Karnataka Rain: ಇಂದಿನಿಂದ ಎರಡು ದಿನ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ರೆಡ್ ಅಲರ್ಟ್ ಘೋಷಣೆ

Karnataka Rain Updates: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿ ಭಾಗಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

Karnataka Rain: ಇಂದಿನಿಂದ ಎರಡು ದಿನ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ರೆಡ್ ಅಲರ್ಟ್ ಘೋಷಣೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 10, 2022 | 8:18 AM

ಕರ್ನಾಟಕ (Karnataka) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿ ಭಾಗಗಳಲ್ಲಿ ಅತ್ಯಂತ ಭಾರಿ ಮಳೆ(Heavy Rain)ಯಾಗಲಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ (Red Alert) ಘೋಷಣೆ ಮಾಡಿದೆ. ಅಲ್ಲದೆ ಉತ್ತರ ಒಳಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಹಿನ್ನೆಲೆ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ. ದಕ್ಷಿಣ ಒಳಭಾಗದಲ್ಲೂ ಅತಿಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್(Orange Alert) ಘೋಷಿಸಲಾಗಿದ್ದು, ಹಾಸನ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಿನ್ನೆ ಅತ್ಯಂತ ಭಾರಿ ಮಳೆಯಾಗಿದ್ದು, 19 ಸೆ.ಮೀ ಮಳೆಯಾಗಿದೆ. ಇನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 15 ಸೆ.ಮೀ, ಇದೇ ಜಿಲ್ಲೆಯ ಕೋಟ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತಲಾ 14 ಸೆ.ಮೀ. ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಉಡುಪಿ ಜಿಲ್ಲೆಯ ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ತುಮರಿಯಲ್ಲಿ ತಲಾ 13 ಸೆ.ಮೀ ಮಳೆಯಾಗಿದೆ.

ಎರಡು ದಿನ ಈ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ

ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ನಾಳೆಯೂ ಭಾರಿ ಮಳೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬೀದರ್, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಸಮುದ್ರದ ಅಲೆಗಳ ಅಬ್ಬರ ಹೇಗಿದೆ?

ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಭಾನುವಾರ ಸಮುದ್ರದ ಅಲೆಗಳ ಎತ್ತರ 3.5 ರಿಂದ 4.0 ಮೀಟರ್ ವ್ಯಾಪ್ತಿಯಲ್ಲಿರಲಿದೆ. ಅಷ್ಟೇ ಅಲ್ಲದೆ ಎರಡು ದಿನ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಇರಲಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.

ಬೆಂಗಳೂರಿನ ವಾತಾವರಣ ಹೇಗಿರಲಿದೆ?

ಬೆಂಗಳೂರಿನಲ್ಲಿ ವೀಕೆಂಡ್ ಮೂಡ್​ನಲ್ಲಿದ್ದವರಿಗೆ ಮಳೆ ಕಾಟ ಎದುರಾಗಿದೆ.  ನಿನ್ನೆ ಮೆಜೆಸ್ಟಿಕ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್​ ಸರ್ಕಲ್​, ಯಶವಂತಪುರ, ಶಾಂತಿನಗರ, ವಿಲ್ಸನ್​ ಗಾರ್ಡನ್​ನಲ್ಲಿ ತುಂತುರು ಮಳೆಯಾಗಿದೆ. ಇಂದು ನಗರದಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಬಹಳಷ್ಟಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

Published On - 6:30 am, Sun, 10 July 22