ರಾಜ್ಯಾದ್ಯಂತ ಲೋಕಾಯುಕ್ತ ರೇಡ್: 8 ಅಧಿಕಾರಿಗಳಿಗೆ ಶಾಕ್; ಕೋಟ್ಯಂತರ ರೂ. ನಗದು, ಚಿನ್ನಾಭರಣ ಪತ್ತೆ

ಲೋಕಾಯುಕ್ತ ಸಂಸ್ಥೆಯು ಕರ್ನಾಟಕದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಬೃಹತ್ ದಾಳಿ ನಡೆಸಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ 8 ಭ್ರಷ್ಟ ಸರ್ಕಾರಿ ಅಧಿಕಾರಿಗಳ 32ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದ್ದು, ಕೋಟಿಗಟ್ಟಲೆ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೃಷಿ ಜಮೀನು, ವಾಣಿಜ್ಯ ಮಳಿಗೆ, ಚಿನ್ನಾಭರಣ, ನಗದು, ವಾಹನಗಳು ಸೇರಿದಂತೆ ಹಲವು ಆಸ್ತಿಗಳು ಆದಾಯಕ್ಕಿಂತ ಶೇಕಡಾ ನೂರಕ್ಕೂ ಹೆಚ್ಚು ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ.

ರಾಜ್ಯಾದ್ಯಂತ ಲೋಕಾಯುಕ್ತ ರೇಡ್: 8 ಅಧಿಕಾರಿಗಳಿಗೆ ಶಾಕ್; ಕೋಟ್ಯಂತರ ರೂ. ನಗದು, ಚಿನ್ನಾಭರಣ ಪತ್ತೆ
ಲೋಕಾಯುಕ್ತ ದಾಳಿ
Edited By:

Updated on: Sep 22, 2026 | 10:49 PM

ಬೆಂಗಳೂರು, ಸೆ.22: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಸಂಸ್ಥೆಯು ಮಂಗಳವಾರ ಬೆಳ್ಳಂಬೆಳಗ್ಗೆ ಬೃಹತ್ ದಾಳಿ ನಡೆಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳ 8 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, 32ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ನಡೆದ ಪರಿಶೀಲನೆ ವೇಳೆ ಅವರ ಆದಾಯಕ್ಕಿಂತ ಶೇಕಡಾ ನೂರಕ್ಕೂ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಕೃಷಿ ಜಮೀನು, ವಾಣಿಜ್ಯ ಮಳಿಗೆ, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಣ, ವಾಹನ ಹಾಗೂ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಕಂಡು ಅಧಿಕಾರಿಗಳೇ ಕಂಗಾಲಾಗಿದ್ದಾರೆ.

ಜಿಲ್ಲಾವಾರು ಲೋಕಾಯುಕ್ತ ದಾಳಿ ಮತ್ತು ಪತ್ತೆಯಾದ ಆಸ್ತಿಯ ಕಂಪ್ಲೀಟ್ ರಿಪೋರ್ಟ್:

1. ಬೀದರ್: ಶ್ರೀದೇವಿ (ಜಿಲ್ಲಾ ನೋಂದಣಾಧಿಕಾರಿ): 4 ಸ್ಥಳಗಳಲ್ಲಿ ನಡೆದ ಶೋಧ ವೇಳೆ ₹6.80 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 2.50 ಕೋಟಿ ರೂ. ಮೌಲ್ಯದ ಕೃಷಿ ಜಮೀನು ಹಾಗೂ ಭಾರಿ ಮೌಲ್ಯದ ₹2.30 ಕೋಟಿ ಮೌಲ್ಯದ ಗಾರ್ಮೆಂಟ್ ಫ್ಯಾಕ್ಟರಿ ಪತ್ತೆಯಾಗಿದೆ.

2. ಮಂಡ್ಯ: ಹೆಚ್.ಎಂ. ರಂಗನಾಥ್ (ನಿವೃತ್ತ ಸಹಾಯಕ ಎಂಜಿನಿಯರ್): 4 ಸ್ಥಳಗಳಲ್ಲಿ ನಡೆದ ರೇಡ್ ವೇಳೆ ₹3.84 ಕೋಟಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಇವರಿಂದ 1.03 ಕೋಟಿ ನಗದು ಹಣ ಹಾಗೂ ₹40 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಶಿವರಾಜು (ಹಾಸ್ಟೆಲ್ ಸೂಪರಿಂಟೆಂಡೆಂಟ್): 2.71 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 5 ನಿವೇಶನಗಳು, 2 ಮನೆಗಳು, 2 ವಾಣಿಜ್ಯ ಮಳಿಗೆಗಳು, ಫಾರ್ಮ್ ಹೌಸ್, ಕೃಷಿ ಜಮೀನು, ₹33.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹15 ಲಕ್ಷದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಿಕ್ಕಬಳ್ಳಾಪುರ: ದರ್ಶನ್ ಗೌಡ (FDA): 8 ಸ್ಥಳಗಳಲ್ಲಿ ಬೃಹತ್ ಶೋಧ ಕಾರ್ಯ ನಡೆದಿದೆ. ಕೇವಲ ಎಫ್‌ಡಿಎ ಹುದ್ದೆಯಲ್ಲಿದ್ದುಕೊಂಡೇ ₹1.86 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದು, ಬರೋಬ್ಬರಿ 16 ಮನೆಗಳು, 3 ನಿವೇಶನಗಳು ಸೇರಿದಂತೆ ಅಪಾರ ಸ್ಥಿರಾಸ್ತಿ ಪತ್ತೆಯಾಗಿದೆ.

ಕಲಬುರಗಿ: ರಾಜೇಶ್ವರಿ ಬಬಲಾದ್ (ಜೆಸ್ಕಾಂ JEE): 3 ಸ್ಥಳಗಳಲ್ಲಿ ನಡೆಸಿದ ಶೋಧ ವೇಳೆ ₹1.91 ಕೋಟಿ ಮೌಲ್ಯದ ಅಕ್ರಮ ಆಸ್ತಿ, ನಿವೇಶನ, ಮನೆ, ವಾಹನ ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಹೆಚ್.ಆರ್. ರಮೇಶ್ (ಮುನ್ಸಿಪಲ್ ಕಮಿಷನರ್): 3 ಸ್ಥಳಗಳಲ್ಲಿ ಶೋಧ ನಡೆಸಿ ₹1.78 ಕೋಟಿ ಮೌಲ್ಯದ ಆಸ್ತಿ, ₹46.48 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹20.85 ಲಕ್ಷ ಮೌಲ್ಯದ ವಾಹನಗಳನ್ನು ಪತ್ತೆ ಹಚ್ಚಲಾಗಿದೆ.

ಧಾರವಾಡ: ಕಿರಣ್ ಕುಮಾರ್ ಬೈಂದೂರು (ಹೆಸ್ಕಾಂ JEE): 6 ಸ್ಥಳಗಳಲ್ಲಿ ನಡೆದ ದಾಳಿ ವೇಳೆ ₹1.79 ಕೋಟಿ ಅಕ್ರಮ ಆಸ್ತಿ ಹಾಗೂ ₹73.71 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಇದನ್ನೂ ಓದಿ; ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಕೊಲೆ ಕೇಸ್: ಇಬ್ಬರು ಹಂತಕರಿಗೆ ಜೀವಾವಧಿ ಶಿಕ್ಷೆ, 6 ಲಕ್ಷ ರೂ. ದಂಡ

ಲೋಕಾಯುಕ್ತ ಎಸ್‌ಪಿಗಳ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡಗಳು ಬ್ಯಾಂಕ್ ಲಾಕರ್‌ಗಳು, ಆಸ್ತಿ ಪತ್ರಗಳು, ಹೂಡಿಕೆ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಯನ್ನು ಮುಂದುವರಿಸಿವೆ. ದಾಖಲೆಗಳ ಸಂಪೂರ್ಣ ತನಿಖೆಯ ನಂತರ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 pm, Tue, 22 September 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us