ಗುಡ್ ನ್ಯೂಸ್: ಕೃಷಿ ಭೂಮಿ ಖರೀದಿಗೆ ಕೆಲವು ಕಾನೂನು ಸರಳೀಕರಣ
ಕರ್ನಾಟಕ ಮುಂಗಾರು ಅಧಿವೇಶನದ ಮೂರನೇ ದಿನದ ಕಲಾಪ ನಡೆಯುತ್ತಿದೆ. ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಎರಡು ವಿಧೇಯಕಗಳು ಅಂಗೀಕಾರಗೊಂಡವು. ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮತ್ತು ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಗಳು ಅಂಗೀಕಾರಗೊಂಡಿವೆ. ಸಚಿವ ಕೃಷ್ಣ ಬೈರೇಗೌಡ ಅವರು ವಿಧೇಯಕ ಮಂಡಿಸಿದರು.

ಬೆಂಗಳೂರು, ಆಗಸ್ಟ್ 13: ರಾಜ್ಯ ಮುಂಗಾರು ಅಧಿವೇಶನದ (Monsoon Session) ಮೂರನೇ ದಿನದ ಕಲಾಪ ನಡೆಯುತ್ತಿದೆ. ಬುಧವಾರ (ಆ.13) ವಿಧಾನಸಭೆಯಲ್ಲಿ (Karnataka Legislative Assembly) ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆಯಿತು. ಈ ವಿಧೇಯಕದಲ್ಲಿ ಕೃಷಿ ಭೂಮಿ ಖರೀದಿ ಸಂಬಂಧ ಕೆಲವು ಕಾನೂನುಗಳನ್ನು ಸರಳೀಕರಣ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗೆ ಅಥವಾ ಇನ್ಯಾವುದೇ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಗೆ ಮಿತಿ ಹೇರಲಾಗಿದೆ.
ಶಿಕ್ಷಣ ಸಂಸ್ಥೆಗೆ ಅಥವಾ ಇನ್ಯಾವುದೇ ಉದ್ದೇಶಕ್ಕೆ ಕೃಷಿ ಭೂಮಿಯನ್ನು ನಾಲ್ಕು ಹೆಕ್ಟೇರ್ವರೆಗೆ ಮಾತ್ರ ಖರೀದಿ ಮಾಡಬಹುದು. ಖರೀದಿ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶಕ್ಕೆ ಖರೀದಿಸಿದ ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ ಬದಲು ಬೇರೆ ಉದ್ದೇಶಕ್ಕೂ ಕನ್ವರ್ಷನ್ ಮಾಡಿ ಕೊಡಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಕೈಗಾರಿಕೆ ಮಾಡಲು ಕೃಷಿ ಭೂಮಿಯನ್ನು 2 ಎಕರೆವರೆಗೆ ಕನ್ವರ್ಷನ್ ಮಾಡಲು ವಿಧೇಯಕದಲ್ಲಿ ವಿನಾಯಿತಿ ನೀಡಲಾಗಿದೆ. ನವೀಕರಿಸಬಹುದಾದ ಇಂಧನಗಳ ಉತ್ಪಾದನೆಗಾಗಿ ಕೃಷಿ ಭೂಮಿಯ ಆಟೋ ಕನ್ವರ್ಷನ್ ಸರ್ಟಿಫಿಕೇಟ್ ವಿತರಿಸಬಹುದು. ಕೃಷಿ ಭೂಮಿಯನ್ನು ಅನುಮತಿ ಇಲ್ಲದೇ ಅಥವಾ ಕನ್ವರ್ಷನ್ ಮಾಡಿಸದೇ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ 1 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ವಿಧೇಯಕದಲ್ಲಿದೆ.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ, ರಾಜಣ್ಣ ರಾಜೀನಾಮೆ ಗುದ್ದಾಟ ನಡುವೆ ಬರೋಬ್ಬರಿ 15 ವಿಧೇಯಕ ಮಂಡನೆ, ಯಾವುವು?
ನೋಂದಣಿ ತಿದ್ದುಪಡಿ-2025 ವಿಧೇಯಕ ಅಂಗೀಕಾರ
ವಿಧಾನಸಭೆಯಲ್ಲಿ ಕರ್ನಾಟಕ ನೋಂದಣಿ ತಿದ್ದುಪಡಿ-2025 ವಿಧೇಯಕ ಅಂಗೀಕಾರಗೊಂಡಿದೆ. ಸಚಿವ ಕೃಷ್ಣ ಬೈರೇಗೌಡ ಅವರು ವಿಧೇಯಕ ಮಂಡಿಸಿದರು. ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಾಗರಿಕ ಸ್ನೇಹಿ ಸುಧಾರಣೆಗಳನ್ನು ತರುವ ಉದ್ದೇಶ ಮತ್ತು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸ್ವತ್ತಿನ ನೋಂದಣಿಗಳಲ್ಲಿ ಸರಳೀಕರಣಗೊಳಿಸುವ ಗುರಿ ಹೊಂದಲಾಗಿದೆ. ಕಾನೂನು ಬಾಹಿರ ನೋಂದಣಿ ತಡೆಗೆ ಅವಕಾಶ ನೀಡಲಾಗಿದೆ. ಯಾವುದೇ ಆಸ್ತಿಗಳ ಪೇಪರ್ ಮೂಲಕ ನೋಂದಣಿಗೆ ಬ್ರೇಕ್ ಹಾಕಲಾಗಿದೆ. ಇನ್ಮುಂದೆ ಇ-ಖಾತಾ ನೋಂದಣಿಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Wed, 13 August 25



