Rain Effect: ಕರ್ನಾಟಕದ ವಿವಿಧೆಡೆ ಭಾರೀ ಮಳೆ; ಮಳೆಗಾಲದ ಆರಂಭಿಕ ಹಂತದಲ್ಲಿಯೇ ತತ್ತರಿಸಿದ ಜನತೆ

| Updated By: preethi shettigar

Updated on: Jun 18, 2021 | 12:00 PM

Karnataka Monsoon: ಬೆಳಗಾವಿ ಜಿಲ್ಲೆಯ ಕೆಎಲ್‌ಇ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಗಾಳಿಗೆ ಮರ ಉರುಳಿ ಬಿದ್ದು 2 ಕಾರುಗಳು ಜಖಂ ಆಗಿದೆ. ನಿರಂತರ ಮಳೆ ಗಾಳಿಗೆ ಮರ ಉರುಳಿ ಬಿದ್ದಿದ್ದು, ಬೆಳಗಾವಿ ಕೆಎಲ್‌ಇ ಆಸ್ಪತ್ರೆ ಎದುರಿಗಿನ ಹಳೆಯ ಪೂನಾ ಬೆಂಗಳೂರು ರಸ್ತೆ ಮೇಲೆ ಈ ಅವಾಂತರ ಸಂಭವಿಸಿದೆ.

Rain Effect: ಕರ್ನಾಟಕದ ವಿವಿಧೆಡೆ ಭಾರೀ ಮಳೆ; ಮಳೆಗಾಲದ ಆರಂಭಿಕ ಹಂತದಲ್ಲಿಯೇ ತತ್ತರಿಸಿದ ಜನತೆ
ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ
Follow us on

ಪ್ರತಿ ವರ್ಷದ ಮಳೆಗಾಲ ನೊವು- ನಲಿವಿನ ಸಮಾಗಮವಿದ್ದಂತೆ. ಮಳೆಗಾಲ ಆರಂಭವಾದ ಕೂಡಲೇ ಭತ್ತಿ ಹೋದ ನದಿಗಳು ಮರು ಜೀವ ಪಡೆದುಕೊಳ್ಳುತ್ತದೆ. ಅಂತೆಯೇ ಇಳೆಗೆ ಮಳೆ ಎಂಬ ತಂಪುಗವಿಯಲಾರಂಬಿಸುತ್ತದೆ. ಮಳೆ ಬಂದರೆ ಸಾಕು ಎಂದು ಬೇಡಿಕೊಳ್ಳುವ ರೈತರು ಒಂದು ಕಡೆಯಾದರೆ, ಮಳೆಗೆ ಹೆದರಿ ಮನೆಯನ್ನು ಭದ್ರಪಡಿಸುವ ಮಂದಿ ಇನ್ನೊಂದು ಕಡೆ. ಮಳೆಯ ವಿಶೇಷತೆಯೇ ಬಹುಷಃ ಇದೆ ಅನಿಸುತ್ತದೆ. ಒಂದು ಕಡೆ ಮಳೆ ಬಂದರೆ ಖುಷಿ, ಇದೇ ಮಳೆ ಅತಿಯಾದರೆ ದುಖಃ. ಮಳೆಗಾಲ ಈಗ ಆರಂಭವಾಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಜನಕ್ಕೆ ನೆಮ್ಮದಿ ದೊರೆತಂತಾಗಿದೆ. ಅಂತೆಯೇ ಗಾಳಿ ಮಳೆಗೆ ಅನೇಕರು ಮನೆ ಮಠ ಕಳೆದುಕೊಳ್ಳುವ ಭಯದ ಅಂಚಿನಲ್ಲಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಕುಂಬದ್ರೋಣ ಮಳೆಯ ಅಬ್ಬರ
ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ಭಾರಿ ಮಳೆ ಉಂಟಾಗಿದ್ದು, ಗೋಣಿಕೊಪ್ಪ ಬಳಿ 35ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಇನ್ನು ಮರ ಬಿದ್ದು 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರ ಪರಿಣಾಮ ಕರೆಂಟ್ ಇಲ್ಲದೆ ಕತ್ತಲಲ್ಲಿ ಮುಳುಗಿದ ಗ್ರಾಮೀಣ ಪ್ರದೇಶ ಜನರು ದಿನಕಳೆಯುವಂತಾಗಿದೆ.
ವಿದ್ಯುತ್ ಕಂಬ ಮರು ಸ್ಥಾಪನೆಗೆ ಸೆಸ್ಕ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ವ್ಯಾಪ್ತಿಯಲ್ಲೂ ಭಾರೀ ಮಳೆ ಕಂಡುಬಂದಿದ್ದು, ಮರವುರುಳಿ ಹಲವು ರಸ್ತೆಗಳ ಸಂಚಾರ ಸ್ಥಗಿತವಾಗಿದ್ದು,
ಅರಣ್ಯ ಇಲಾಖೆ ಸಿಬ್ಬಂದಿಯಿಂದ‌ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ
ಮಳೆಯ ಹೆಚ್ಚಳದಿಂದಾಗಿ ಜಿಲ್ಲೆಯ ದಾಂಡೇಲಿ, ಹಳಿಯಾಳದಲ್ಲಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ.
ಹೀಗಾಗಿ ಹಳಿಯಾಳದಿಂದ ನಾರನಹಳ್ಳಿ ಗ್ರಾಮಕ್ಕೆ ತೆರಳುವ ಸಂಪರ್ಕ ಕಡಿತವಾಗಿದ್ದು, ಕಿರು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಗ್ರಾಮಕ್ಕೆ ತೆರಳಲು ತುಂಬಿ ಹರಿದ ನೀರಿನ ಮಧ್ಯೆ ಜನರು ಹಗ್ಗ ಹಿಡಿದು ತೆರಳುತ್ತಿದ್ದಾರೆ.

ಬೆಳಗಾವಿಯಲ್ಲಿ ಗಾಳಿ ಸಹಿತ ಮಳೆಯ ಅವಾಂತರ
ಜಿಲ್ಲೆಯ ಕೆಎಲ್‌ಇ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಗಾಳಿಗೆ ಮರ ಉರುಳಿ ಬಿದ್ದು 2 ಕಾರುಗಳು ಜಖಂ ಆಗಿದೆ.
ನಿರಂತರ ಮಳೆ ಗಾಳಿಗೆ ಮರ ಉರುಳಿ ಬಿದ್ದಿದ್ದು, ಬೆಳಗಾವಿ ಕೆಎಲ್‌ಇ ಆಸ್ಪತ್ರೆ ಎದುರಿಗಿನ ಹಳೆಯ ಪೂನಾ ಬೆಂಗಳೂರು ರಸ್ತೆ ಮೇಲೆ ಈ ಅವಾಂತರ ಸಂಭವಿಸಿದೆ.

ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ನದಿ ತೀರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿ ಮೂಡಲಗಿ ತಾಲೂಕಿನ‌ ಆರು ಸೇತುವೆಗಳು ಜಲಾವೃತ ಮೂಡಲಗಿ ತಾಲೂಕಿನ ಅವರಾದಿ ನಂದಗಾಂವ, ಸುಣಧೋಳಿ ಮೂಡಲಗಿ, ಕಮಲದಿನ್ನಿ ಹುಣಶ್ಯಾಳ ಪಿವೈ. ಢವಳೇಶ್ವರಯ ಮಹಾಲಿಂಗಪುರ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತವಾಗಿದೆ. ಅಲ್ಲದೆ ನದಿತೀರದಲ್ಲಿ ಸಾವಿರಾರು ಹೆಕ್ಟೇರ್ ಕಬ್ಬಿನ ಗದ್ದೆಗಳು ಜಲಾವೃತವಾಗಿದ್ದು,
3 ದಿನಗಳಿಂದ ಮಳೆಯಾಗುತ್ತಿದ್ದರೂ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟ್ ಓಪನ್ ಮಾಡದೇ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪ ವ್ಯಕ್ತಪಡಿಸಿದ್ದಾರೆ.

ಘಟಪ್ರಭಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಹರಿವು
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದ ಬಳಿಯ ಘಟಪ್ರಭಾ ರಸ್ತೆ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಈಗಾಗಲೇ ಮುಧೋಳ ತಾಲೂಕಿನ ಮಿರ್ಜಿ ಬ್ಯಾರೇಜ್ ಹಾಗೂ ಹೊಳೆಬಸವೇಶ್ವರ ದೇಗುಲ ಜಲಾವೃತವಾಗಿತ್ತು, ಸದ್ಯ ಜಾಲಿಬೇರ ಸೇತುವೆ ಸಹ ಮುಳುಗಿದೆ. ಸೇತುವೆ ಮೇಲೆ ನಾಲ್ಕು ಅಡಿಗೂ ಹೆಚ್ಚು ಘಟಪ್ರಭಾ ನದಿ ನೀರು ತುಂಬಿ ಹರಿಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ
ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್​.ಆರ್.ಪುರ ತಾಲೂಕುಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಸಮೀಪ ಮಣ್ಣು ಕುಸಿತ ಉಂಟಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಅಲ್ಲದೆ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ.

ಇದನ್ನೂ ಓದಿ:

Karnataka Dam Water Level: ಮಲೆನಾಡು ಭಾಗದಲ್ಲಿ ವಿಪರೀತ ಮಳೆ, ಜಲಾಶಯಗಳಿಗೆ ಭರಪೂರ ನೀರು; ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ

ಕರ್ನಾಟಕದ ವಿವಿಧೆಡೆ ಉತ್ತಮ ಮಳೆ: ತುಂಗಾ ಜಲಾಶಯ ಭರ್ತಿ, ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ