ಕರ್ನಾಟಕದಲ್ಲಿ ವರುಣಾರ್ಭಟ: ಕೊನೆಗೂ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ! ಹಲವೆಡೆ ಸೇತುವೆಗಳು ಜಲಾವೃತ, ಮರ ಬಿದ್ದು ಹಾನಿ

Karnataka Rains: ಕರ್ನಾಟಕದಾದ್ಯಂತ ತಡವಾಗಿಯಾದರೂ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಉತ್ತರ ಮತ್ತು ದಕ್ಷಿಣದ ಹಲವು ಜಿಲ್ಲೆಗಳಲ್ಲಿ ಹತ್ತಾರು ಅವಾಂತರಗಳು ಸೃಷ್ಟಿಯಾಗಿವೆ. ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ, ಮಲಪ್ರಭಾ, ಕಾವೇರಿ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು ಉಂಟಾಗಿದೆ.

ಕರ್ನಾಟಕದಲ್ಲಿ ವರುಣಾರ್ಭಟ: ಕೊನೆಗೂ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ! ಹಲವೆಡೆ ಸೇತುವೆಗಳು ಜಲಾವೃತ, ಮರ ಬಿದ್ದು ಹಾನಿ
ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಜಲಾವೃತ
Image Credit source: tv9

Updated on: Jul 06, 2026 | 6:50 AM

ಮುಖ್ಯಾಂಶಗಳು

  • ಕೃಷ್ಣಾ ನದಿ ಒಳಹರಿವು 60 ಸಾವಿರ ಕ್ಯೂಸೆಕ್‌ಗೆ ಏರಿಕೆ
  • ಹಾರಂಗಿ, ಲಿಂಗನಮಕ್ಕಿ ಜಲಾಶಯಗಳ ಮಟ್ಟ ವೃದ್ಧಿ
  • ಕೊಡಗು ಜಿಲ್ಲೆಯಲ್ಲಿ ಜುಲೈ 9 ರವರೆಗೆ ಆರೆಂಜ್ ಅಲರ್ಟ್

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ (Karnataka) ಕೊನೆಗೂ ಮುಂಗಾರು ಮಳೆ (Monsoon Rain) ಬಿರುಸುಗೊಂಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹತ್ತಾರು ಅವಾಂತರಗಳು ಸೃಷ್ಟಿಯಾಗಿವೆ. ಬತ್ತಿ ಹೋಗಿದ್ದ ನದಿಗಳಿಗೆ ಈಗ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜೀವಕಳೆ ಬಂದಿದೆ. ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವೆಡೆ ಬಿರುಗಾಳಿ ಮಳೆಗೆ ಬೃಹತ್ ಮರಗಳು ಉರುಳಿ ಬಿದ್ದು ಮನೆ ಹಾಗೂ ವಾಹನಗಳು ಜಖಂಗೊಂಡಿವೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣೆ, ಮಲಪ್ರಭೆಯ ಅಬ್ಬರ

ಮಹಾರಾಷ್ಟ್ರದ ಕೊಲ್ಲಾಪುರ, ರತ್ನಗಿರಿ ಹಾಗೂ ಪಶ್ಚಿಮ ಘಟ್ಟದ ಕಣಕುಂಬಿ ಭಾಗದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿಯ ಒಳಹರಿವು ಕೇವಲ ಒಂದೇ ದಿನದಲ್ಲಿ 15 ಸಾವಿರದಿಂದ 60 ಸಾವಿರ ಕ್ಯೂಸೆಕ್‌ ದಾಟಿದೆ. ಪರಿಣಾಮವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಸೇರಿದಂತೆ ಒಟ್ಟು ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನಲ್ಲಿ ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕಾರದಗಾ-ಬೋಜ್ ಸೇರಿದಂತೆ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದ ಪ್ರಸಿದ್ಧ ಮಾರುತಿ ಮಂದಿರವು ಮಲಪ್ರಭಾ ನದಿಯ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ. ಇನ್ನು ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್‌ನ ಒಳಹರಿವು 30 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯಾಗಿ 16 ಗೇಟ್‌ಗಳ ಮೂಲಕ 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ಕೊಡಗಿನಲ್ಲಿ ಬಿರುಗಾಳಿ ಮಳೆ, ಹಾರಂಗಿ ಜಲಮಟ್ಟ ಏರಿಕೆ

ದಕ್ಷಿಣ ಕರ್ನಾಟಕದ ಕೊಡಗು ಜಿಲ್ಲೆಯಲ್ಲೂ ಮಳೆ ಬಿರುಸು ಪಡೆದುಕೊಂಡಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಡ್ಯಾಂನ ನೀರಿನ ಮಟ್ಟ ಕೇವಲ ಒಂದೇ ದಿನದಲ್ಲಿ 4 ಅಡಿ ಏರಿಕೆಯಾಗಿದೆ. ಚಿಕ್ಲಿಹೊಳೆ ಜಲಾಶಯವೂ ಭರ್ತಿಯಾಗುವ ಹಂತ ತಲುಪಿದೆ. ತೀವ್ರ ಗಾಳಿ-ಮಳೆಗೆ ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ಮಡಿಕೇರಿಯ ಯವಕಪಾಡಿ, ಕಬ್ಬಿನಕಾಡು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹವಾಮಾನ ಇಲಾಖೆಯು ಜುಲೈ 9 ರವರೆಗೆ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ಧುಮ್ಮಿಕ್ಕುತ್ತಿರುವ ಜೋಗ ಜಲಪಾತ

Jog Falls

ಭೋರ್ಗರೆದು ಧುಮ್ಮಿಕ್ಕುತ್ತಿರುವ ಜೋಗ ಜಲಪಾತ

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಚುರುಕಾಗಿದ್ದು, ತುಂಗಭದ್ರಾ, ವರದಾ ಮತ್ತು ಶರಾವತಿ ನದಿಗಳು ಮೈದುಂಬಿವೆ. ಗಾಜನೂರಿನ ತುಂಗಾ ಡ್ಯಾಂ ಹಾಗೂ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶಿವಮೊಗ್ಗ ಭಾಗದ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಭಾಗದ ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಇದ್ದು, ಜಿಟಿಜಿಟಿ ಮಳೆಯಾಗುತ್ತಿದೆ. ಇಲ್ಲಿನ ವಾತಾವರಣಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಮೂಡಿಗೆರೆಯ ತ್ರಿಪುರ, ಬಕ್ಕಿ ಮತ್ತು ಬಡವನದಿಣ್ಣೆ ಗ್ರಾಮಗಳಲ್ಲಿ ಬೃಹತ್ ಮರಗಳು ಮನೆ ಮತ್ತು ರಸ್ತೆಯ ಮೇಲೆ ಬಿದ್ದು ಭಾನುವಾರ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಉಡುಪಿ ಮತ್ತು ಹಾಸನದಲ್ಲೂ ಮಳೆ ಅವಾಂತರ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪ್ರಸಿದ್ಧ ಕೂಡ್ಲು ಜಲಪಾತ ಭೋರ್ಗರೆದು ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹಾಸನದ ಸಕಲೇಶಪುರದ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಎರಡು ಮನೆಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ತಡವಾಗಿ ಆರಂಭವಾದರೂ ಮುಂಗಾರು ಮಳೆಯ ಆರ್ಭಟ ತೀವ್ರವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 am, Mon, 6 July 26

Follow Us