
ಬೆಂಗಳೂರು, ಮೇ 18: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು (Monsoon Rain) ಪೂರ್ವ ಮಳೆಯ (Karnataka Rains) ಆರ್ಭಟ ಜೋರಾಗಿದ್ದು, ಬಿರುಗಾಳಿ ಸಹಿತ ಸುರಿದ ರಣಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗದಗ, ಧಾರವಾಡ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಮತ್ತು ಬಿರುಗಾಳಿ ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ಧಾರವಾಡ ಹಾಗೂ ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಏತನ್ಮಧ್ಯೆ, ಮೇ 26ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದೆ.
ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೆಂಚಲಾಪುರ ಓಣಿಯಿಂದ ಬನಶಂಕರಿ ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬಿರುಗಾಳಿಯ ಹೊಡೆತಕ್ಕೆ ಮರಗಳು ಧರಾಶಾಯಿಯಾಗಿದ್ದು, ಕಾರೊಂದರ ಮೇಲೆ ಮರ ಬಿದ್ದು ಜಖಂಗೊಂಡಿದೆ. ಮಕಾನಗಲ್ಲಿ ಹಾಗೂ ಕ್ರೀಡಾಂಗಣದ ಬಳಿ ವಿದ್ಯುತ್ ಕಂಬಗಳು ಉರುಳಿದ್ದರಿಂದ ಸಾರ್ವಜನಿಕರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಗದಗದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ತಗಡಿನ ಶೀಟ್ ಬಿರುಗಾಳಿಗೆ ಹಾರಿಹೋಗಿದ್ದು, ಮಹಿಳಾ ಹೋಂ ಗಾರ್ಡ್ ಒಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಯಾದಗಿರಿಯ ಕೆಂಭಾವಿಯಲ್ಲಿ ಕಲ್ಯಾಣ ಮಂಟಪದ ಶಾಮಿಯಾನ ಮತ್ತು ತಗಡಿನ ಶೀಟ್ ಹಾರಿಹೋಗಿ ಇಬ್ಬರು ಗಾಯಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಕೇವಲ 10 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಕ್ರೀಡಾಂಗಣದ ಮೇಲ್ಚಾವಣಿ ಬಿರುಗಾಳಿಗೆ ಕಿತ್ತುಹೋಗಿದ್ದು, ಸಾರ್ವಜನಿಕರು ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ದುರದೃಷ್ಟಕರ ಘಟನೆಯೊಂದರಲ್ಲಿ, ಧಾರವಾಡದ ಕವಲಗೇರಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಎಂಬ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಹನುಮಂತಪ್ಪ ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಕರಿಯಪ್ಪ ಗೆನ್ನಾಕಿಹಾಳ್ (45) ಎಂಬವರು ಮೃತಪಟ್ಟಿದ್ದಾರೆ.
ಶಿವಮೊಗ್ಗದ ಸಿರಿಯೂರು ವೀರಾಪುರದಲ್ಲಿ ತೋಟವೊಂದರಲ್ಲಿ ನಿಲ್ಲಿಸಲಾಗಿದ್ದ ಮಂದೆಯ ಮೇಲೆ ಸಿಡಿಲು ಬಡಿದು 50 ಕುರಿಗಳು ಸಾವನ್ನಪ್ಪಿವೆ. ಅಲ್ಲದೆ, ಭದ್ರಾವತಿ ಬಳಿ ರೈಲ್ವೇ ಟ್ರ್ಯಾಕ್ ಮೇಲೆ ಹೈಟೆನ್ಷನ್ ವಿದ್ಯುತ್ ಲೈನ್ ಬಿದ್ದ ಪರಿಣಾಮ ಜನಶತಾಬ್ದಿ ಮತ್ತು ಇಂಟರ್‌ಸಿಟಿ ರೈಲುಗಳ ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.
ಹುಬ್ಬಳ್ಳಿಯ ಮಂಜುನಾಥ ನಗರ ಹಾಗೂ ಆನಂದ ನಗರದಲ್ಲಿ ಮರಗಳು ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿಯಾಗಿತ್ತು. ದಾವಣಗೆರೆಯ ದೇವರಬೆಳಕೆರೆಯಲ್ಲಿ ಆಲಿಕಲ್ಲು ಮಳೆಗೆ ಭತ್ತದ ಬೆಳೆ ನಾಶವಾಗಿದ್ದರೆ, ಬಸವಾಪಟ್ಟಣದಲ್ಲಿ ಸುಮಾರು 2,000 ಅಡಕೆ ಹಾಗೂ ತೆಂಗಿನ ಮರಗಳು ಬೇರು ಸಮೇತ ನೆಲಕಚ್ಚಿವೆ.
ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಳೆ, ಈ ಬಾರಿ ಒಂದು ವಾರ ಮುಂಚಿತವಾಗಿ ಅಂದರೆ ಮೇ 26ರ ವೇಳೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ರೌದ್ರಾವತಾರ: ಸಿಡಿಲಿಗೆ ಇಬ್ಬರು ಬಲಿ; ಮರ-ಕಂಬಗಳು ಬಿದ್ದು ಭಾರೀ ಅವಾಂತರ
ತಿರುವನಂತಪುರಂ, ಕೊಲ್ಲಂ, ವಯನಾಡು ಸೇರಿದಂತೆ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಭೂಕುಸಿತದ ಭೀತಿ ಇರುವುದರಿಂದ ಪ್ರವಾಸಿಗರು ಬೆಟ್ಟಗುಡ್ಡ ಹಾಗೂ ಜಲಪಾತಗಳಿರುವ ಪ್ರದೇಶಗಳಿಗೆ ಭೇಟಿ ನೀಡದಂತೆ ವಿಪತ್ತು ನಿರ್ವಹಣಾ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ