಶಾಲಿನ ಬಗ್ಗೆಯೂ ವರದಿ ತರಿಸಿಕೊಳ್ಳಬೇಕು ಎಂದು ವಕೀಲ ತಾಹೀರ್ ವಾದಿಸಿದ್ದಾರೆ. ನೋಡೋಣ ಯಾವುದೆಲ್ಲಾ ಅಗತ್ಯವಿದೆಯೋ ಪರಿಶೀಲಿಸೋಣ ಎಂದು ಸಿಜೆ ಹೇಳಿದ್ದಾರೆ.
ಸಮವಸ್ತ್ರ ಸಂಹಿತೆಯನ್ನು ಹೊಸದಾಗಿ ಕಾಲೇಜು ಜಾರಿಗೊಳಿಸಿಲ್ಲ. 2018ರಲ್ಲೂ ಹಿಂದಿನಂತೆಯೇ ಸಮವಸ್ತ್ರದ ಬಗ್ಗೆ ನಿರ್ಧರಿಸಲಾಗಿದೆ. 2021ರ ಡಿಸೆಂಬರ್ನಲ್ಲಿ ಹಿಜಾಬ್‌ಗೆ ಅನುಮತಿ ಕೋರಿದ್ದರು. ಸಿಎಫ್ಐನವರು ಗಲಾಟೆ ಆರಂಭಿಸಿ, ಪ್ರತಿಭಟನೆ ಮಾಡಿದ್ದರು. ಸಿಎಫ್ಐ ಎಂದರೇನು, ಯಾವ ರೀತಿಯ ಸಂಘಟನೆ ಇದು. CFI ಅಂದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ. ಇವರೇ ಡೋಲು ಬಾರಿಸಿ, ಹಿಜಾಬ್ ಬೇಕೆಂದು ಪ್ರತಿಭಟಿಸುತ್ತಿದ್ದಾರೆ/ ಸಿಎಫ್ಐನವರೇ ಕಾಲೇಜಿನಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ನಾಗಾನಂದ್ ಹೇಳಿದ್ದಾರೆ.
ಪಿಯು ಕಾಲೇಜು ಪರ ಎಸ್.ಎಸ್.ನಾಗಾನಂದ್ ವಾದ ಮಂಡನೆ ಮಾಡಿದ್ದಾರೆ. ತರಗತಿಗಳಲ್ಲಿ ಸಮವಸ್ತ್ರ ನಿಗದಿಪಡಿಸುವುದು ಉಲ್ಲಂಘನೆ ಆಗಲ್ಲ. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುವುದಿಲ್ಲ. ಅರ್ಜಿದಾರ ವಿದ್ಯಾರ್ಥಿನಿಯರ ಕೆಲವು ಫೋಟೋ ನೀಡಿದ್ದೇವೆ. ವಿದ್ಯಾರ್ಥಿನಿಯರ ಆಧಾರ್ ಕಾರ್ಡ್ನ ಫೋಟೋ ನೀಡಿದ್ದೇವೆ. ಅವುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ ಎಂದು ನಾಗಾನಂದ್ ಹೇಳಿದ್ದಾರೆ. ಅವರು ಎಲ್ಲಾ ಸಂದರ್ಭಗಳಲ್ಲೂ ಹಿಜಾಬ್ ಧರಿಸುತ್ತಿರಲಿಲ್ಲ. 2004ರಿಂದಲೂ ಕಾಲೇಜಿನಲ್ಲಿ ಸಮವಸ್ತ್ರ ನೀತಿ ಜಾರಿಯಲ್ಲಿದೆ ಎಂದು 2004ರ ಸಮಿತಿ ನಿರ್ಣಯವನ್ನು ಕಾಲೇಜು ಪರ ವಕೀಲರು ಓದಿದ್ದಾರೆ.
ಸಮವಸ್ತ್ರದ ಜೊತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ. ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ಆರಂಭಿಸಿದೆ. ಕೆಲ ಮಾಧ್ಯಮಗಳು ಈ ವಾರವೇ ತೀರ್ಪು ಎಂದು ತಪ್ಪಾಗಿ ಹೇಳಿವೆ. ಈ ವಾರವೇ ತೀರ್ಪು ಕೊಡುವುದಾಗಿ ತಪ್ಪಾಗಿ ಹೇಳಿವೆ ಎಂದು ಸಿಜೆ ತಿಳಿಸಿದ್ದಾರೆ. ಇನ್ನೂ ವಿಚಾರಣೆಯೇ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಹಿಜಾಬ್ ಸಂಘರ್ಷ ಮುಂದುವರಿದಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಸರ್ಕಾರಿ ಬಾಲಕಿಯರ ಪಿಯು ಕಾಲೇಜಿಗೆ ಆಗಮಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಹಿಜಾಬ್ ತೆಗೆದು ತರಗತಿಗೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಕೆಲವರು ಹಿಜಾಬ್ ತೆಗೆಯುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಕಾಲೇಜು ಗೇಟ್ ಮುಂದೆಯೇ ಸ್ಟೂಡೆಂಟ್ಸ್ ನಿಂತಿದ್ದಾರೆ.
15 ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿಜಯಪುರದಲ್ಲಿ ಪ್ರಾಯೋಗಿಕ ಪರೀಕ್ಷೆ ಬಹಿಷ್ಕಾರ ಮಾಡಿ ಹೊರ ಬಂದಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿಯೇ ನಿಂತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ತರಗತಿಗಳಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲವೆಂದು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹೇಳುತ್ತಿದ್ದಾರೆ.
ವಿಜಯಪುರದಲ್ಲಿ ತರಗತಿಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. ಪ್ರಾಯೋಗಿಕ ಪರೀಕ್ಷೆಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿನಿಯರು ತರಗತಿಗಳಿಂದ ಹೊರ ಬಂದಿದ್ದಾರೆ.
ವಿಜಯಪುರ ಜಿಲ್ಲೆಯ ಕಾಲೇಜುಗಳ ಬಳಿ ಪೊಲೀಸ್ ಭದ್ರತೆ ನೀಡಲಾಗಿದೆ. 225 ಪಿಯು ಕಾಲೇಜು, 80 ಪದವಿ ಕಾಲೇಜುಗಳಿಗೆ ಭದ್ರತೆ ಮಾಡಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿ ವಿಜಯನಗರ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳ ಸುತ್ತ ನಿಷೇಧಾಜ್ಞೆ ಮುಂದುವರೆದಿದೆ. 200 ಮೀಟರ್ ಸುತ್ತಮುತ್ತ ನಿಷೇಧ ಹೇರಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್ ಆದೇಶ ಹೊರಡಿಸಿದ್ದಾರೆ.
ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆಯ ಆತಂಕ ಶುರುವಾಗಿದೆ. ಹಿಜಾಬ್ ತೆಗೆದು ತರಗತಿಗೆ ಬಾರದ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆಯೂ ಕೈ ತಪ್ಪುವ ಸಾಧ್ಯತೆ ಇದೆ. ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದಂತೆ ಹಾಲ್ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಹಾಲ್ ಟಿಕೆಟ್ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಪಿಯು ಬೋರ್ಡ್ ಹಾಲ್ ಟಿಕೆಟ್ ತಿದ್ದುಪಡಿ ಇದ್ದಲ್ಲಿ ಅವಕಾಶ ಕಲ್ಪಿಸಿತ್ತು. ಆದರೆ ತಿದ್ದುಪಡಿ ಪ್ರಕ್ರಿಯಿಂದಲೂ ವಿದ್ಯಾರ್ಥಿನಿಯರು ಅಂತರ ಕಾಯ್ದುಕೊಂಡಿದ್ದಾರೆ. ಶಿಕ್ಷಣ ಇಲಾಖೆ ಮರು ಪರೀಕ್ಷೆ ನೀಡದಿರಲು ನಿರ್ಧಾರ ಮಾಡಿದ್ದಾರೆ.
Published On - 8:34 am, Wed, 23 February 22