AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಣ್ಣ ಸಂಪುಟದಿಂದ ವಜಾಕ್ಕೆ ಆಕ್ರೋಶ: ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ

ಕೆಎನ್ ರಾಜಣ್ಣ ಫೋಟೋ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ, ‘‘We Stand With KNR’’ ಎಂಬ ಪೋಸ್ಟರ್ ಹಿಡಿದು ರೋಷಾವೇಷ. ಇದು ತುಮಕೂರಿನಲ್ಲಿ ಬುಧವಾರ ಕಂಡುಬಂದ ದೃಶ್ಯ. ರಾಜಣ್ಣ ಬೆಂಬಲಿಗರು ಸಿಡಿದೆದ್ದಿದ್ದು, ಸಂಪುಟದಿಂದ ರಾಜಣ್ಣರನ್ನು ಕಿಕ್‌ಔಟ್‌ ಮಾಡಿದ್ದಕ್ಕೆ ರೊಚ್ಚಿಗೆದ್ದಿದ್ದಾರೆ. ತುಮಕೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ಬೆಂಕಿಯುಗುಳಿದ್ದಾರೆ.

ರಾಜಣ್ಣ ಸಂಪುಟದಿಂದ ವಜಾಕ್ಕೆ ಆಕ್ರೋಶ: ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ
‘‘We Stand With KNR’’ ಎಂಬ ಪೋಸ್ಟರ್ ಹಿಡಿದು ಪ್ರತಿಭಟಿಸಿದ ರಾಜಣ್ಣ ಬೆಂಬಲಿಗರು
Jagadisha B
| Edited By: |

Updated on: Aug 13, 2025 | 2:17 PM

Share

ತುಮಕೂರು, ಆಗಸ್ಟ್ 13: ಕೆಎನ್ ರಾಜಣ್ಣ (KN Rajanna) ಅವರನ್ನು ಸಂಪುಟದಿಂದ ವಜಾ ಮಾಡಿರುವುದು ತುಮಕೂರಿನಾದ್ಯಂತ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್​ನ (Congress) ಈ ನಿರ್ಧಾರಕ್ಕೆ ಕುಣಿಗಲ್‌, ಮಧುಗಿರಿ, ಕೊರಟಗೆರೆ ಪ್ರದೇಶಗಳಲ್ಲಿರುವ ರಾಜಣ್ಣ ಬೆಂಬಲಿಗರು ಕಿಡಿಕಾರಿದ್ದಾರೆ. ಗುಬ್ಬಿ ಜನರು ಕೂಡಾ ತುಮಕೂರಿಗೆ ಲಗ್ಗೆ ಇಟ್ಟಿದ್ದಾರೆ. ತುಮಕೂರು ಜಿಲ್ಲೆಯ ತಾಲೂಕು ತಾಲೂಕಿನಿಂದಲೂ ರಾಜಣ್ಣ ಅಬಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ತುಮಕೂರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರಿನ ಟೌನ್‌ ಹಾಲ್ ಮುಂಭಾಗ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು, ಕೈಯಲ್ಲಿ ರಾಜಣ್ಣ ಫೋಟೋ ಇರುವ ಫ್ಲೆಕ್ಸ್ ಹಿಡಿದು ಘೋಷಣೆ ಕೂಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಮಧುಗಿರಿಯಲ್ಲಿ ದೊಡ್ಡ ಡ್ರಾಮವೇ ನಡೆದಿತ್ತು. ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಹೀಗಾಗಿ ತುಮಕೂರಿನಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ
Image
ರಾಜಣ್ಣ ಭಾವನಾತ್ಮಕ ಪತ್ರ, ಅಭಿಮಾನಿಗಳಿಗೆ ಹೇಳಿದ್ದೇನು?
Image
ರಾಜಣ್ಣರನ್ನು ಯಾಕೆ ವಜಾ ಮಾಡಲಾಯಿತು ಅಂತ ಕಾಂಗ್ರೆಸ್ ಹೇಳಬೇಕು: ಜೋಶಿ
Image
ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!
Image
ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ

ರಾಜಣ್ಣ ಬೆನ್ನಿಗೆ ನಿಂತ ಅಹಿಂದ ನಾಯಕರು

ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣರನ್ನು ವಜಾ ಮಾಡಿದ್ದರಿಂದ ಅಹಿಂದ ನಾಯಕರು ಸಿಟ್ಟಾಗಿದ್ದಾರೆ. ತುಮಕೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಲು ಮುಂದಾಗಿದ್ದಾರೆ. ಷಡ್ಯಂತ್ರ ಮಾಡಿ ರಾಜಣ್ಣರನ್ನ ವಜಾ ಮಾಡಲಾಗಿದೆ ಅಂತಾ ಯಾದಗಿರಿಯಲ್ಲಿ ವಾಲ್ಮೀಕಿ ಸಮುದಾಯದ ರಾಜನಹಳ್ಳಿಯ ಗುರು ಪೀಠದ ಪ್ರಸನ್ನಾನಂದ ಶ್ರೀಗಳು ಆರೋಪಿಸಿದ್ದಾರೆ.

ಏತನ್ಮಧ್ಯೆ, ರಾಜಣ್ಣ ತಲೆದಂಡ ಬಿಜೆಪಿಗೆ ಅಸ್ತ್ರವಾಗಿದೆ. ರಾಹುಲ್ ಗಾಂಧಿ ವಿರುದ್ಧ ಸತ್ಯವನ್ನೇ ಹೇಳಿದ್ದೀರಿ. ಸ್ವಲ್ಪ ಮುಂದೆ ಬಂದು ಯಾರ ಪಿತೂರಿ ಎಂದೂ ಹೇಳಿಬಿಡಿ ಎಂಬುದಾಗಿ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಸಿಎಂ ಸ್ಪಷ್ಟ ಉತ್ತರ ಕೊಡಬೇಕು ಎಂದು ಬಿವೈ ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ, ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಿದ್ದಾರೆ. ಹೈಕಮಾಂಡ್ ತೀರ್ಮಾನ ಎನ್ನುತ್ತಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ನಂಬಿ ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯ್ತಿರುತ್ತೆ: ಬೆಂಬಲಿಗರಿಗೆ ರಾಜಣ್ಣ ಭಾವನಾತ್ಮಕ ಪತ್ರ

ಒಟ್ಟಿನಲ್ಲಿ, ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮ ಸಂಚಲನ ಸೃಷ್ಟಿಸಿದೆ. ಒಂದೆಡೆ ಬೆಂಬಲಿಗರ ಆಕ್ರೋಶ, ಮತ್ತೊಂದೆಡೆ ವಿಪಕ್ಷ ನಾಯಕರ ಟೀಕಾಪ್ರಹಾರ ಸರ್ಕಾರಕ್ಕೆ ಇಕ್ಕಟ್ಟು ತಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ