
ಬೆಂಗಳೂರು, ಜೂನ್ 18: ಕರ್ನಾಟಕದ ಮಾವು ಬೆಳೆಗಾರರು (Mango growers) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ಹಲವು ಭಾಗದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಮಾವು ಬೆಳೆಗಾರರಿಗೆ ಪಿಡಿಪಿಎಸ್ (PDPS) ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿರುವ ಮಾವು ಬೆಳೆ ಪ್ರಸ್ತುತ ಸಂಕಷ್ಟದಲ್ಲಿದೆ. ಪ್ರಸಕ್ತ 2026ರ ಜೂನ್ ತಿಂಗಳಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ತೋತಾಪುರಿ ತಳಿಯ ಮಾವಿನ ಬೆಲೆಯು ರೈತರಿಗೆ ಸಿಗಬೇಕಾದ ಕನಿಷ್ಠ ಲಾಭದಾಯಕ ದರಕ್ಕಿಂತಲೂ ಗಣನೀಯವಾಗಿ ಕುಸಿದಿದ್ದು, ಇದು ಬೆಳೆಗಾರರನ್ನು ತೀವ್ರ ಕಷ್ಟಕ್ಕೆ ದೂಡಿದೆ.
ಇದನ್ನೂ ಓದಿ: ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ
ಈ ಬಾರಿ ಕಠಿಣ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಾವಿನ ಉತ್ಪಾದನೆಯೂ ಕುಂಠಿತಗೊಂಡಿದೆ. ಒಂದೆಡೆ ಇಳುವರಿ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತ ಉಂಟಾಗಿರುವುದು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. ಈ ದ್ವಿಮುಖ ಹೊಡೆತದಿಂದಾಗಿ ತೋತಾಪುರಿ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು
ಈ ಹಿನ್ನೆಲೆಯಲ್ಲಿ ರೈತರ ಹಿತರಕ್ಷಣೆಯನ್ನು ಕಾಯುವ ಸಲುವಾಗಿ, ಕಳೆದ ವರ್ಷ ನೀಡಿದಂತೆಯೇ ಪ್ರಸಕ್ತ ವರ್ಷವೂ ‘ಬೆಲೆ ಕೊರತೆ ಪಾವತಿ ಯೋಜನೆ’ಯಡಿ (PDPS) ಮಾವು ಬೆಳೆಗಾರರಿಗೆ ತುರ್ತು ಆರ್ಥಿಕ ಬೆಂಬಲ ನೀಡುವಂತೆ ಪತ್ರದಲ್ಲಿ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದು, ಕೇಂದ್ರ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:29 pm, Thu, 18 June 26