Karnataka Rains: ಕರಾವಳಿಯಲ್ಲಿ ಜೂನ್ 27ರ ವರೆಗೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಜೂನ್ 23 ರಿಂದ 27 ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ತಿಳಿಸಿದೆ .
ಬೆಂಗಳೂರು: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮಳೆ (Monsoon) ಮತ್ತೆ ಚುರುಕುಗೊಂಡಿದ್ದು ಜೂನ್ 23 ರಿಂದ 27 ರವರೆಗೆ ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 23 ರಿಂದ ಜೂನ್ 27 ರವರೆಗೆ 64.5 ಮಿ.ಮೀ ನಿಂದ 115.5 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಜೂನ್ 22 ರಿಂದ ಜೂನ್ 26 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 40-45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Karnataka Rains: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ
ಜೂನ್ 23 ರಿಂದ 27 ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಹಾಸನ, ಕೊಡಗು, ಕೋಲಾರ, ಮಂಡ್ಯ ಮತ್ತು ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಜೂನ್ 23, 26 ಮತ್ತು 27 ರಂದು ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 23 ರಂದು ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಮುಂಗಾರು ಚುರುಕು; ಬೆಂಗಳೂರಲ್ಲಿ ರಾತ್ರಿಯಿಂದಲೇ ವರಣನ ಆರ್ಭಟ ಜೋರು
ಜೂನ್ 23 ರಿಂದ ಜೂನ್ 27 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣಾ ಮಳೆಯಾಗಲಿದೆ. ಬಾಗಲಕೋಟೆ, ಧಾರವಾಡ, ಗದಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೆಲವು ದಿನಗಳ ಕಾಲ ಒಣಹವೆ ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬುಧವಾರ ಬೆಳಿಗ್ಗೆ 8.30 ರಿಂದ ಗುರುವಾರ ಬೆಳಿಗ್ಗೆ 8.30 ರವರೆಗೆ ಮಂಡ್ಯದಲ್ಲಿ 46.3 ಮಿ.ಮೀ ಮಳೆಯಾಗಿದೆ. ಮಡಿಕೇರಿಯಲ್ಲಿ 29.5 ಮಿ.ಮೀ ಮತ್ತು ಹಾಸನದಲ್ಲಿ 23.6 ಮಿ.ಮೀ ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.