ಕೊನೆಗೂ ಮುನಿಸು ಮರೆತು ಒಂದಾದ ಜನಾರ್ದನ ರೆಡ್ಡಿ, ಶ್ರೀರಾಮುಲು: ಇಬ್ಬರು ನಾಯಕರು ಹೇಳಿದ್ದಿಷ್ಟು
ರಾಜ್ಯ ರಾಜಕಾರಣಲ್ಲಿ ಒಂದು ಕಾಲದಲ್ಲಿ ಕುಚಿಕು ಗೆಳೆಯಯಾರಾಗಿದ್ದ ನಾಯಕರು ಕೆಲ ದಿನಗಳ ಹಿಂದೆ ದೂರಾಗಿದ್ದರು. ಆದರೆ ಇದೀಗ ಮತ್ತೆ ವೈಮನಸ್ಸು ಮರೆತು ಒಂದಾಗಿದ್ದಾರೆ. ಇಬ್ಬರು ನಾಯಕರನ್ನ ಕೈ ಹಿಡಿದು ರಾಜ್ಯಾಧ್ಯಕ್ಷರು ಮೇಲೆತ್ತಿದ್ದು ನೋಡಿದರೆ ಸಭೆಯ ಉದ್ದೇಶ ಸ್ಪಷ್ಟವಾಗಿತ್ತು. ಹಾಗಾದರೆ ವೈಮನಸ್ಸು ಮರೆತು ಒಂದಾದ ನಾಯಕರು ಯಾರು ಗೊತ್ತಾ?

ಕೊಪ್ಪಳ, ಜುಲೈ 20: ಜನಾರ್ದನ ರೆಡ್ಡಿ (Janardhana Reddy), ಬಿ.ಶ್ರೀರಾಮುಲು (B Sriramulu) ಒಂದು ಕಾಲದಲ್ಲಿ ಬಳ್ಳಾರಿಯ ಈ ನಾಯಕರು ಬಿಜೆಪಿಯ ಪವರ್ ಸೆಂಟರ್ಗಳಾಗಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ, ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಕಳೆದ ಹಲವು ವರ್ಷಗಳಿಂದ ದೂರ ದೂರವೇ ಇದ್ದರು. ಇಬ್ಬರೂ ಆಗೊಮ್ಮೆ ಈಗೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ ಮುನಿಸು ಮರೆಯಾಗಿರಲಿಲ್ಲ. ಇಂದು ಅಧಿಕೃತವಾಗಿ ಒಂದು ಗೂಡಿಸುವ ಯತ್ನ ಕೊಪ್ಪಳದಲ್ಲಿ ನಡೆಯಿತು.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಈ ನಾಲ್ಕು ಜಿಲ್ಲೆಗಳ ಸಂಘಟನಾ ಸಭೆ ಕೊಪ್ಪಳದಲ್ಲಿ ನಡೆದಿದೆ. ಆದರೆ ಇದು ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಒಂದು ಮಾಡಲು ಮಾಡಿದ ಸಭೆಯಂತಿತ್ತು. ಇಬ್ಬರಿಗೂ ಅಕ್ಕ ಪಕ್ಕದ ಆಸನಗಳನ್ನೇ ನೀಡಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಹ ರೆಡ್ಡಿ ಮತ್ತು ರಾಮುಲು ಕೈ ಎತ್ತುವ ಮೂಲಕ ಮತ್ತೆ ಹಳೇ ದಿನಗಳನ್ನ ಸ್ಮರಿಸುವಂತೆ ಮಾಡಿದರು.
ನಮ್ಮಿಬ್ಬರ ಮಧ್ಯೆ ಯಾರ ಮಧ್ಯಸ್ಥಿಕೆ ಬೇಡ: ಶಾಸಕ ಜನಾರ್ದನ ರೆಡ್ಡಿ
ಸಭೆಯಲ್ಲಿ ಮಾತನಾಡಿ ಶಾಸಕ ಜನಾರ್ದನ ರೆಡ್ಡಿ, ನನ್ನ ರಾಮುಲು ಮದ್ಯೆ ಏನಿಲ್ಲ,ನಾವಿಬ್ಬರೂ ಜೀವದ ಗೆಳೆಯರು. ನಮ್ಮಿಬ್ಬರ ಮಧ್ಯೆ ಯಾರ ಮಧ್ಯಸ್ಥಿಕೆ ಬೇಡ. ಮಧ್ಯಸ್ಥಿಕೆ ಮಾಡುತ್ತೇವೆ ಅನ್ನೋದು ಮೂರ್ಖತನ. ಜಗಳದಿಂದ ಲಾಭ ಮಾಡಿಕೊಳ್ಳವವರು ಮತ್ತು ಸರಿ ಮಾಡುತ್ತೇನೆ ಎನ್ನುವವರು ಮೂರ್ಖರು. ಅರ್ಧ ಗ್ಲಾಸ್ ನೀರು ಕುಡಿ ಯುವುದರಲ್ಲಿ ಸರಿ ಆಗತ್ತೆ. ಅದೊಂದು ಕೆಟ್ಟ ಘಳಿಗೆ. ನಾನು, ರಾಮುಲು ಮತ್ತು ವಿಜಯೇಂದ್ರ ಓಡಾಡಿ ನಮ್ಮ ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದರು.
ನಾನು, ಜನಾರ್ದನರೆಡ್ಡಿ ಮತ್ತೆ ಒಂದಾಗಿದ್ದೇವೆ: ಶ್ರೀರಾಮುಲು
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಪಕ್ಷದ ವಿಚಾರ ಬಂದಾಗ ನಾವು ಒಂದಾಗಬೇಕು. ಬೇರೆಯವರಿಗೆ ನೀತಿ ಹೇಳುವವರು, ನಾವು ಒಗ್ಗಟ್ಟಾಗಿರಬೇಕು. ಶಾಸಕ ಜನಾರ್ದನರೆಡ್ಡಿ ಜತೆ ನನಗೆ ಯಾವುದೇ ಜಗಳ ಇಲ್ಲ. ನಾನು, ಜನಾರ್ದನರೆಡ್ಡಿ ಮತ್ತೆ ಒಂದಾಗಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತುಳುನಾಡಿನ ದೈವದ ನುಡಿಗೆ ತಲೆಬಾಗಿದ ಶಾಸಕ ಗಾಲಿ ಜನಾರ್ದನ ರೆಡ್ಡಿ
ಇಷ್ಟೆಲ್ಲಾ ಆದ ಮೇಲೆ ರಾಮುಲು ಆಡಿದ ಅದೊಂದು ಮಾತು, ಇನ್ನೂ ಮುನಿಸು ತಣ್ಣಗಾಗಿಲ್ವಾ ಅನ್ನೋ ಪ್ರಶ್ನೆ ಹುಟ್ಟಿಸಿತ್ತು. ಏಕೆಂದರೆ ರೆಡ್ಡಿ, ರಾಮುಲು ಒಂದಾದರೆ ಎಲ್ಲ ಒಂದಾದಂತೆ ಅಲ್ಲ. ಯತ್ನಾಳ್, ಅರವಿಂದ್ ಲಿಂಬಾವಳಿ ಒಂದಾಗಬೇಕು ಅಂತಾ ಹೇಳಿ ಕುತೂಹಲ ಮೂಡಿಸಿದ್ದಾರೆ.
ಇಲ್ಲಿ ಹೀಗೆ ಎಲ್ಲರೂ ಒಂದಾಗಬೇಕು ಅಂತಾ ರಾಮುಲು ಹೇಳ್ತಿರುವಾಗಲೇ ಅತ್ತ ಬಿಜೆಪಿಯ ರೆಬೆಲ್ಸ್ ತಂಡ ದೆಹಲಿ ಯಾತ್ರೆ ಕೈಗೊಳ್ತಿದೆ. ಕಳೆದವಾರವಷ್ಟೇ ರೇಣುಕಾಚಾರ್ಯ ತಂಡ ದೆಹಲಿಗೆ ಹೋಗಿ ದೂರಿತ್ತು ಬಂದಿತ್ತು. ಇದೀಗ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿ ಪ್ರತ್ಯೇಕ ತಂಡದ ಸದಸ್ಯರು ದೆಹಲಿಯತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: Gali Janardhana Reddy: ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
ಈ ತಂಡದ ಮುಖ್ಯ ಅಜೆಂಡಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯಬಾರದು ಅನ್ನೋದಾಗಿದೆ. ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳ ಮಾಹಿತಿ ಸಲ್ಲಿಕೆ ನೆಪದಲ್ಲಿ ವಿಜಯೇಂದ್ರ ಬೆಂಬಲಿಗರ ವಿರುದ್ಧ ದೂರು ನೀಡಲು ಈ ತಂಡ ಮುಂದಾಗಿದೆ. ಹೀಗಾಗಿ ಬಿಜೆಪಿಯ ಈ ಬಣ ಬಡಿದಾಟ ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:39 pm, Sun, 20 July 25







