Karnataka Rains: ಕರ್ನಾಟಕದಾದ್ಯಂತ ಮಳೆ ಅಬ್ಬರಕ್ಕೆ ಒಂದೇ ದಿನ ಐವರು ಸಾವು, ಹಲವೆಡೆ ಭೂಕುಸಿತ

ಕರ್ನಾಟಕದ ವಿವಿಧೆಡೆ ಭಾರಿ ಮಳೆಯಿಂದಾಗಿ ಐವರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ, ಮೈಸೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ. ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೆಆರ್‍ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಅಬ್ಬಿ ಜಲಪಾತದ ಬಳಿ ಒಬ್ಬ ಪ್ರವಾಸಿಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

Karnataka Rains: ಕರ್ನಾಟಕದಾದ್ಯಂತ ಮಳೆ ಅಬ್ಬರಕ್ಕೆ ಒಂದೇ ದಿನ ಐವರು ಸಾವು, ಹಲವೆಡೆ ಭೂಕುಸಿತ
ಕಾರವಾರದ ಪಿಕಳೆ ಆಸ್ಪತ್ರೆ ಬಳಿ ಮರ ಧರೆಗೆ ಉರುಳಿರುವುದು.

Updated on: Jul 21, 2025 | 7:00 AM

ಬೆಂಗಳೂರು, ಜುಲೈ 21: ರಾಜ್ಯದಲ್ಲಿ ತುಸು ಬಿಡುವು ನೀಡಿದ್ದ ಮುಂಗಾರು ಮಳೆ (Monsoon Rain) ಕಳೆದ ಕೆಲವು ದಿನಗಳಿಂದ ಮತ್ತೆ ಆರ್ಭಟಿಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಮಳೆ ಸಂಬಂಧಿ ಅವಘಡಗಳಿಂದ ಭಾನುವಾರ ಒಂದೇ ದಿನ ಐವರು ಮೃತಪಟ್ಟಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ. ಕಾರವಾರದ ಪಿಕಳೆ ಆಸ್ಪತ್ರೆ ಬಳಿ ಗಾಳಿ, ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆಯೇ ಉರುಳಿಬಿದ್ದಿದೆ. ಗರ್ಭಿಣಿ ಸೊಸೆಯನ್ನು ಆಸ್ಪತ್ರೆಗೆ ಕರೆತಂದಿದ್ದ ಅತ್ತೆ ಮೇಲೆ ಮರ ಬಿದ್ದು ಅಸುನೀಗಿದ್ದಾರೆ. ಅತ್ತೆ ಲಕ್ಷ್ಮೀ ತನ್ನ 8 ತಿಂಗಳ ಗರ್ಭಿಣಿ ಸೊಸೆ ಸುನಿತಾರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ಬಳಿ ಚಾಲಕ ಹಾಗೂ ಸೊಸೆ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ, ಬೃಹತ್ ಮರ ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅತ್ತೆ ಲಕ್ಷ್ಮೀ ಕಾರಿನಲ್ಲೇ ಮೃತಪಟ್ಟಿದ್ದಾರೆ.

ಕೆಆರ್​​ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಜಲಸಮಾಧಿ

ಮೈಸೂರು ತಾಲೂಕಿನ ಮೀನಾಕ್ಷಿಪುರ ಬಳಿಯ ಕೆಆರ್​ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಕೆಆರ್​ಎಸ್ ಹಿನ್ನೀರಿನ ಪ್ರದೇಶ ಮೋಜು ಮಸ್ತಿಗೆ ಕುಖ್ಯಾತಿ ಪಡೆದಿದೆ. ಸಮುದ್ರದಂತೆಯೇ ಕಾವೇರಿ ಹಿನ್ನೀರಿನಲ್ಲಿ ಅಲೆಗಳು ಬರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಭಾನುವಾರ ಮೋಜು ಮಸ್ತಿಗೆಂದು ಬಂದಿದ್ದ ಮಂಡ್ಯ ನರ್ಸಿಂಗ್ ಕಾಲೇಜಿನ ಪ್ರಶಾಂತ್, ಸಿದ್ದೇಶ್, ಕೃಷ್ಣ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಅಬ್ಬಿ ಫಾಲ್ಸ್ ಬಳಿ ಪೋಸ್ ಕೊಡುತ್ತಿದ್ದವ ನೀರುಪಾಲು

ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಪ್ರವಾಸಿಗ ಬೆಂಗಳೂರು ಮೂಲದ ರಮೇಶ್ ನೀರುಪಾಲಾಗಿದ್ದಾರೆ. ಫಾಲ್ಸ್ ಮುಂದೆ ಫೋಟೊಗೆ ಪೋಸ್ ಕೊಡುವಾಗಲೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ
ಮಳೆ ಅವಾಂತರ: ಕಾರಿನ ಮೇಲೆ ಮರ ಬಿದ್ದು ಅತ್ತೆ ಸಾವು, ಸೊಸೆ ಪಾರು
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಮೈಸೂರು: ಪ್ರವಾಸಕ್ಕೆ ಬಂದಿದ್ದ ಮೂವರು ನರ್ಸಿಂಗ್​ ವಿದ್ಯಾರ್ಥಿಗಳು ನೀರುಪಾಲು
ರೌದ್ರಾವತಾರ ತಾಳಿದ ಅರೆಬೈಲ್ ಫಾಲ್ಸ್ ಮಧ್ಯದಲ್ಲಿ ಸಿಲುಕಿದ ಪ್ರವಾಸಿಗರು

ಬಂಟ್ವಾಳ ತಾಲೂಕಿನ ಮಾಣಿ ಬಳಿ ಗುಡ್ಡ ಕುಸಿತ

ದಕ್ಷಿಣ ಕನ್ನಡದಲ್ಲೂ ಮಳೆ ಆರ್ಭಟ ಮುಂದುವರೆದಿದೆ. ಬಂಟ್ವಾಳ ತಾಲೂಕಿನ ಮಾಣಿಯ ಪೇರಮೊಗೇರು ಬಳಿ ಗುಡ್ಡ ಕುಸಿದಿದೆ. ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟದ ಮೇಲಿರುವ ಮನೆಗಳು ಕುಸಿಯುವ ಆತಂಕ ಎದುರಾಗಿದೆ.

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರ ಪರಿಣಾಮ ನೀರು ಹೊರ ಹೋಗಲು ಜಾಗವಿಲ್ಲದೆ, ಪಂಪ್​ವೆಲ್ ಬಳಿಯ ಪ್ರದೇಶಗಳು ಜಲಾವೃತಗೊಂಡಿವೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು 2 ಬೈಕ್, ಕಾರೊಂದು ಜಖಂಗೊಂಡಿದೆ. ಈ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಅವಣಿಕಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಮಕ್ಕಳು, ಗ್ರಾಮಸ್ಥರು ಪರದಾಡುವಂತಾಗಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಅಡವಿಖಾನಾಪುರದಲ್ಲೂ ಹಳ್ಳ ಭೋರ್ಗರೆಯುತ್ತಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ನೂರಾರು ಎಕರೆ ಬೆಳೆಗಳನ್ನು ಮಳೆ ನೀರು ನುಂಗಿ ಹಾಕಿದೆ. ವಡಗೇರ ತಾಲೂಕಿನ ಗುರಸಣಗಿ ಸೇರಿ ಹತ್ತಾರು ಗ್ರಾಮದಲ್ಲಿ ಭತ್ತ, ಹತ್ತಿ, ತೊಗರಿ ಹಾಗೂ ಹೆಸರು ಬೆಳೆಗಳು ಜಲಾವೃತವಾಗಿವೆ.

ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ 2 ದಿನ ಆರೆಂಜ್ ಅಲರ್ಟ್ ಘೋಷಣೆ ಆಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ