ಕಾರವಾರದಲ್ಲಿ ಮುಂದುವರಿದ ಮಳೆ ಅವಾಂತರ: ಕಾರಿನ ಮೇಲೆ ಮರ ಬಿದ್ದು ಅತ್ತೆ ಸಾವು, ಸೊಸೆ ಪಾರು
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಮಳೆಯಿಂದಾಗಿ ಒಂದು ದೊಡ್ಡ ಮರ ಕಾರಿನ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವಂತಹ ಘಟನೆ ಪಿಕಳೆ ಆಸ್ಪತ್ರೆಯ ಬಳಿ ನಡೆದಿದೆ. ಮತ್ತೋರ್ವ ಗರ್ಭಿಣಿ ಮಹಿಳೆ ಮತ್ತು ಕಾರು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಾರವಾರ, ಜುಲೈ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ (rain) ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದೀಗ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಅತ್ತೆ ಸಾವನ್ನಪ್ಪಿದ್ದು (death), 8 ತಿಂಗಳ ಗರ್ಭಿಣಿ ಮತ್ತು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿರುವಂತಹ ಘಟನೆ ಕಾರವಾರದ ಪಿಕಳೆ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮೀ ಪಾಗಿ ಮೃತ ಮಹಿಳೆ. ಸ್ಥಳಕ್ಕೆ ಹೆಚ್ಚುವರಿ ಡಿಸಿ ಮತ್ತು ನಗರಸಭೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
ಗರ್ಭಿಣಿ ಸೊಸೆ ಸುನಿತಾಗೆ ಜ್ವರ ಹಿನ್ನೆಲೆ ಅತ್ತೆ ಲಕ್ಷ್ಮೀ ಆಸ್ಪತ್ರೆಗೆ ಕರೆತಂದಿದ್ದಾರೆ. ಪಿಕಳೆ ಆಸ್ಪತ್ರೆ ಎದುರು ಮರದ ಕೆಳಗೆ ಚಾಲಕ ಕಾರು ನಿಲ್ಲಿಸಿದ್ದ. ಭಾರೀ ಮಳೆ ಹಿನ್ನಲೆ ಮರವೊಂದು ಧರೆಗುರುಳಿದೆ. ಮರ ಬೀಳುವುದನ್ನು ಗಮನಿಸಿದ ಸುನಿತಾ ಮತ್ತು ಚಾಲಕ ತಕ್ಷಣ ಕೆಳಗಿಳಿದಿದ್ದಾರೆ. ಆದರೆ ಡೋರ್ ತೆಗೆಯುವುದು ತಡವಾದರಿಂದ ಲಕ್ಷ್ಮೀ ಕಾರಿ ಒಳಗಡೆ ಸಿಲುಕಿದ್ದಾರೆ.
ಇದನ್ನೂ ಓದಿ: ಮುಗಿಯದ ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ: ಗುಡ್ಡ ಕುಸಿಯುವ ಭೀತಿ
ಲಕ್ಷ್ಮೀ ರಕ್ಷಣೆಗಾಗಿ ಕೂಡಲೇ ಸ್ಥಳೀಯರು ಮತ್ತು ನಗರಸಭೆ ಸಿಬ್ಬಂದಿ ಮುಂದಾಗಿ, ಹರಸಾಹಸ ಪಟ್ಟು ಲಕ್ಷ್ಮೀ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದ ಆಘಾತಕ್ಕೀಡಾಗಿರುವ 8 ತಿಂಗಳ ಗರ್ಭಿಣಿ ಸುನಿತಾ ಪಾಗಿಯನ್ನು ಪಿಕಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಏಕಾಏಕಿ ರೌದ್ರಾವತಾರ ತಾಳಿದ ಅರೆಬೈಲ್ ಫಾಲ್ಸ್ ಮಧ್ಯದಲ್ಲಿ ಸಿಲುಕಿದ ಪ್ರವಾಸಿಗರು: ರಕ್ಷಣೆಗೆ ರೋಚಕ ಕಾರ್ಯಾಚರಣೆ
ಇನ್ನು ಇತ್ತೀಚೆಗೆ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನಿರಂತರ ನೀರು ತುಂಬುತ್ತಿದ್ದು, ನಗರದ ಕೆ.ಹೆಚ್.ಬಿ ಕಾಲೂನಿ, ಗುನಗಿವಾಡ, ಸುಂಕ್ರಿವಾಡ, ರಾಘವೇಂದ್ರಸ್ವಾಮಿ ಮಠ ರಸ್ತೆ ಸೇರಿದಂತೆ ಹಲವು ಭಾಗದಲ್ಲಿ ನಿಂತ ನೀರು ಮನೆಗಳಿಗೆ ನುಗ್ಗಿದರೆ, ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇನ್ನು ಮಳೆಯಿಂದ ಈವರೆಗೆ ಆರು ಮನೆಗಳು ಸಂಪೂರ್ಣ ಹಾನಿಯಾದರೆ 158 ಮನೆಗಳು ಭಾಗಶಃ ಹಾನಿಯಾಗಿವೆ. ಜೂನ್ ತಿಂಗಳಿಂದ ಈವರೆಗೆ ಒಟ್ಟು 5 ಜೀವಗಳು ಬಲಿಯಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:31 pm, Sun, 20 July 25







